ಲೋಕಾಯುಕ್ತ ಎಸ್ಪಿ ಹೆಸರಲ್ಲಿ ನಕಲಿ ಪತ್ರ ; ನಿವೃತ್ತ ಡಿವೈಎಸ್ಪಿ ಕೃಷ್ಣಮೂರ್ತಿ ಅತ್ತೆ, ನಾದಿನಿಗೆ ಜಾಮೀನು

loka
Published on

ತುಮಕೂರು: ಮುಟ್ಟುಗೋಲು ಹಾಕಿಕೊಂಡಿದ್ದ ಬ್ಯಾಂಕ್ ಖಾತೆಯನ್ನು ಚಾಲ್ತಿ ಮಾಡುವಂತೆ ಲೋಕಾಯುಕ್ತ ಎಸ್ಪಿ ಹೆಸರಲ್ಲಿ ನಕಲಿ ಪತ್ರ ಬರೆದಿರುವ ಕುತೂಹಲ ಪ್ರಕರಣವೊಂದು ಬೆಳಕಿಗೆ ಬಂದಿದೆ.

2008ರಲ್ಲಿ ಕರ್ತವ್ಯದಲ್ಲಿದ್ದಾಗ ಅಕ್ರಮ ಆಸ್ತಿ ಸಂಪಾದನೆ ಸಂಬಂಧ ನಿವೃತ್ತ ಡಿವೈಎಸ್ಪಿ ಕೃಷ್ಣಮೂರ್ತಿ ಮನೆ ಮೇಲೆ ನಡೆದಿದ್ದ ಲೋಕಾಯುಕ್ತ ದಾಳಿ ವೇಳೆ ಮುಟ್ಟುಗೋಲು ಹಾಕಿಕೊಂಡಿದ್ದ ಎರಡು ಬ್ಯಾಂಕ್ ಖಾತೆಗಳಿಗೆ ಚಾಲ್ತಿ ನೀಡುವಂತೆ ಲೋಕಾಯುಕ್ತ ಎಸ್ಪಿ ಹೆಸರಲ್ಲಿ ಪತ್ರ ಬರೆಯಲಾಗಿತ್ತು. ಇದು ನಕಲಿ ಪತ್ರವಾಗಿದ್ದು ನಗರ ಠಾಣೆಯಲ್ಲಿ ಲೋಕಾಯುಕ್ತ ಎಸ್ಪಿ ದೂರು ದಾಖಲಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಕೃಷ್ಣಮೂರ್ತಿ ಅತ್ತೆ ಜಯಲಕ್ಷ್ಮಮ್ಮ ಹಾಗೂ ನಾದಿನಿ ಎಂ.ಆರ್.ಸ್ವಯಂಪ್ರಭ ಅವರು 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು, ಡಿ.30ರಂದು ನ್ಯಾಯಾಲಯವು ಷರತ್ತುಬದ್ಧ ಜಾಮೀನು ನೀಡಿದೆ.

ಕುತೂಹಲಕಾರಿ ಪ್ರಕರಣ: ನಿವೃತ್ತ ಡಿವೈಎಸ್ಪಿ ಕೃಷ್ಣಮೂರ್ತಿ ಅಕ್ರಮ ಆಸ್ತಿ ಸಂಪಾದನೆ ಪ್ರಕರಣದ ವಿಚಾರಣೆಯು ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ನಡೆಯುತ್ತಿದ್ದು, 3 ತಿಂಗಳ ಹಿಂದಷ್ಟೇ ಮುಟ್ಟುಗೋಲು ಹಾಕಿಕೊಂಡಿದ್ದ ಅವರ ಅತ್ತೆ ಹಾಗೂ ನಾದಿನಿ ಹೆಸರಿನಲ್ಲಿದ್ದ ಬ್ಯಾಂಕ್ ಖಾತೆಗಳಿಗೆ ಚಾಲ್ತಿ ನೀಡುವಂತೆ ಬ್ಯಾಂಕ್‌ಗೆ ಲೋಕಾಯುಕ್ತ ಎಸ್ಪಿ ಹೆಸರಲ್ಲಿ ಪತ್ರ ಬಂದಿತ್ತು. ಈ ಸಂಬಂಧ ಬ್ಯಾಂಕ್ ಅಧಿಕಾರಿಗಳು ಮಾಹಿತಿಗಾಗಿ ಲೋಕಾಯುಕ್ತ ಎಸ್ಪಿ ಅವರನ್ನು ಸಂಪರ್ಕಿಸಿದಾಗ ಅಂತಹ ಯಾವುದೇ ಪತ್ರ ಬರೆದಿಲ್ಲವೆಂದು ಸ್ಪಷ್ಟಪಡಿಸಿದ್ದರು. ಇದು ಲೋಕಾಯುಕ್ತ ಎಸ್ಪಿ ಅವರನ್ನೇ ದಿಗ್ಭ್ರಮೆಗೊಳಿಸಿತ್ತು.

ಲೋಕಾಯುಕ್ತ ಕಚೇರಿ ಸೀಲು, ಸಹಿಯುಳ್ಳ ಪತ್ರವನ್ನು ಬ್ಯಾಂಕ್‌ಗೆ ಬರೆಯಲಾಗಿದ್ದು, ಇದು ನಕಲಿ ಪತ್ರವಾಗಿರುವುದರಿಂದ ತನಿಖೆ ನಡೆಸುವಂತೆ ಲೋಕಾಯುಕ್ತ ಎಸ್ಪಿ ಅವರೇ ಖುದ್ದು ನಗರ ಠಾಣೆಗೆ ದೂರು ನೀಡಿದ್ದರು. ಈ ಕ್ರಿಮಿನಲ್ ಮೊಕದ್ದಮೆ ಸಂಬಂಧ ನಗರ ಠಾಣೆ ಡಿವೈಎಸ್ಪಿ ತಿಪ್ಪೇಸ್ವಾಮಿ ಅವರು ಜಯಲಕ್ಷ್ಮಮ್ಮ ಹಾಗೂ ಎಂ.ಆರ್.ಸ್ವಯಂಪ್ರಭ ಅವರನ್ನು ಗುಮಾನಿತ ಆರೋಪಿಗಳೆಂದು ಪರಿಗಣಿಸಿ ಎಫ್‌ಐಆರ್ ದಾಖಲಿಸಿಕೊಂಡಿದ್ದರು. ಕ್ರಿಮಿನಲ್ ಮೊಕದ್ದಮೆ ದಾಖಲಾಗುತ್ತಿದ್ದಂತೆ ಜಯಲಕ್ಷ್ಮಮ್ಮ ಹಾಗೂ ಸ್ವಯಂಪ್ರಭ ತಲೆಮರೆಸಿಕೊಂಡಿದ್ದರು.

ಷರತ್ತುಬದ್ಧ ಜಾಮೀನು: ನಕಲಿ ಸಹಿ ಪ್ರಕರಣಕ್ಕೆ ಸಂಬಂಧಿಸಿದಂತೆ 77 ವರ್ಷದ ಜಯಲಕ್ಷ್ಮಮ್ಮ ಹಾಗೂ 64 ವರ್ಷದ ಸ್ವಯಂಪ್ರಭ ಅವರ ಆರೋಗ್ಯ ಸ್ಥಿತಿ ಗಮನದಲ್ಲಿಟ್ಟುಕೊಂಡು 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಜಿ.ಎಸ್.ದೇಶಪಾಂಡೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಸಂದರ್ಭದಲ್ಲಿ ತನಿಖಾಧಿಕಾರಿಗಳಿಗೆ ಸಹಕರಿಸುವಂತೆ, ಅಲ್ಲದೆ ನ್ಯಾಯಾಲಯದ ಒಪ್ಪಿಗೆಯಿಲ್ಲದೆ ದೇಶಬಿಡುವಂತಿಲ್ಲವೆಂದೂ ಸಹ ನ್ಯಾಯಾಲಯ ಸೂಚನೆ ನೀಡಿದೆ. ಬೇನಾಮಿ ಖಾತೆಗಳ ಚಾಲ್ತಿಗೆ ಲೋಕಾಯುಕ್ತ ಎಸ್ಪಿ ಹೆಸರಲ್ಲಿ ನಕಲಿ ಪತ್ರ ಬರೆದಿರುವ ಪ್ರಕರಣದ ಸತ್ಯಾಸತ್ಯತೆ ಇನ್ನೂ ಹೊರಬೀಳಬೇಕಿದೆ.

ಲೋಕಾಯುಕ್ತ ಎಸ್ಪಿ ಹೆಸರಲ್ಲಿ ಬ್ಯಾಂಕ್‌ಗೆ ಬರೆದಿರುವ ನಕಲಿ ಪತ್ರದ ಸಹಿ ಮಾದರಿಯನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಬ್ಯಾಂಕ್ ಖಾತೆಯಿಂದ ಯಾರಿಗೆ ಲಾಭವಾಗಲಿದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಗುಮಾನಿತ ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. ಈ ಪ್ರಕರಣದ ವಿಚಾರಣೆ ನಡೆಸಲಾಗುವುದು. ತಿಪ್ಪೇಸ್ವಾಮಿ ಡಿವೈಎಸ್ಪಿ, ನಗರಠಾಣೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net