

ರಾಯಬಾಗ: ಇಲ್ಲಿನ ರೈಲ್ವೆ ಸ್ಟೇಶನ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಚಿಕ್ಕೋಡಿ ಮತ್ತು ರಾಯಬಾಗ ನಡುವೆ ನಿರ್ಮಿಸಿದ ಜೋಡಿ ರೈಲು ಮಾರ್ಗ ಹಾಗೂ ರಾಯಬಾಗ ರೈಲು ನಿಲ್ದಾಣದ ಕಟ್ಟಡವನ್ನು ಭಾನುವಾರ ವಿಡಿಯೋ ಲಿಂಕ್ ಮೂಲಕ ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಲೋಕಾರ್ಪಣೆ ಮಾಡಿದರು.
ಬಳಿಕ ಮಾತನಾಡಿದ ಅವರು, ಲೋಂಡಾ-ಮಿರಜ್ ನಡುವಿನ 186 ಕಿ.ಮೀ. ಉದ್ದದ ಜೋಡಿ ರೈಲು ಮಾರ್ಗವನ್ನು ಮಾರ್ಚ್ 2023ರಲ್ಲಿ ಪೂರ್ಣಗೊಳಿಸಲಾಗುವುದು. ನಿರ್ಮಾಣದ ಬಳಿಕ ಈ ಭಾಗ ಹೆಚ್ಚು ಅಭಿವೃದ್ಧಿ ಹೊಂದಲಿದೆ.
ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಕರ್ನಾಟಕದಲ್ಲಿ 6 ವರ್ಷಗಳಲ್ಲಿ 331 ಕಿ.ಮೀ. ಹೊಸ ಮಾರ್ಗ ನಿರ್ಮಿಸಲಾಗಿದೆ ಎಂದರು.
ದಿ.ಅಂಗಡಿ ನೆನಪು: ಭಾರತೀಯ ರೈಲ್ವೆಯು ಬರುವ ಎರಡೂವರೆ ವರ್ಷದಲ್ಲಿ ಕರ್ನಾಟಕದ ಎಲ್ಲ ರೈಲ್ವೆ ಮಾರ್ಗವನ್ನು ವಿದ್ಯುತೀಕರಣ ಮಾಡಲು ಯೋಜನೆ ರೂಪಿಸಿದೆ ಎಂದರು. ಇದೇ ವೇಳೆ ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ದಿ. ಸುರೇಶ ಅಂಗಡಿ ಅವರನ್ನು ನೆನಪಿಸಿಕೊಂಡು, ಅವರು ಕರ್ನಾಟಕದಲ್ಲಿ ಜಾರಿಗೆ ತಂದ ರೈಲ್ವೆ ಯೋಜನೆಗಳ ಬಗ್ಗೆ ಮೆಲಕು ಹಾಕಿದರು.
ರೈತರಿಗೆ ಅನುಕೂಲ: ವಿಧಾನ ಪರಿಷತ್ ಆಡಳಿತ ಪಕ್ಷದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಮಾತನಾಡಿ, ಸುಮಾರು 750 ಕಿ.ಮೀ. ಉದ್ದದ ಬೆಂಗಳೂರು-ಮಿರಜ್ ಜೋಡಿ ಮಾರ್ಗವನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿ ಸುವುದಾಗಿ ಹೇಳಿದ ಕೇಂದ್ರ ರೈಲ್ವೆ ಸಚಿವರಿಗೆ ಕೃತಜ್ಞತೆ ಸಲ್ಲಿಸಿದರು. ರಾಯಬಾಗ, ಅಥಣಿ, ಗೋಕಾಕ ಮತ್ತು ಬೆಳಗಾವಿಯಲ್ಲಿ ರೈತರು ಬೆಳೆಯುವ ಬೆಳೆಗಳನ್ನು ಗೋವಾ ರಾಜ್ಯಕ್ಕೆ ರವಾನಿಸಲು ಈ ಜೋಡಿ ರೈಲ್ವೆ ಮಾರ್ಗ ಅನುಕೂಲವಾಗಲಿದೆ. ಬೆಳಗಾವಿ, ಬಾಗಲಕೋಟೆ, ವಿಜಯಪುರ ಸಕ್ಕರೆ ಕಾರ್ಖಾನೆಗಳು ಉತ್ಪಾದಿಸುವ ಸಕ್ಕರೆಯನ್ನು ವಿದೇಶಗಳಿಗೆ ಸಾಗಿಸಲು ಹಾಗೂ ವಿವಿಧ ರಾಜ್ಯಗಳಿಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಇನ್ನಷ್ಟು ಪ್ರಯೋಜನವಾಗಲಿದೆ ಎಂದರು.
ಮನವಿ: ದಾದರ-ಪುದುಚೇರಿ, ದಾದರ-ತಿರುನೆಲ್ವೇಲಿ ಹಾಗೂ ದಾದರ-ಮೈಸೂರು ರೈಲುಗಳನ್ನು ರಾಯಬಾಗ ರೈಲ್ವೆ ಸ್ಟೇಶನ್‌ಗೆ ನಿಲುಗಡೆ ಮಾಡಬೇಕು ಎಂದು ನಾಗರಿಕರು ರೈಲ್ವೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಶಾಸಕ ಡಿ.ಎಂ. ಐಹೊಳೆ, ರೈಲ್ವೆ ಅಧಿಕಾರಿಗಳಾದ ಜೋಗೇಂದ್ರ ವಿ., ವಿಷ್ಣು ಭೂಷಣ, ಜೈದೀಪ ಪವಾರ, ಅರವಿಂದ ಎಚ್.ಜಿ. ವೇದಿಕೆಯಲ್ಲಿದ್ದರು. ಕಾರ್ಯಕ್ರಮದಲ್ಲಿ ವಸಂತ ಹೊಸಮನಿ, ಅಣ್ಣಾಸಾಹೇಬ ಕುಲಗುಡೆ, ನಾರಾಯಣ ಮೇತ್ರಿ, ಸುರೇಶ ಕುಂಬಾರ, ಅಣ್ಣಾಸಾಹೇಬ ಹೊನಕುಪ್ಪೆ ಇತರರಿದ್ದರು.