ರಸ್ತೆ ಇಕ್ಕೆಲವೇ ಡಂಪಿಂಗ್‌ಯಾರ್ಡ್

gan
Published on

ರಾಘವೇಂದ್ರ ಪೈ ಗಂಗೊಳ್ಳಿ

ಗಂಗೊಳ್ಳಿ ಗ್ರಾಮದ ಮೀನುಗಾರಿಕೆ ಬಂದರಿಗೆ ಸಂಪರ್ಕ ಕಲ್ಪಿಸುವ ರಸ್ತೆ (ಚರ್ಚ್ ರೋಡ್) ಈಗ ಕಸ ವಿಲೇವಾರಿಯ ತಾಣವಾಗಿ ಮಾರ್ಪಟ್ಟಿದ್ದು, ದುರ್ವಾಸನೆಯಿಂದ ಕೂಡಿದೆ. ನಿತ್ಯವೂ ಈ ಮಾರ್ಗದಲ್ಲಿ ಸಂಚರಿಸುವ ಗ್ರಾಮಸ್ಥರು ಹಾಗೂ ಬೇರೆಡೆಗಳಿಂದ ಆಗಮಿಸುವ ಮೀನುಗಾರರಿಗೆ ಇದೇ ಪ್ರಮುಖ ಸಮಸ್ಯೆಯಾಗಿದೆ.

ಚರ್ಚ್ ರೋಡ್‌ನ ಇಕ್ಕೆಲಗಳಲ್ಲಿ ಬಿದ್ದಿರುವ ರಾಶಿ ರಾಶಿ ತ್ಯಾಜ್ಯವನ್ನು ವಿಲೇವಾರಿ ಮಾಡುವುದೇ ಸ್ಥಳೀಯಾಡಳಿತಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಗ್ರಾಮಸ್ಥರು ಮಾತ್ರವಲ್ಲದೆ ಬೇರೆ ಕಡೆಯಿಂದಲೂ ಜನರು ಆಗಮಿಸಿ ಇಲ್ಲಿ ಕಸ ಸುರಿಯುತ್ತಿದ್ದಾರೆ. ಸಿಸಿ ಕ್ಯಾಮರಾ ಹಾಗೂ ಗಸ್ತು ಇಲ್ಲದಿರುವ ಕಾರಣ ಮಧ್ಯರಾತ್ರಿ ಅಥವಾ ಮುಂಜಾನೆ ವೇಳೆ ಕಸ ಸುರಿದು ಹೋಗುವವರೇ ಹೆಚ್ಚು.

ಗಂಗೊಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ಈಗಾಗಲೇ ಸಾಕಷ್ಟು ಬಾರಿ ಚರ್ಚ್‌ರೋಡ್ ಸ್ವಚ್ಛಗೊಳಿಸಿದ್ದರೂ ತ್ಯಾಜ್ಯ ಸುರಿಯುವವರ ಸಂಖ್ಯೆ ಮತ್ತಷ್ಟು ಹೆಚ್ಚುತ್ತಿದೆ. ಎಚ್ಚರಿಕೆಯ ಸೂಚನಾ ಫಲಕಗಳನ್ನು ಅಳವಡಿಸಿದ್ದರೂ ರಸ್ತೆಯ ಎರಡೂ ಬದಿ ಕಸ ತುಂಬುತ್ತಲೇ ಇರುವುದು ಸ್ಥಳೀಯ ಆಡಳಿತಕ್ಕೆ ತಲೆನೋವಾಗಿದೆ. ಮಳೆಗಾಲವೂ ಸಮೀಸುತ್ತಿರುವುದರಿಂದ ಗಂಗೊಳ್ಳಿ ಗ್ರಾಮಸ್ಥರಲ್ಲಿ ಸಾಂಕ್ರಾಮಿಕ ರೋಗ ಭೀತಿ ಶುರುವಾಗಿದೆ. ಸ್ಥಳದಲ್ಲಿ ಸಿಸಿ ಕ್ಯಾಮರಾ ಅಳವಡಿಸಬೇಕಿದ್ದು, ಕಸ ಸುರಿಯುವವರನ್ನು ಪತ್ತೆ ಮಾಡಿ ದಂಡ ವಿಧಿಸುವುದು ಸಹಿತ ಕಠಿಣ ಕ್ರಮಕೈಗೊಳ್ಳಬೇಕು ಎಂದು ಗ್ರಾಮಸ್ಥರು ಸ್ಥಳೀಯಾಡಳಿತವನ್ನು ಒತ್ತಾಯಿಸಿದ್ದಾರೆ.

ಎಸ್‌ಎಲ್‌ಆರ್‌ಎಂ ಘಟಕವಿದ್ದೂ ವ್ಯರ್ಥ

ಗಂಗೊಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎಸ್‌ಎಲ್‌ಆರ್‌ಎಂ ಘಟಕ ಕಾರ್ಯಾಚರಿಸುತ್ತಿದ್ದರೂ, ಜನರು ತ್ಯಾಜ್ಯವನ್ನು ಸಾರ್ವಜನಿಕ ಸ್ಥಳಗಳಲ್ಲಿ, ರಸ್ತೆ ಬದಿಯಲ್ಲಿ ಎಸೆಯುತ್ತಿರುವುದು ಸ್ಥಳೀಯಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ. ಎಸ್‌ಎಲ್‌ಆರ್‌ಎಂ ಘಟಕ ಪಕ್ಕದ ರಸ್ತೆಯ ಎರಡೂ ಬದಿಯಲ್ಲಿ ತ್ಯಾಜ್ಯದ ರಾಶಿ ಸಂಗ್ರಹಗೊಂಡಿದ್ದು, ಎಸ್‌ಎಲ್‌ಆರಂಎಂ ಘಟಕ ಹಾಗೂ ಗಂಗೊಳ್ಳಿ ಗ್ರಾಪಂಗೇ ಸವಾಲು ಹಾಕುವಂತಿದೆ.

ಚರ್ಚ್ ರಸ್ತೆಯ ಬದಿಗಳಲ್ಲಿ ತ್ಯಾಜ್ಯ ಎಸೆಯದಂತೆ ಸಾರ್ವಜನಿಕರಿಗೆ ಸೂಚನೆ ನೀಡಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಎಸೆಯುವುದನ್ನು ತಡೆಯಲು ಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ, ಸೂಚನಾ ಫಲಕ ಅಳವಡಿಕೆ ಸಹಿತ ಅಗತ್ಯ ಕ್ರಮ ಕೈಗೊಳ್ಳಲಾಗುವುದು.

ಜಯಂತಿ ಖಾರ್ವಿ, ಅಧ್ಯಕ್ಷೆ, ಗಂಗೊಳ್ಳಿ ಗ್ರಾಮ ಪಂಚಾಯಿತಿ

ಪಾಯಿಂಟ್ಸ್

* ಗಸ್ತು, ಸಿಸಿ ಕ್ಯಾಮರಾ ಇಲ್ಲದಿರುವುದು ಕಸೆ ಎಸೆಯುವವರಿಗೆ ವರದಾನ

*ಮಳೆಗಾಲ ಸಮೀಪಿಸುತ್ತಿದ್ದು ಸಾಂಕ್ರಾಮಿಕ ರೋಗ ಭೀತಿ

* ಸೂಚನಾ ಫಲಕಗಳಿಗೂ ಡೋಂಟ್‌ಕೇರ್ ಎನ್ನುವ ನಾಗರಿಕರು

*ದಂಡ ಸಹಿತ ಕಠಿಣ ಕ್ರಮಕೈಗೊಳ್ಳಲು ಹೆಚ್ಚಿದ ಒತ್ತಡ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net