ಮೂಗುತಿ, ಓಲೆಗಾಗಿ ವೃದ್ಧೆ ಕೊಲೆ, ಆರೋಪಿ ಸೆರೆ

17 smg 12
Published on

ಶಿವಮೊಗ್ಗ: ಬಂಗಾರದ ಕಿವಿ ಓಲೆ ಮತ್ತು ಮೂಗುತಿಗಾಗಿ ವೃದ್ಧೆ ಕೊಲೆ ಮಾಡಿದ್ದ ಆರೋಪಿಯನ್ನು ಭದ್ರಾವತಿ ಪೊಲೀಸರು ಶನಿವಾರ ಬಂಧಿಸಿದ್ದು ಆತನಿಂದ 14 ಸಾವಿರ ರೂ. ಮೌಲ್ಯದ ಒಂದು ಜತೆ ಕಿವಿ ಓಲೆ ಮತ್ತು ಮೂಗುತಿಯನ್ನು ಜಪ್ತಿ ಮಾಡಿದ್ದಾರೆ.

ಉಡುಪಿ ಜಿಲ್ಲೆ ಕುಂದಾಪುರ ಸಮೀಪದ ದುಗ್ಗದಮನೆ ನಿವಾಸಿ ಕರುಣಾಕರ ದೇವಾಡಿಗ (24) ಬಂಧಿತ ಆರೋಪಿ. ಈತ ಭದ್ರಾವತಿ ತಾಲೂಕಿನ ಸುಣ್ಣದಹಳ್ಳಿಯ ವೃದ್ಧೆ ಶಂಕ್ರಮ್ಮ (70) ಅವರನ್ನು ಡಿ.3ರಂದು ಅದೇ ಗ್ರಾಮದ ಶ್ರೀ ಆಂಜನೇಯ ದೇವಸ್ಥಾನದ ಎದುರಿನ ಅಂತರಘಟ್ಟಮ್ಮ ದೇವರ ಗುಡಿಯ ಕಂಪೌಂಡ್‌ನೊಳಗೆ ಉಸಿರುಗಟ್ಟಿಸಿ ಕೊಲೆ ಮಾಡಿದ್ದ.

ಶಂಕ್ರಮ್ಮ ಅವರು ಆಂಜನೇಯ ದೇವಸ್ಥಾನದ ಭಕ್ತಾದಿಗಳಿಂದ ಭಿಕ್ಷೆ ಭೇಡಿ ಜೀವನ ನಡೆಸುತ್ತಿದ್ದರು. ರಾತ್ರಿ ಅಂತರಘಟ್ಟಮ್ಮ ದೇವಸ್ಥಾನದ ಕಂಪೌಂಡ್‌ನೊಳಗೆ ಮಲಗುತ್ತಿದ್ದರು. ಈ ವೇಳೆ ವೃದ್ಧೆ ಧರಿಸಿದ್ದ ಬಂಗಾರದ ಕಿವಿ ಓಲೆ ಮತ್ತು ಮೂಗುತಿ ಮೇಲೆ ಕರುಣಾಕರನ ಕಣ್ಣು ಬಿದ್ದಿತ್ತು.

ವೃದ್ಧೆಯ ಉಸಿರುಗಟ್ಟಿಸಿ ಕೊಲೆ ಮಾಡಿ ಓಲೆ ಮತ್ತು ಮೂಗುತಿ ಕಿತ್ತು ಪರಾರಿಯಾಗಿದ್ದ. ಆರೋಪಿ ಪತ್ತೆಗೆ ಭದ್ರಾವತಿ ಎಎಸ್ಪಿ ಜಿತೇಂದ್ರಕುಮಾರ ದಯಾಮ ಅವರ ಮೇಲ್ವಿಚಾರಣೆಯಲ್ಲಿ ಪೇಪರ್ ಟೌನ್ ಠಾಣೆ ಇನ್‌ಸ್ಪೆಕ್ಟರ್ ಈ.ಒ.ಮಂಜುನಾಥ ಅವರ ನೇತೃತ್ವದಲ್ಲಿ ಪಿಎಸ್‌ಐ ಶಿಲ್ಪಾ ನಾಯನೇಗಲಿ ಮತ್ತು ಸಿಬ್ಬಂದಿಗಳಾದ ರತ್ನಾಕರ, ವಾಸುದೇವ, ಚಿನ್ನ ನಾಯ್ಕ, ಹನಮಂತ ಅವಟಿ, ಆದರ್ಶ ಶೆಟ್ಟಿ, ಮೌನೇಶ ಶೀಖಲ್, ಆರ್.ಅರುಣ್, ವಿಕ್ರಮ್ ಅವರನ್ನೊಳಗೊಂಡ ತಂಡ ರಚಿಸಲಾಗಿತ್ತು.

ತನಿಖೆ ಕೈಗೊಂಡ ಪೊಲೀಸರು ಕರುಣಾಕರ ದೇವಾಡಿಗನನ್ನು ದುಗ್ಗದಮನೆಯಲ್ಲಿ ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಪೇಪರ್ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net