ಬಾಕಿ ತುಟ್ಟಿ ಭತ್ತೆ, ಕನಿಷ್ಠ ಕೂಲಿ ನೀಡಿ, ಬೀಡಿ ಕಾರ್ಮಿಕರಿಂದ ಮಂಗಳೂರಿನಲ್ಲಿ ಪ್ರತಿಭಟನೆ

beedi
ಬಾಕಿ ಇರುವ ತುಟ್ಟಿಭತ್ತೆ ಹಾಗೂ ಕನಿಷ್ಠ ಕೂಲಿ ನೀಡುವಂತೆ ಒತ್ತಾಯಿಸಿ ಮಂಗಳೂರು ಬೀಡಿ ಕೆಲಸಗಾರರ ಸಂಘ(ಸಿಐಟಿಯು)ಹಾಗೂ ಅಳಪೆ ಪ್ರದೇಶದ ಬೀಡಿ ಲೇಬರ್ ಯೂನಿಯನ್ ವತಿಯಿಂದ ಲಾಲ್‌ಬಾಗ್‌ನಲ್ಲಿ ಬೀಡಿ ಕಾರ್ಮಿಕರು ಪ್ರತಿಭಟನೆ ನಡೆಸಿದರು.
Published on

ಮಂಗಳೂರು: ಬೀಡಿ ಕಾರ್ಮಿಕರಿಗೆ 2015ರಿಂದ 2018ರವರೆಗೆ ಬಾಕಿ ಇರುವ ತುಟ್ಟಿಭತ್ತೆ, ಹಾಗೂ ಕನಿಷ್ಠ ಕೂಲಿ ನೀಡುವಂತೆ ಒತ್ತಾಯಿಸಿ ಮಂಗಳೂರು ಬೀಡಿ ಕೆಲಸಗಾರರ ಸಂಘ(ಸಿಐಟಿಯು) ಹಾಗೂ ಅಳಪೆ ಪ್ರದೇಶದ ಬೀಡಿ ಲೇಬರ್ ಯೂನಿಯನ್ ವತಿಯಿಂದ ಲಾಲ್‌ಬಾಗ್‌ನಲ್ಲಿ ಗುರುವಾರ ಬೀಡಿ ಕಾರ್ಮಿಕರು ಪ್ರತಿಭಟನೆ ನಡೆಸಿದರು.

ಜಿಲ್ಲಾ ಬೀಡಿ ಫೆಡರೇಶನ್ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಮಾತನಾಡಿ, ಬೀಡಿ ಕಾರ್ಮಿಕರ ಸಂಘಟಿತ ಹೋರಾಟದ ಪರಿಣಾಮ ಬೆಲೆ ಏರಿಕೆ ಸರಿದೂಗಿಸಲು ತುಟ್ಟಿಭತ್ತೆ ಸೌಲಭ್ಯ ಜಾರಿಗೆ ಬಂದಿದೆ. ಬೀಡಿ ಮಾಲೀಕರು ಇದರ ವಿರುದ್ಧ ತಡೆಯಾಜ್ಞೆ ತಂದಾಗ ಕಾನೂನು ಸಮರ ನಡೆಸಿ ನ್ಯಾಯಾಲಯದಲ್ಲಿ ಸರ್ಕಾರದ ಆದೇಶ ಎತ್ತಿ ಹಿಡಿಯಲಾಯಿತು. ಇದರಿಂದ ಬೀಡಿ ಕಾರ್ಮಿಕರಿಗೆ ಸಾವಿರ ಬೀಡಿಗೆ 12.75ರೂ.ನಂತೆ 2015ರ ಏಪ್ರಿಲ್ 1ರಿಂದ ನೀಡಬೇಕಾಗಿದೆ. ಮೂರು ವರ್ಷಗಳಿಂದ ತುಟ್ಟಿಭತ್ತೆ ಬಾಕಿ ಇದ್ದು, ಈಗ ಹೊಸ ಸರ್ಕಾರದಲ್ಲಿ ಮತ್ತೆ ಬೀಡಿ ಮಾಲೀಕರು ರಿಯಾಯಿತಿ ಕೇಳಿರುವುದು ಅನ್ಯಾಯದ ಪರಮಾವಧಿ ಎಂದರು.

ಫೆಡರೇಶನ್‌ನ ಅಧ್ಯಕ್ಷ ವಸಂತ ಆಚಾರಿ, ಸಿಐಟಿಯು ಮುಖಂಡ ಸುನೀಲ್ ಕುಮಾರ್ ಬಜಾಲ್, ಮಂಗಳೂರು ಬೀಡಿ ಕೆಲಸಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಭಾರತಿ ಬೋಳಾರ್, ಅಳಪೆ ಪ್ರದೇಶ ಬೀಡಿ ಲೇಬರ್ ಯೂನಿಯನ್ ಅಧ್ಯಕ್ಷೆ ಜಯಂತಿ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಜಯಲಕ್ಷ್ಮಿ ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net