ಬಾಕಿ ಕಾಮಗಾರಿ ಬೇಗ ಮುಗಿಸಲಿ

12SAVADATTI2
Published on

ಸವದತ್ತಿ: ವಿವಿಧ ಇಲಾಖೆಗಳಲ್ಲಿ ಆಗಿರುವ ಅಭಿವೃದ್ಧಿ, ಆಗಬೇಕಾಗಿರುವ ಕಾಮಗಾರಿಗಳು ಹಾಗೂ ವಿವಿಧ ಯೋಜನೆಗಳ ಪ್ರಗತಿ ಕುರಿತಾಗಿ ಸಮಗ್ರ ಮಾಹಿತಿ ಸಲ್ಲಿಸುವಂತೆ ಕಳೆದ ಸಭೆಯಲ್ಲಿ ಸೂಚಿಸಿದರೂ ಕೆಲ ಇಲಾಖೆಗಳಿಂದ ಸಮರ್ಪಕ ಮಾಹಿತಿ ಬಂದಿಲ್ಲ. ಕಳೆದ ವರ್ಷದ ಕಾಮಗಾರಿಗಳು ಬಾಕಿ ಉಳಿದಿದ್ದು, ಆದಷ್ಟು ಬೇಗ ಪೂರ್ಣಗೊಳಿಸಿ, ತಪ್ಪು ಮರುಕಳಿಸದಂತೆ ನೋಡಿಕೊಳ್ಳಬೇಕು ಎಂದು ಶಾಸಕ ವಿಶ್ವಾಸ ವೆದ್ಯ ಸೂಚಿಸಿದರು.

ಇಲ್ಲಿನ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ತೆಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನ ಎಲ್ಲ ಇಲಾಖೆಗಳು ಪರಸ್ಪರ ಚರ್ಚೆ ನಡೆಸಿ ಕಾರ್ಯನಿರ್ವಹಿಸುವ ಮೂಲಕ ಪ್ರಗತಿಗೆ ಸಹಕರಿಸಬೇಕು. ಪಟ್ಟಣದ ವಾಲ್ಮೀಕಿ ಭವನ, ಅಂಬೇಡ್ಕರ್​ ಭವನ, ಬಿಸಿಎಂ ವಸತಿ ನಿಲಯ, ಚುಳಕಿ ಗ್ರಾಮದ ಅಂಬೇಡ್ಕರ್​ ಭವನದ ಕಾಮಗಾರಿಗಳನ್ನು ಆದಷ್ಟು ಬೇಗನೆ ಪೂರ್ಣಗೊಳಿಸಬೇಕು. ಆರ್​ಒ ಪ್ಲಾಂಟ್​ಗಳ ಸಮಸ್ಯೆ ಸರಿಪಡಿಸಿ ಗ್ರಾಮ ಪಂಚಾಯಿತಿಗಳಿಗೆ ಹಸ್ತಾಂತರಿಸುವ ಕೆಲಸ ಆಗಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಶ್ರೀಗಂಧದ ಮರಗಳ ಬಗ್ಗೆ ನಿಗಾ ಇರಲಿ: ಹಂಚಿನಾಳ ಗ್ರಾಮಕ್ಕೆ ಸಂಚರಿಸುವ ಬಸ್​ ಶಾಂತಿನಗರದ ಮೂಲಕವೇ ಸಂಚರಿಸುವಂತಾಗಬೇಕು. ಯಡ್ರಾವಿ ರಸ್ತೆಯಲ್ಲಿರುವ ಆದರ್ಶ ವಿದ್ಯಾಲಯದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹೆಚ್ಚುವರಿ ಬಸ್​ ವ್ಯವಸ್ಥೆ ಕಲ್ಪಿಸಬೇಕು. ಗ್ರಾಮೀಣ ಭಾಗದಲ್ಲಿ ಅಕ್ರಮ ಸಾರಾಯಿ ಮಾರಾಟ ಜೋರಾಗಿದ್ದು, ಕೂಡಲೇ ನಿಲ್ಲಿಸಬೇಕು. ಯಲ್ಲಮ್ಮ ದೇವಸ್ಥಾನದ ದೇವಿವನದಲ್ಲಿ ಗಂಧದ ಮರಗಳು ಕಳುವಾದ ಮಾಹಿತಿಯಿದೆ. ಖಾಸಗಿ ಜಮೀನಿನಲ್ಲಿಯೂ ಶ್ರೀಗಂಧದ ಮರ ಕಳವು ಕುರಿತು ಸಾಕಷ್ಟು ದೂರುಗಳಿವೆ. ಈ ಕುರಿತು ನಿಗಾವಹಿಸುವಂತೆ ಅರಣ್ಯಾಧಿಕಾರಿ ಸಂಜೀವ ಸಂಸುದ್ದಿ ಅವರಿಗೆ ಸೂಚಿಸಿದರು.

ನೂತನ ಕೆಡಿಪಿ ಸದಸ್ಯರಿಗೆ ತಾಲೂಕಾಡಳಿತದಿಂದ ಸನ್ಮಾನಿಸ ಲಾಯಿತು. ಇದಕ್ಕೂ ಮೊದಲು ವಿವಿಧ ಗ್ರಾಮಗಳ ಮಹಿಳಾ ಒಕ್ಕೂಟಗಳ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಶಾಸಕರು ಚಾಲನೆ ನೀಡಿದರು. ತಹಸೀಲ್ದಾರ್​ ಮಲ್ಲಿಕಾರ್ಜುನ ಹೆಗ್ಗಣ್ಣವರ, ತಾಪಂ ಇಒ ಆನಂದ ಬಡಕುಂದ್ರಿ, ಎಪಿಎಂಸಿ ಅಧ್ಯ ಚಂದ್ರಶೇಖರ ಪೂಜೇರ, ವಿವಿಧ ಇಲಾಖೆ ಅಧಿಕಾರಿಗಳು, ಕೆಡಿಪಿ ಸದಸ್ಯರು ಇದ್ದರು.

ಜನರ ದೂರಿಗೆ ಸ್ಪಂದಿಸಿ: ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿ, ವರ್ಷಗಟ್ಟಲೆ ನಡೆಯುತ್ತಿರುವ ಶಾಲಾ ಶೌಚಗೃಹ ಕಾಮಗಾರಿಗಳು ಬೇಗನೆ ಮುಗಿಸಬೇಕು. ಕೆಲಸ ಮಾಡದ ಗುತ್ತಿಗೆದಾರರ ವಿರುದ್ಧ ಕ್ರಮವಹಿಸಬೇಕು. ಶಾಲಾ ವಿದ್ಯಾರ್ಥಿಗಳ ಮೊಟ್ಟೆ ವಿತರಣೆಯಲ್ಲಿ ಲೋಪವಾಗದಂತೆ ಕಟ್ಟೆಚ್ಚರ ವಹಿಸಬೇಕು. ಮಲ್ಟಿ ವಿಲೇಜ್​ ಯೋಜನೆಯಲ್ಲಿ ಸಾಕಷ್ಟು ಜನ ಅನಧಿಕತ ನೀರಿನ ಸಂಪರ್ಕ ಪಡೆದಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ತಹಸೀಲ್ದಾರ್​ ಕಚೇರಿ ಮತ್ತು ಪೊಲೀಸ್​ ಇಲಾಖೆಯಲ್ಲಿ ಸಾರ್ವಜನಿಕರಿಗೆ ತೊಂದರೆ ಆಗುತ್ತಿರುವ ಕುರಿತು ಸಾಕಷ್ಟು ದೂರುಗಳು ಬಂದಿವೆ. ಜನರನ್ನು ಸತಾಯಿಸುವ ಕೆಲಸ ನಿಮ್ಮಿಂದ ಆಗಬಾರದು. ಅವರಿಗೆ ನ್ಯಾಯ ಒದಗಿಸಲು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net