ಸ್ಮಶಾನ ಜಾಗ ಒತ್ತುವರಿಯಿಂದ ಅಂತ್ಯಕ್ರಿಯೆಗೆ ತೊಂದರೆ

06 yelandur 02
ಯಳಂದೂರು ಸಮೀಪದ ಮಸಣಾಪುರ ಗ್ರಾಮಸ್ಥರು ಶನಿವಾರ ಪ್ರತಿಭಟನೆ ನಡೆಸಿದರು. ರಾಜು, ಗ್ರಾಮದ ಮುಖಂಡರಾದ ಲೋಕೇಶ್ ನಾಯಕ, ರಂಗಸ್ವಾಮಿನಾಯಕ, ಅಂಕನಾಯಕ, ವೆಂಕಟರಂಗಸ್ವಾಮಿ, ಶ್ರೀನಿವಾಸ, ಅಂಕಶೆಟ್ಟಿ, ಮಾದೇಶ್, ಕೃಷ್ಣ ಇದ್ದರು.
Published on

ಯಳಂದೂರು: ಸಮೀಪದ ಮಸಣಾಪುರ ಗ್ರಾಮದಲ್ಲಿ ಖಾಸಗಿ ವ್ಯಕ್ತಿಯೊಬ್ಬರು ಉಪ್ಪಾರ ಮತ್ತು ನಾಯಕ ಸಮುದಾಯಕ್ಕೆ ಸೇರಿದ ಸ್ಮಶಾನ ಜಾಗವನ್ನು ಒತ್ತುವರಿ ಮಾಡಿಕೊಂಡು ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಗ್ರಾಮದ ಉಪ್ಪಾರ, ನಾಯಕಸಮುದಾಯದವರು ಶನಿವಾರ ಪ್ರತಿಭಟನೆ ನಡೆಸಿದರು.

ಸರ್ವೇ ನಂ.19/6 ಎ ನಲ್ಲಿ ಜಾಗವಿದ್ದು, ಒಟ್ಟು 27 ಗುಂಟೆ ಜಮೀನು ಕಾವೇರಿ ನೀರಾವರಿ ನಿಗಮಕ್ಕೆ ಸೇರಿದೆ. ಈ ಸ್ಥಳವನ್ನು ಉಪ್ಪಾರ ಹಾಗೂ ನಾಯಕ ಸಮುದಾಯದ ಸ್ಮಶಾನಕ್ಕೆ ನೀಡಬೇಕು. ಒಂದೂವರೆ ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಸಮುದಾಯದ ಜನರಿದ್ದಾರೆ. ಈ ಹಿಂದೆ ಗಂಗವಾಡಿ ರಸ್ತೆಯಲ್ಲಿದ್ದ ಸ್ಮಶಾನ ಹಳ್ಳದಲ್ಲಿದ್ದು, ಇದರಲ್ಲಿ ನೀರು ತುಂಬಿಕೊಂಡು ತೊಂದರೆಯಾಗುತ್ತಿತ್ತು. ಹಾಗಾಗಿ ಇಲ್ಲಿ ಅನೇಕ ವರ್ಷಗಳಿಂದಲೂ ಅಂತ್ಯಸಂಸ್ಕಾರ ಮಾಡಿಕೊಂಡು ಬರಲಾಗುತ್ತಿತ್ತು.

ಜಮೀನಿನ ಸ್ಥಳವನ್ನು ಈ ಹಿಂದೆ ಸರ್ವೇ ಇಲಾಖೆ ಅಧಿಕಾರಿಗಳು ಸರ್ವೇ ಮಾಡಿ ಕಲ್ಲು ನೆಟ್ಟಿದ್ದರು. ಆದರೆ ಈಗ ಈ ಜಮೀನಿನ ಪಕ್ಕದಲ್ಲಿರುವ ಖಾಸಗಿ ವ್ಯಕ್ತಿಯೊಬ್ಬರು ಆ ಕಲ್ಲನ್ನು ಕಿತ್ತು ಹಾಕಿ ಉಳುಮೆ ಮಾಡುತ್ತಿದ್ದಾರೆ ಎಂದು ಪ್ರತಿಭಟನಾನಿರತರು ಆರೋಪಿಸಿದರು.

ಇದು ಸರ್ಕಾರಿ ಜಮೀನಾಗಿದ್ದು, ಇಲ್ಲಿ ಅನೇಕರ ಅಂತ್ಯಕ್ರಿಯೆ ಮಾಡಲಾಗಿದೆ. ರಸ್ತೆ ಬದಿಯಲ್ಲಿರುವ ಫಲವತ್ತಾದ ಜಮೀನು ಎಂಬ ಕಾರಣಕ್ಕೆ ಕಬಳಿಸಿಕೊಳ್ಳಲು ಹುನ್ನಾರ ನಡೆಯುತ್ತಿದೆ. ಹಾಗಾಗಿ ಈ ಜಮೀನನ್ನು ಮತ್ತೆ ನಮಗೆ ವಾಪಸ್ ನೀಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿ ಗ್ರಾಮ ಲೆಕ್ಕಾಧಿಕಾರಿ ರಾಜೇಂದ್ರ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ರಾಜೇಂದ್ರ, ಈ ಸಂಬಂಧ ಉನ್ನತ ಅಧಿಕಾರಿಗಳ ಗಮನಕ್ಕೆ ತಂದು ಮುಂದಿನ ಕ್ರಮ ವಹಿಸುವ ಭರವಸೆ ನೀಡಿದರು. ಸರ್ವೇಯರ್ ರಾಜು, ಗ್ರಾಮದ ಮುಖಂಡರಾದ ಲೋಕೇಶ್ ನಾಯಕ, ರಂಗಸ್ವಾಮಿನಾಯಕ, ಅಂಕನಾಯಕ, ವೆಂಕಟರಂಗಸ್ವಾಮಿ, ಶ್ರೀನಿವಾಸ, ಅಂಕಶೆಟ್ಟಿ, ಮಾದೇಶ್, ಕೃಷ್ಣ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net