

ಶಿಕಾರಿಪುರ: ತಾಲೂಕಿನಲ್ಲಿ ಶಾಶ್ವತ ನೀರಾವರಿ ಯೋಜನೆಯ ಮೂಲಕ 103 ಕೆರೆಗಳನ್ನು ಶೇ.100 ಹಾಗೂ 28 ಕೆರೆಗಳನ್ನು ಶೇ.50 ತುಂಬಿಸಲಾಗಿದೆ. ಸಮರ್ಪಕ ವಿದ್ಯುತ್ ಕೊರತೆಯಿಂದ ಉಳಿದ 150 ಕೆರೆಗಳನ್ನು ತುಂಬಿಸಲಾಗಿಲ್ಲ. ಅ. 12ರ ಒಳಗೆ ಸಮರ್ಪಕ ವಿದ್ಯುತ್ ದೊರೆತರೆ ಎಲ್ಲ ಕೆರೆಗಳು ಭರ್ತಿಯಾಗಲಿವೆ ಎಂದು ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು.
ಇದೊಂದು ಬೃಹತ್ ನೀರಾವರಿ ಯೋಜನೆಯಾದರೂ ಕೇವಲ ಒಂದು ವರ್ಷ ಹತ್ತು ತಿಂಗಳಲ್ಲಿ ಪೂರ್ಣಗೊಂಡಿದೆ. ಇದೊಂದು ದಾಖಲೆಯಾಗಿದೆ. ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ 2019ರ ಆ.3ರಂದು ಯೋಜನೆಗೆ ಆಡಳಿತಾತ್ಮಕ ಅನುಮೋದನೆ ದೊರೆತಿತ್ತು. 2019ರ ನ.8ರಂದು ಕಾಮಗಾರಿ ಕರಾರು ಆಗಿತ್ತು. 2021ರ ಅ.25ರಂದು, ಅಂದರೆ ಕೇವಲ ಒಂದು ವರ್ಷ ಹತ್ತು ತಿಂಗಳಲ್ಲಿ 850 ಕೋಟಿ ರೂ. ವೆಚ್ಚದ ಯೋಜನೆ ಪೂರ್ಣಗೊಂಡಿತು. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗಲೇ ಯೋಜನೆ ಪೂರ್ಣಗೊಂಡಿತು ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ತುಂಬದೆ ಇರುವ 100 ಕೆರೆಗಳ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಪ್ರತಿಪಕ್ಷದವರು ಅನಗತ್ಯವಾಗಿ ಅಪಪ್ರಚಾರ ಮಾಡುತ್ತಿದ್ದಾರೆ. ಒಂದು ಸುಳ್ಳನ್ನು ನೂರು ಬಾರಿ ಹೇಳಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಎಲ್ಲ ಸಮಯದಲ್ಲಿ ಇದು ನಡೆಯುವುದಿಲ್ಲ ಎಂದು ಟಾಂಗ್ ಕೊಟ್ಟರು.
ಅಂಜನಾಪುರ ಜಲಾಶಯಕ್ಕೆ ಶಿವಮೊಗ್ಗದ ಸಮೀಪದ ಹೊಸಳ್ಳಿ ಹತ್ತಿರ ಏತ ನೀರಾವರಿ ಮೂಲಕ ನೀರು ತಂದು ಸುಮಾರು 75 ಕೆರೆಗಳನ್ನು ತುಂಬಿಸುವ ಯೋಜನೆಗೆ 2019ರ ಅ.1ರಂದು ಯಡಿಯೂರಪ್ಪ ಅವರ ಅವಧಿಯಲ್ಲಿ ಆಡಳಿತಾತ್ಮ ಅನುಮೋದನೆ ಲಭಿಸಿತ್ತು. 2019ರ ನ.21ರಂದು ಕಾಮಗಾರಿ ಪ್ರಾರಂಭವಾಗಿ 2021ರ ಡಿ.31ರಂದು 177.84 ಕೋಟಿ ಮೊತ್ತದ ಯೋಜನೆ ಪೂರ್ಣಗೊಂಡಿತು. ಕಸಬಾ ಏತ ನೀರಾವರಿ ಯೋಜನೆಗೆ ಕಾಳೇನಹಳ್ಳಿಯ ಹತ್ತಿರ ಬ್ಯಾರೇಜ್ ನಿರ್ಮಿಸಿ ಶಿಕಾರಿಪುರದ 11 ಗ್ರಾಮ ಮತ್ತು ಸೊರಬ ತಾಲೂಕಿನ 4 ಗ್ರಾಮಗಳ 3430 ಹೆಕ್ಟೇರ್ ಜಮೀನಿಗೆ ನೀರುಣಿಸುವ ಯೋಜನೆಗೆ 2019ರ ಆ.1ರಂದು ಆಡಳಿತಾತ್ಮಕ ಅನುಮೋದನೆ ದೊರೆತಿತ್ತು. 2020ರ ನ.11ರಂದು ಕರಾರು ಆಗಿದ್ದು, 2022ರ ಅ.1ರಲ್ಲಿ ಬಿಜೆಪಿ ಸರ್ಕಾರ ಇರುವಾಗಲೇ ಸಂಪೂರ್ಣ ಕಾಮಗಾರಿ ಮುಗಿದಿದೆ. ಇದರ ಅಂದಾಜು ವೆಚ್ಚ. 119,13 ಕೋಟಿ ರೂ. ಈ ನೀತಾವರಿ ಯೋಜನೆ ಯಡಿಯೂರಪ್ಪ ಅವರ ಬಹುದಿನಗಳ ಕನಸಿನ ಕೂಸಾಗಿದ್ದು, ಸಂಸದ ಬಿ.ವೈ.ರಾಘವೇಂದ್ರ ಅವರ ಪರಿಶ್ರಮದಿಂದ ಇದು ಕಾರ್ಯರೂಪಕ್ಕೆ ಬಂದಿದೆ. ಇದನ್ನು ಅನಗತ್ಯವಾಗಿ ಅಪಪ್ರಚಾರ ಮಾಡುವವರು ಅರ್ಥಮಾಡಿಕೊಳ್ಳಬೇಕು ಎಂದರು.
ಎಂಎಡಿಬಿ ಮಾಜಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ತಾಲೂಕು ಬಿಜೆಪಿ ಅಧ್ಯಕ್ಷ ವೀರೇಂದ್ರ ಪಾಟೀಲ್, ನಗರ ಬಿಜೆಪಿ ಅಧ್ಯಕ್ಷ ಟಿ.ಎಸ್.ಮೋಹನ್, ಎಚ್.ಟಿ.ಬಳಿಗಾರ್ ಇದ್ದರು