

ಕಿಕ್ಕೇರಿ: ರೈತರು ಸುಧಾರಿತ ಕಬ್ಬಿನ ತಳಿ ಬೆಳೆದು ಕಾರ್ಖಾನೆಗೆ ಸರಬರಾಜು ಮಾಡುವಂತೆ ಕೋರಮಂಡಲ್ ಸಕ್ಕರೆ ಕಾರ್ಖಾನೆ ಹಿರಿಯ ಉಪಾಧ್ಯಕ್ಷ ವಿ.ಜೆ. ರವಿರೆಡ್ಡಿ ಹೇಳಿದರು.
ಸಮೀಪದ ಮಾಕವಳ್ಳಿ ಗ್ರಾಮದ ಕೋರಮಂಡಲ್ ಸಕ್ಕರೆ ಕಾರ್ಖಾನೆಯ ಪ್ರಸಕ್ತ ಸಾಲಿನ ಕಬ್ಬು ನುರಿಯುವಿಕೆ ಕಾರ್ಯ ಮುಗಿದ ಸಲುವಾಗಿ ಕಾರ್ಖಾನೆ ಸಿಬ್ಬಂದಿ ಹಾಗೂ ರೈತರಿಗೆ ಗುರುವಾರ ಆಯೋಜಿಸಿದ್ದ ಅಭಿನಂದನೆ, ಔತಣಕೂಟ ಸಮಾರಂಭದಲ್ಲಿ ಮಾತನಾಡಿ, ಹಿಂದಿನ ಸಾಲಿನಲ್ಲಿ ಮಳೆ ಕಡಿಮೆಯಾಗಿ ಬರದ ಛಾಯೆ ಮೂಡಿದರೆ, ಪ್ರಸಕ್ತ ಸಾಲಿನಲ್ಲಿ ಹೆಚ್ಚಾದ ಮಳೆಯಿಂದ ಕಬ್ಬಿನ ಬೆಳೆ ಪಕ್ವತೆಗೆ ಪ್ರತಿಕೂಲ ಪರಿಣಾಮ ಬೀರಿ ನಿರೀಕ್ಷಿತ ಪ್ರಮಾಣದಲ್ಲಿ ಕಬ್ಬು ಸರಬರಾಜು, ಸಕ್ಕರೆ ಇಳುವರಿ ಲಭಿಸದಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕಾರ್ಖಾನೆಗೆ ಪ್ರತಿ ಹಂಗಾಮಿಗೆ 7ರಿಂದ 8ಲಕ್ಷ ಟನ್ ಕಬ್ಬಿನ ಅವಶ್ಯಕತೆ ಇದೆ. ಕಬ್ಬಿನ ಕೊರತೆಯಿಂದ ಕೇವಲ 4.85 ಲಕ್ಷ ಟನ್ ಕಬ್ಬು ನುರಿದು ಶೇ.9.10ರಷ್ಟು ಸಕ್ಕರೆ ಇಳುವರಿ ಲಭಿಸಿದೆ. ಈ ಬಾರಿ 1.02ಲಕ್ಷ ಟನ್ ಕಬ್ಬು ಕೊರತೆ ಕಾಡಿದೆ. ಸಕಾಲದಲ್ಲಿ 2ಕಂತುಗಳಲ್ಲಿ ಕಬ್ಬು ಸರಬರಾಜು ಮಾಡಿದ ರೈತರಿಗೆ ಕೇಂದ್ರ ಸರ್ಕಾರದ ಎಫ್‌ಆರ್‌ಪಿ ದರದಲ್ಲಿ ಟನ್‌ಗೆ 3154 ರೂ.ನಂತೆ ಹಣ ಸಂದಾಯ ಮಾಡಲಾಗಿದೆ. ಒಟ್ಟು 153 ಕೋಟಿ ರೂ. ಸಂದಾಯ ಮಾಡಬೇಕಿದ್ದು, ಸದ್ಯಕ್ಕೆ 146ಕೋಟಿ ರೂ. ಸಂದಾಯ ಮಾಡಲಾಗಿದೆ. ಉಳಿಕೆ 7ಕೋಟಿ ರೂ.ಗಳನ್ನು ಫೆ.21ರೊಳಗೆ ಎಲ್ಲ ರೈತರ ಖಾತೆಗಳಿಗೆ ಜಮಾ ಮಾಡಲಾಗುವುದು ಎಂದು ನುಡಿದರು.
ಕಬ್ಬು ಬೆಳೆ ಅಭಿವೃದ್ಧಿಗಾಗಿ 5 ಕೋಟಿ ರೂ. ಖರ್ಚು ಮಾಡಿದ್ದು, ಮತ್ತಷ್ಟು ನಿಧಿ ಮೀಸಲಿಡಲಾಗಿದೆ. ಕಬ್ಬು ಇಳುವರಿ, ಅಭಿವೃದ್ಧಿಗಾಗಿ ಹಲವು ಸುಧಾರಿತ ತಳಿ ಹಾಗೂ ಕಬ್ಬು ಅಭಿವೃದ್ಧಿ ಯೋಜನೆ ರೂಪಿಸಲಾಗಿದೆ. 15 ಸಾವಿರ ಎಕರೆ ಕಬ್ಬು ಬೆಳೆ ಅಭಿವೃದ್ಧಿಪಡಿಸುವ ಗುರಿ ಇದ್ದು, 11 ಸಾವಿರ ಎಕರೆ ಕಬ್ಬು ಬೆಳೆ ಅಭಿವೃದ್ಧಿ ಪಡಿಸಲಾಗಿದೆ ಎಂದರು.
ತೆಂಗಿನ ತಾಕುಗಳಲ್ಲಿ ಅನುಕೂಲವಾಗುವ ಕಬ್ಬು ನಾಟಿ ಬಿತ್ತನೆಯನ್ನು ಏಪ್ರಿಲ್‌ವರೆಗೆ ಉಚಿತವಾಗಿ ಎಕರೆಗೆ 2.5 ಮೆ. ಟನ್ ನೀಡಲಾಗುವುದು. ಜತೆಗೆ ಸಾಗಣೆಗೆ ಎಕರೆಗೆ 1,500ರೂ. ಸಹಾಯಧನ ನೀಡಲಾಗುವುದು. ಮಣ್ಣಿನ ಸೂಕ್ಷ್ಮ ಪೋಷಕಾಂಶ ಮಿಶ್ರಣವನ್ನು ಮಣ್ಣಿನ ಅಭಿವೃದ್ಧಿಗಾಗಿ ಶೇ.50ರ ರಿಯಾಯಿತಿಯಲ್ಲಿ ನೀಡಲಾಗುತ್ತಿದೆ. ಶೇ.4ರ ಪ್ರಮಾಣದಲ್ಲಿ ಮಡ್ಡಿಯನ್ನು ಆಸಕ್ತ ಕಬ್ಬು ಬೆಳೆಗಾರರ ಜಮೀನುಗಳಿಗೆ ಸಾಗಿಸಿಕೊಡುವ ಯೋಜನೆ ರೂಪಿಸಿದ್ದು ಸುಮಾರು 14,497ಮೆ. ಟನ್ ಮಡ್ಡಿಯನ್ನು 1356 ರೈತರಿಗೆ ನೀಡಿದೆ ಎಂದು ತಿಳಿಸಿದರು.
ಕಬ್ಬು ವಿಭಾಗ ಹಿರಿಯ ಮುಖ್ಯಸ್ಥ ಕೆ. ಬಾಬುರಾಜ್, ವ್ಯವಸ್ಥಾಪಕ ದತ್ತಾತ್ರೇಯ, ತಾಂತ್ರಿಕ ವಿಭಾಗದ ಮೇಯನ್, ಉತ್ಪಾದನಾ ವಿಭಾಗದ ಅಶೋಕ್‌ಕುಮಾರ್, ಲೆಕ್ಕಪತ್ರ ವಿಭಾಗದ ಕುಮಾರ್, ಕೆ.ಜಿ. ಮೋಹನ್, ಅಶೋಕಕುಮಾರ್, ಕುಮಾರಸ್ವಾಮಿ ಇತರರು ಇದ್ದರು.