

| ಕೆ.ಎನ್.ರಾಘವೇಂದ್ರ ಮಂಡ್ಯ
ರೈತರ ಪಾಲಿಗೆ ವರದಾನವಾಗಿರುವ ಹನಿ ನೀರಾವರಿ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಲ್ಲಿ ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿದೆ. ಯೋಜನೆ ಘೊಷಣೆಯಾದರೂ ಸಕಾಲಕ್ಕೆ ಮಾರ್ಗಸೂಚಿ ಪ್ರಕಟಿಸದ ಪರಿಣಾಮ ‘ಊಟಕ್ಕಿಲ್ಲದ ಉಪ್ಪಿನ ಕಾಯಿಯಂತಾಗಿದೆ’!
ನೀರನ್ನು ಮಿತವಾಗಿ ಬಳಸುವ ಹಾಗೂ ಬೆಳೆಗಳಿಗೆ ಸರಿಯಾದ ಪ್ರಮಾಣದಲ್ಲಿ ಹರಿಸುವ ನಿಟ್ಟಿನಲ್ಲಿ ಹನಿ ನೀರಾವರಿ ಪ್ರಮುಖವಾಗಿದೆ. ಇದನ್ನರಿತು ಸರ್ಕಾರ ಅನುದಾನ ನೀಡುತ್ತಲೇ ಬಂದಿದೆ. ಆದರೆ, ಕೋವಿಡ್ ಬಂದ ನಂತರ ಯೋಜನೆ ಅಸ್ತವ್ಯಸ್ತಗೊಂಡಿದೆ. ಪರಿಣಾಮ ರಾಜ್ಯಾದ್ಯಂತ ಯೋಜನೆಗೆಂದು ಅರ್ಜಿ ಸಲ್ಲಿಸಲು ಲಕ್ಷಾಂತರ ರೈತರು ಕಾಯುವ ಪರಿಸ್ಥಿತಿ ನಿರ್ವಣವಾಗಿದೆ.
ಬಿಸಿಲಿಗೆ ಬಾಡುತ್ತಿದೆ ಬೆಳೆ: ಸದ್ಯ ಬೇಸಿಗೆಯ ಬಿಸಿಲು ಬೆಳೆಯನ್ನು ಸುಡುತ್ತಿದೆ. ಇರುವ ನೀರನ್ನು ಬಳಸಿಕೊಂಡು ಬೆಳೆ ಉಳಿಸಿಕೊಳ್ಳಲು ರೈತರು ಪರದಾಡುತ್ತಿದ್ದಾರೆ. ಸರಿಯಾದ ಪ್ರಮಾಣದಲ್ಲಿ ವಿದ್ಯುತ್ ಸರಬರಾಜು ಕೂಡ ಇಲ್ಲ. ಈ ಹಿನ್ನೆಲೆಯಲ್ಲಿ ಹನಿ ನೀರಾವರಿ ಅಳವಡಿಸಿಕೊಂಡರೆ ನೀರನ್ನು ಸದುಪಯೋಗಪಡಿಸಿಕೊಳ್ಳುವುದರ ಜತೆಗೆ ಬೆಳೆಯನ್ನು ಕಾಪಾಡಿಕೊಳ್ಳಬಹುದು. ಆದರೆ ಇದಕ್ಕೆ ಸರ್ಕಾರವೇ ವಿರೋಧಿಯಂತಾಗಿದೆ. ಬೇಸಿಗೆ ಬಂದರೂ ಹನಿ ನೀರಾವರಿ ಯೋಜನೆ ಕುರಿತು ಮಾರ್ಗಸೂಚಿ ಹೊರಡಿಸಿಲ್ಲ. ಇದಕ್ಕೆ ಕಾರಣ ಕೋವಿಡ್ ನಂತರದ ಬೆಳವಣಿಗೆ.
ಕೋವಿಡ್ ನಂತರ ಆರ್ಥಿಕ ಸಂಕಷ್ಟ ಎದುರಾದ ಪರಿಣಾಮ ಯೋಜನೆಗೆ ನೀಡುತ್ತಿದ್ದ ಅನುದಾನದ ಪ್ರಮಾಣವನ್ನು ಇಳಿಕೆ ಮಾಡುವುದಾಗಿ ಸರ್ಕಾರ ಹೇಳಿತ್ತು. ಆದರೆ ಇದಕ್ಕೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಮತ್ತೆ ಆದೇಶವನ್ನು ಬದಲಿಸಿತು. ಈ ನಡುವೆ ಮಾರ್ಚ್ನಲ್ಲಿ ಮಂಡನೆಯಾದ ಬಜೆಟ್ನಲ್ಲಿ ಮತ್ತೆ ಅನುದಾನದ ಮೊತ್ತವನ್ನು ಏರಿಳಿತ ಮಾಡಲಾಗಿದೆ. ಎಸ್ಸಿ, ಎಸ್ಟಿ, ಸಣ್ಣ ಮತ್ತು ಅತಿಸಣ್ಣ ರೈತರಿಗೆ ಶೇ.90 ಹಾಗೂ ಇತರ ರೈತರಿಗೆ ಶೇ.75 ಅನುದಾನ ನೀಡುವುದಾಗಿ ಘೊಷಣೆ ಮಾಡಲಾಗಿದೆ. ಬಜೆಟ್ ಘೊಷಣೆಯಾಗಿ ತಿಂಗಳೇ ಕಳೆದರೂ ಯೋಜನೆಗೆ ತಕ್ಕ ಮಾರ್ಗಸೂಚಿ ಹೊರಡಿಸಿಲ್ಲ. ಇದು ಅಧಿಕಾರಿಗಳಿಗೂ ತಲೆನೋವು ತರಿಸಿದೆ.
ಕಾಯುತ್ತಿದ್ದಾರೆ ರೈತರು: ಕೃಷಿಗೆ ಅದರಲ್ಲಿಯೂ ಬೇಸಿಗೆ ಕಾಲದಲ್ಲಿ ಹನಿ ನೀರಾವರಿ ರೈತರ ಪಾಲಿಗೆ ವರದಾನ. ಈ ಹಿನ್ನೆಲೆಯಲ್ಲಿ ಯೋಜನೆ ಫಲಾನುಭವಿಯಾಗಲು ರಾಜ್ಯಾದ್ಯಂತ ಲಕ್ಷಾಂತರ ರೈತರು ಅರ್ಜಿ ಸಲ್ಲಿಸಲು ಕಾಯುತ್ತಿದ್ದಾರೆ. ಇತ್ತ ಸರ್ಕಾರದಿಂದ ಮಾರ್ಗಸೂಚಿ ಬಾರದ ಕಾರಣ ತಡವಾಗುತ್ತಿದೆ. ಇನ್ನು ಮಾರ್ಗಸೂಚಿ ಹೊರಡಿಸಿ ನಂತರ ಅರ್ಜಿ ಸ್ವೀಕರಿಸಿ ಯೋಜನೆ ಜಾರಿಗೊಳಿಸುವ ವೇಳೆಗೆ ಬೆಳೆ ಸ್ಥಿತಿ ಹಾಳಾಗುವ ಹಂತ ತಲುಪುತ್ತದೆ. ಆದ್ದರಿಂದ ರೈತರನ್ನು ಉದ್ಧಾರ ಮಾಡುತ್ತೇವೆಂದು ಭಾಷಣ ಮಾಡುವುದನ್ನು ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ಸರ್ಕಾರ ಗಮನಹರಿಸಬೇಕಿದೆ.
ಹನಿ ನೀರಾವರಿಗೆ ನೀಡುವ ಅನುದಾನಕ್ಕೆ ಸಂಬಂಧಿಸಿದಂತೆ ಬಜೆಟ್ನಲ್ಲಿ ಕಾರ್ಯಕ್ರಮ ಘೊಷಣೆಯಾಗಿದೆ. ಇನ್ನು 15 ದಿನದೊಳಗೆ ಗೈಡ್ಲೈನ್ಸ್ ಬರಬಹುದು. | ಡಿ.ಮಂಜುನಾಥ್ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಮಂಡ್ಯ
ಸಚಿವರು ರಾಜಧಾನಿಗೆ ಸೀಮಿತ: ಇನ್ನು ತೋಟಗಾರಿಕೆ ಸಚಿವ ಮುನಿರತ್ನ ಅದ್ಯಾಕೋ ಬೆಂಗಳೂರಿಗೆ ಸೀಮಿತವಾಗಿದ್ದಾರೆ. ಕೋವಿಡ್ ವೇಳೆಯಲ್ಲಿಯೂ ಪ್ರವಾಸ ಮಾಡದ ಅವರು, ಈಗ ಕೃಷಿ ಚಟುವಟಿಕೆ ನಡೆಯುತ್ತಿರುವ ಸಮಯದಲ್ಲಿಯೂ ಮಂಡ್ಯ ಜಿಲ್ಲೆಗೆ ಭೇಟಿ ನೀಡುತ್ತಿಲ್ಲ. ಹೀಗಾದರೆ ತೋಟಗಾರಿಕೆ ಬೆಳೆ ಮಾಡುತ್ತಿರುವ ರೈತರು ತಮ್ಮ ಸಮಸ್ಯೆಗಳನ್ನು ಯಾರ ಬಳಿ ಹೇಳಬೇಕು? ಎನ್ನುವುದು ರೈತರ ಪ್ರಶ್ನೆ.