

ಶೃಂಗೇರಿ: ತಾಲೂಕಿನಲ್ಲಿ ಶುಕ್ರವಾರವೂ ಕೂಡಾ ಮಳೆ ಆರ್ಭಟ ಮುಂದುವರಿದಿದೆ. ಶೃಂಗೇರಿಯಲ್ಲಿ 50 ಮಿ.ಮೀ, ಕಿಗ್ಗಾ 70ಮಿ.ಮೀ ಹಾಗೂ ಕೆರೆಕಟ್ಟೆ 108 ಮಿ.ಮೀ ಮಳೆಯಾಗಿದೆ. ಮಳೆ ಹೆಚ್ಚಾಗಿರುವುದರಿಂದ ತುಂಗಾ ನದಿಯ ನೀರಿನ ಹರಿವು ಏರಿಕೆಯಾಗಿದೆ. ಸುರಿವ ಮಳೆಯಿಂದ ತೋಟದ ಬೆಳೆಗಳಿಗೆ ಎರಡನೇ ಸುತ್ತಿನ ಔಷಧ ಹೊಡೆಯಲಾರದೆ ಕೃಷಿಕರಿಗೆ ಕೊಳೆರೋಗ ಬರುವ ಆತಂಕ ಎದುರಾಗಿದೆ.
ಹತ್ತು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತರುವುದರಿಂದ ಕಾಫಿ ತೋಟಗಳಲ್ಲಿ ಕಾಫಿ ಕಾಯಿ ಹೆಚ್ಚಾಗಿ ಉದುರುತ್ತಿದೆ. ಪಟ್ಟಣಗಳಲ್ಲಿ ತಾಲೂಕಿನಿಂದ ಬರುವ ಜನರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿ ವ್ಯಾಪಾರ, ವಹಿವಾಟು ಕಡಿಮೆಯಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಧರೆಗಳ ಕುಸಿತದಿಂದ ರಸ್ತೆಗಳು ಮಣ್ಣಿನಿಂದ ಆವೃತ್ತಗೊಂಡು ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿದೆ. ಹಲವಾರು ಕಡೆ ಸೇತುವೆಗಳು ಕುಸಿದು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ.