

ಬಳ್ಳಾರಿ: ಬಾಕಿ ವೇತನ ಪಾವತಿ, ನೀರುಗಂಟಿಗಳನ್ನು ಬಿಲ್ ಕಲೆಕ್ಟರ್ ಹುದ್ದೆಗೆ ಬಡ್ತಿ, ಬಿಲ್ ಕಲೆಕ್ಟರ್‌ಗಳನ್ನು ಗ್ರೇಡ್ 2 ಕಾರ್ಯದರ್ಶಿ ಹುದ್ದೆಗೆ ಬಡ್ತಿ ನೀಡಬೇಕೆಂದು ಆಗ್ರಹಿಸಿ ಗ್ರಾಪಂ ನೌಕರರ ಸಂಘದಿಂದ ಸೋಮವಾರ ನಗರದ ಜಿಪಂ ಸಿಇಒ ಕಚೇರಿ ಆವರಣದಲ್ಲಿ ಧರಣಿ ನಡೆಸಲಾಯಿತು.
ಕರೊನಾ ನಿಯಂತ್ರಣಕ್ಕೆ ಸಂಬಂಧಿಸಿದ ಕೆಲಸಗಳಲ್ಲಿ ಗ್ರಾಪಂ ನೌಕರರು ನಿರಂತರ ಕೆಲಸ ಮಾಡುತ್ತಿದ್ದಾರೆ. ಆದರೂ, ಸರ್ಕಾರ ನೌಕರರಿಗೆ ಮೂರು ವರ್ಷಗಳಿಂದ ಸಮರ್ಪಕ ವೇತನ ನೀಡುತ್ತಿಲ್ಲ. ಪಿಡಿಒಗಳು ಗ್ರಾಪಂ ಸಿಬ್ಬಂದಿಗೆ ಸಂಬಂಧಿಸಿದ ಸರ್ಕಾರದ ಆದೇಶಗಳನ್ನು ಜಾರಿ ಮಾಡದೆ ಪಂಚಾಯತ್‌ರಾಜ್ ಕಾಯ್ದೆ ಉಲ್ಲಂಘಿಸುತ್ತಿದ್ದಾರೆ. ತಪ್ಪಿತಸ್ಥ ಪಿಡಿಒಗಳ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಲಾಯಿತು.
ಕಂಪ್ಯೂಟರ್ ಆಪರೇಟರ್‌ಗಳಿಗೆ ಬಡ್ತಿ ನೀಡಲು ವೃಂದ ಮತ್ತು ನೇಮಕಾತಿ ನಿಯಮ ತಿದ್ದುಪಡಿ ಮಾಡಬೇಕು. ವೈದ್ಯಕೀಯ ಭತ್ಯೆ, ಪಿಂಚಣಿ ಮಂಜೂರು ಮಾಡುವುದರ ಜತೆಗೆ ಬಿಪಿಎಲ್ ಪಡಿತರ ಚೀಟಿ ಉಳಿಸಿಕೊಳ್ಳಲು ಅವಕಾಶ ನೀಡಬೇಕೆಂದು ಆಗ್ರಹಿಸಲಾಯಿತು. ಸಂಘದ ಜಿಲ್ಲಾ ಅಧ್ಯಕ್ಷ ಆರ್.ಎಸ್.ಬಸವರಾಜ, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನಸ್ವಾಮಿ, ಖಜಾಂಚಿ ಪವಿತ್ರಾ, ತಾಲೂಕು ಘಟಕಗಳ ಪದಾಧಿಕಾರಿಗಳು ಭಾಗವಹಿಸಿದ್ದರು.