

ಮುದಗಲ್: ಮುಂಗಾರು ಹಂಗಾಮಿನಲ್ಲಿ ಬೆಳೆದ ಸೂರ್ಯಕಾಂತಿ ಕೈಗೆ ಬಂದಿದ್ದು, ಮಾರುಕಟ್ಟೆಯಲ್ಲಿ ಧಾರಣೆ ಕುಸಿತದಿಂದ ರೈತರು ಕಂಗಾಲಾಗಿದ್ದಾರೆ.
ಪ್ರತಿ ಎಕರೆಗೆ 8-10 ಸಾವಿರ ದವರೆಗೂ ಬಿತ್ತನೆಬೀಜ, ರಸಗೊಬ್ಬರ, ಕೂಲಿ ಕಾರ್ಮಿಕರು ಸೇರಿದಂತೆ ಇತರೆ ಖರ್ಚುಗಳನ್ನು ಮಾಡಿ ಪ್ರತಿ ಎಕರೆಯಿಂದ ಅಧಿಕ ಇಳುವರಿ ಬಂದರೂ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಾಲ್‌ಗೆ 4,500-5,000 ರೂ. ಬೆಲೆ ಲಭಿಸುತ್ತಿರುವುದರಿಂದ ರೈತರ ನಿರೀಕ್ಷೆಗೆ ತಕ್ಕಂತೆ ಲಾಭಾಂಶವಾಗದೇ ನಿರಾಸೆಯಲ್ಲಿದ್ದಾರೆ.
ಈ ಬಾರಿ ತೊಗರಿಯನ್ನೇ ಹೆಚ್ಚಿನ ರೈತರು ಬಿತ್ತನೆ ಮಾಡಿದ್ದು ಸೂರ್ಯಕಾಂತಿ ಬೆಳೆದ ರೈತರಿಗೆ ಬೆಲೆ ಏರಿಕೆಯಾಗದೇ ಆರಂಭದಲ್ಲಿಯೇ ಆಘಾತ ಉಂಟಾಗುವಂತೆ ಮಾಡಿದೆ. ಪ್ರತಿ ಎಕರೆಗೆ 6 ರಿಂದ 7 ಕ್ವಿಂಟಾಲ್ ಇಳುವರಿ ಬಂದರೂ ಕೂಡ ರೈತರು ನಿರೀಕ್ಷೆ ಮಾಡಿದಷ್ಟು ಲಾಭಾಂಶಕ್ಕೆ ಕೊಕ್ಕೆ ಬಿದ್ದಿದೆ.
ಲಾಭದ ಲೆಕ್ಕಾಚಾರದಲ್ಲಿದ್ದ ರೈತರು ಈಗ ಸಂಕಷ್ಟಕ್ಕೀಡಾಗಿದ್ದಾರೆ. ಫಸಲು ಬಂದ ಹಿನ್ನೆಲೆಯಲ್ಲಿ ಸೂರ್ಯಕಾಂತಿ ಬೆಳೆಯನ್ನು ಮಾರುಕಟ್ಟೆಗೆ ಸಾಗಾಟ ಮಾಡಿರುವ ರೈತರಿಗೆ ಬೆಲೆ ಇಳಿಕೆ ಶಾಕ್ ನೀಡಿದೆ.
ಎಪಿಎಂಸಿ ಮಾರುಕಟ್ಟೆಯಲ್ಲಿ ಸೂರ್ಯಕಾಂತಿಯನ್ನು ಶುಚಿಗೊಳಿಸಿ ಒಣಗಿಸಲು ರೈತರು ಮುದಗಲ್ ಎಪಿಎಂಸಿ ಮಾರುಕಟ್ಟೆಗೆ ತಂದಿದ್ದು, ಧಾರಣೆ ಕುಸಿತದಿಂದ ನಷ್ಟ ಅನುಭವಿಸುವಂತಾಗಿದೆ. ಮಾರುಕಟ್ಟೆಗೆ ರೈತರ ದಾಸ್ತಾನು ಬಂದಾಗ ಮಾತ್ರ ಬೆಲೆ ಇಳಿಕೆಯಾಗಿ ದಲ್ಲಾಳಿಗಳು ತಾವು ಮಾರಾಟ ಮಾಡುವಾಗ ಬೆಲೆ ಏರಿಕೆ ಆಗುವುದನ್ನು ಪ್ರಶ್ನಿಸುತ್ತಾ ಮಾರುಕಟ್ಟೆಯಲ್ಲಿ ಲಭ್ಯವಾದ ಬೆಲೆ ಪಡೆದು ನಿರಾಸೆಯಲ್ಲಿಯೇ ಮನೆಗೆ ಹಿಂದಿರುಗುತ್ತಿದ್ದಾರೆ.
ಆರಂಭದಲ್ಲಿಯೇ ಮಾರುಕಟ್ಟೆಯಲ್ಲಿ ಸೂರ್ಯಕಾಂತಿಗೆ ಬೆಲೆ ಇಳಿಕೆ ಶಾಕ್ ನೀಡಿದ್ದು ಆತಂಕ ಸೃಷ್ಟಿಸಿದೆ. ಬೆಳೆಗಳಿಗೆ ಮಾರುಕಟ್ಟೆಯಲ್ಲಿ ನಿಗದಿತ ಬೆಲೆ ದೊರೆಯದೇ ರೈತರು ನಿರಂತರ ಅನ್ಯಾಯಕ್ಕೊಳಗಾಗಿದ್ದಾರೆ.ಶಂಕ್ರಪ್ಪ ಹಡಗಲಿರೈತ