ದೂಧಗಂಗಾ ನದಿ ತೀರದಲ್ಲೇ ಅಂತ್ಯಕ್ರಿಯೆ

0101
Published on

ನಿಪ್ಪಾಣಿ: ಬೈಲಹೊಂಗಲ ಮೂಲದ ಇಂಜಿನಿಯರ್ ಒಬ್ಬರು ಮುಂಬೈನಲ್ಲಿ ಅಪಘಾತದಿಂದ ಮೃತಪಟ್ಟಿದ್ದರೂ, ಅವರ ಶವವನ್ನು ರಾಜ್ಯದೊಳಗೆ ತರಲು ಅಧಿಕಾರಿಗಳು ನಿರಾಕರಿಸಿದ್ದರಿಂದ ಕುಟುಂಬಸ್ಥರು ಗಡಿಭಾಗದ ದೂಧಗಂಗಾ ನದಿ ತೀರದ ಬಳಿಯೇ ಅಂತ್ಯ ಸಂಸ್ಕಾರ ನಡೆಸಿದ ಘಟನೆ ಗುರುವಾರ ನಡೆದಿದೆ.

ಬೆಳಗಾವಿ ಜಿಲ್ಲೆಯ ಬೈಲಹೊಂಗಲದ ಲಿಂಗರಾಜ ಬಸವಪ್ರಭು ಬೆಳಗಾವಿ (53) ಅವರು ಮುಂಬೈನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಹಲವಾರು ವರ್ಷಗಳಿಂದ ಇಂಜಿನಿಯರ್‌ಆಗಿ ಸೇವೆ ಸಲ್ಲಿಸುತ್ತಿದ್ದರು. ಬುಧವಾರ ಮಧ್ಯಾಹ್ನ ಥಾಣೆಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಅವರು ಮೃತಪಟ್ಟಿದ್ದರು.

ಬಳಿಕ ಅವರ ಸಂಬಂಧಿಕರು ಬೈಲಹೊಂಗಲಕ್ಕೆ ಶವವನ್ನು ಕೊಂಡೊಯ್ಯಲು ಮುಂಬೈ ಅಧಿಕಾರಿಗಳೊಂದಿಗೆ ಚರ್ಚಿಸಿ ಪರವಾನಗಿ ಪಡೆದು ಆಗಮಿಸಿದ್ದರು. ಆದರೆ, ತಾಲೂಕಿನ ಕೊಗನೋಳಿ ಚೆಕ್‌ಪೋಸ್ಟ್‌ಗೆ ಶವದೊಂದಿಗೆ ಬಂದ ಕುಟುಂಬಸ್ಥರನ್ನು ಗುರುವಾರ ಅಲ್ಲಿದ್ದ ಅಧಿಕಾರಿಗಳು ಗಡಿಯೊಳಗೆ ಆಗಮಿಸಲು ನಿರಾಕರಿಸಿದರು.

ಮಹಾರಾಷ್ಟ್ರದಲ್ಲಿ ಕರೊನಾ ವೈರಸ್ ಪ್ರಕರಣ ಮಿತಿ ಮೀರುತ್ತಿರುವ ಹಿನ್ನೆಲೆಯಲ್ಲಿ ಗಡಿ ಪ್ರವೇಶಿಸಲು ರಾಜ್ಯ ಸರ್ಕಾರ ನಿಷೇಧ ಹೇರಿದೆ. ಹೀಗಾಗಿ ಚೆಕ್‌ಪೋಸ್ಟ್ ಸಿಬ್ಬಂದಿ ಅವರನ್ನು ತಡೆದರು. ಬಳಿಕ ದೂಧಗಂಗಾ ನದಿ ತೀರದ ಬಳಿಯೇ ಅವರ ಕುಟುಂಬದ ಸದಸ್ಯರು ಅಂತ್ಯಕ್ರಿಯೆ ನೆರವೇರಿಸುವಂತಾಯಿತು. ಅಂತ್ಯಕ್ರಿಯೆಯಲ್ಲಿ ಲಿಂಗರಾಜರ ಪತ್ನಿ ಸುಜಾತಾ ಬೆಳಗಾವಿ, ಪುತ್ರ, ಪುತ್ರಿ, ತಂದೆ ಬಸವಪ್ರಭು ಬೆಳಗಾವಿ, ತಹಸೀಲ್ದಾರ್ ಪ್ರಕಾಶ ಗಾಯಕವಾಡ, ತಾಪಂ ಇಒ ಮಂಜುನಾಥ ಉಳ್ಳಾಗಡ್ಡಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net