

ಲಕ್ಷ್ಮೇಶ್ವರ: ಪಟ್ಟಣದ ಐತಿಹಾಸಿಕ ದೂದ್ ನಾನಾ ದರ್ಗಾ ಕಮಿಟಿ ಅಧ್ಯಕ್ಷ, ಆತನ ಮಕ್ಕಳು ಹಾಗೂ ಸಂಬಂಧಿಕರು ಸೇರಿ ಕಮಿಟಿ ಸದಸ್ಯ ಫಯುಮುಲ್ಲಾ ಪಲ್ಲಿ ಅವರ ಮೇಲೆ ಮಂಗಳವಾರ ಸಂಜೆ ಮಾರಣಾಂತಿಕ ಹಲ್ಲೆ ನಡೆಸಿದ ಬಗ್ಗೆ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ವಿವರ: ಮಂಗಳವಾರ ಸಂಜೆ ದರ್ಗಾದಲ್ಲಿ ಸದಸ್ಯರ ಸಭೆ ನಡೆಯುತ್ತಿತ್ತು. ಆಗ ಕಮಿಟಿಯ ಸದಸ್ಯ ಫಯಮುಲ್ಲಾ ಪಲ್ಲಿ ಅವರು ಅಧ್ಯಕ್ಷ ಸುಲೇಮಾನಸಾಬ್ ಕಣಕೆ ಅವರಿಗೆ ಖರ್ಚು ವೆಚ್ಚದ ಲೆಕ್ಕ ಕೇಳಿದ್ದಾರೆ. ಈ ವೇಳೆ ಪರಸ್ಪರ ಮಾತಿನ ಚಕಮಕಿ ನಡೆದಿದೆ.
ವಿಷಯ ತಿಳಿಯುತ್ತಿದ್ದಂತೆಯೇ ಅಧ್ಯಕ್ಷನ ಮಕ್ಕಳಾದ ಸಿಕಂದರ್ ಕಣಕೆ (ಪುರಸಭೆ ಸದಸ್ಯ) ಕುತ್ಬುದ್ದಿನ್‌ಸಾಬ ಕಣಕೆ ಸೇರಿ ಅನೇಕರು ಫಯಮುಲ್ಲಾ ಮೇಲೆ ಹಲ್ಲೆ ನಡೆಸಿದ್ದಾರೆ.
ಗಾಯಗೊಂಡ ಫಿಯುಮುಲ್ಲಾ ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಹಲ್ಲೆ ಮಾಡಿದ 15 ಜನರ ಮೇಲೆ ದೂರು ಸಲ್ಲಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಐತಿಹಾಸಿಕ ದೂದ್ ನಾನಾ ದರ್ಗಾಕ್ಕೆ ಬರುವ ಭಕ್ತರು ಹುಂಡಿಗೆ ಹಣ ಹಾಕುತ್ತಾರೆ. ದರ್ಗಾದ ಅಭಿವೃದ್ಧಿ ಕೆಲಸಕ್ಕಾಗಿ ಭಕ್ತರು ಸಿಮೆಂಟ್, ಇಟ್ಟಿಗೆ, ಕಬ್ಬಿಣ ಸೇರಿ ಸಾಮಗ್ರಿ ದಾನ ಮಾಡಿದ್ದಾರೆ. ಇದರಿಂದ ದರ್ಗಾಕ್ಕೆ ದೊಡ್ಡ ಮಟ್ಟದ ಆದಾಯವೂ ಇದೆ. ದರ್ಗಾದ ಸಭೆಯಲ್ಲಿ ಖರ್ಚು ವೆಚ್ಚದ ಲೆಕ್ಕ ಕೇಳಿದ್ದಕ್ಕೆ ದರ್ಗಾದ ಕಮಿಟಿ ಅಧ್ಯಕ್ಷನ ಗುಂಪು ಹಲ್ಲೆ ಮಾಡಿದೆ ಎಂದು ಹಲ್ಲೆಗೊಳಗಾದ ವ್ಯಕ್ತಿಯ ಆರೋಪ.
ಕಮಿಟಿ ಸದಸ್ಯ ಫಯುಮುಲ್ಲಾ ಪಲ್ಲಿ ಮತ್ತು ಎಸ್.ಕೆ. ಹವಾಲ್ದಾರ(ಪುರಸಭೆ ಸದಸ್ಯ) ಅವರು ದರ್ಗಾ ಕಮಿಟಿ ಅಭಿವೃದ್ಧಿ ಕಾಮಗಾರಿಯ ಹಣ ದುರುಪಯೋಗಪಡಿಸಿಕೊಂಡಿದ್ದಾರೆ. ಈ ಬಗ್ಗೆ ಕೇಳಿದರೆ ಹಿರಿಯರೆಂಬ ಗೌರವ ಕೊಡದೇ ಅವ್ಯಾಚ್ಯ ಶಬ್ದಗಳಿಂದ ನಿಂಧಿಸಿ ಹಲ್ಲೆ ಮಾಡಲೆತ್ನಿಸಿದ್ದಾರೆ. ಇದನ್ನು ಪ್ರಶ್ನಿಸಿದ್ದಕ್ಕೆ ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ. ನಾನೂ ಹುಬ್ಬಳ್ಳಿ ಕಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ ಎಂದು ಸುಲೇಮಾನಸಾಬ ಕಣಿಕೆ ಅವರ ಮಗ ಸಿಂದರ ಕಣಿಕೆ ಪ್ರತ್ಯಾರೋಪ ಮಾಡಿದ್ದಾರೆ. ಅಲ್ಲದೆ, ಈ ಬಗ್ಗೆ 10ಕ್ಕೂ ಹೆಚ್ಚು ಜನರ ಮೇಲೆ ಪ್ರತಿದೂರು ದಾಖಲಿಸಿದ್ದಾರೆ.