

ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ
ಪ್ರಕೃತಿ ವಿಕೋಪ, ಕೋವಿಡ್ ಹಿನ್ನೆಲೆಯಲ್ಲಿ ಕಳೆದ ಮೂರು ವರ್ಷದಿಂದ ಸ್ಥಗಿತಗೊಂಡಿದ್ದ ದುಬಾರೆ ರಿವರ್ ರ‌್ಯಾಫ್ಟಿಂಗ್ ಮತ್ತೊಮ್ಮೆ ಪ್ರವಾಸಿಗರನ್ನು ತನ್ನತ್ತ ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ಮೈದುಂಬಿ ಹರಿಯುವ ಜೀವನದಿ ಕಾವೇರಿಯಲ್ಲಿ ಜಲಕ್ರೀಡೆಯಲ್ಲಿ ಪಾಲ್ಗೊಳ್ಳಲು ವಿವಿಧೆಡೆಯಿಂದ ಪ್ರವಾಸಿಗರು ದುಬಾರೆಯತ್ತ ಧಾವಿಸುತ್ತಿದ್ದಾರೆ.
ಪ್ರತಿನಿತ್ಯ ಬೆಳಗ್ಗೆ ೯.೩೦ ಗಂಟೆಯಿಂದ ಸಂಜೆ ೪.೩೦ ಗಂಟೆಯವರೆಗೆ ಜಲಕ್ರೀಡೆಯಲ್ಲಿ ಪಾಲ್ಗೊಳ್ಳಬಹುದಾಗಿದೆ. ೭ ಕಿಲೋಮೀಟರ್ ದೂರ ನದಿಯಲ್ಲಿ ಸಾಗಲಾಗುತ್ತದೆ. ೧.೩೦ ಗಂಟೆಯಿಂದ ೨ ಗಂಟೆ ಅವಧಿಯಲ್ಲಿ ನದಿಯಲ್ಲಿ ಸಾಹಸಮಯ ಜಲಕ್ರೀಡೆ ಮಾಡಬಹುದಾಗಿದೆ. ಈ ಹಾದಿಯಲ್ಲಿ ೪ ಕಡೆಗಳಲ್ಲಿ ರ‌್ಯಾಪಿಡ್ ಸಿಗುತ್ತದೆ. ನದಿಯ ವಿಶಾಲವಾದ ಪ್ರದೇಶದಲ್ಲಿ ಆಸಕ್ತರಿಗೆ ನೀರಿನಲ್ಲಿ ಈಜಾಡಲು ಅವಕಾಶ ನೀಡಲಾಗು ತ್ತದೆ.
ಶನಿವಾರ, ಭಾನುವಾರ ಸೇರಿದ್ದಂತೆ ರಜೆ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ದುಬಾರೆಯಲ್ಲಿ ರಿವರ್ ರ‌್ಯಾಫ್ಟಿಂಗ್ ಮಾಡಲು ಆಗಮಿಸುತ್ತಾರೆ. ಜಲಕ್ರೀಡೆ ಬಗ್ಗೆ ಆಸಕ್ತಿ ಹೊಂದಿರುವ ಕೊಡಗಿನವರು ಕೂಡ ಕುಟುಂಬ ಸಹಿತ ಆಗಮಿಸುತ್ತಿದ್ದಾರೆ. ಇದರಿಂದ ೩ ವರ್ಷ ದಿಂದ ಕಳೆಗುಂದಿದ್ದ ದುಬಾರೆಗೆ ವಿಶೇಷ ಮೆರಗು ಬಂದಿದೆ.
ರ‌್ಯಾಫ್ಟಿಂಗ್ ಮಾಡುವ ಪ್ರತಿಯೊಬ್ಬರಿಗೂ ಜೀವ ರಕ್ಷ ಕವಚ, ಹೆಲ್ಮೆಟ್ ನೀಡಲಾಗುತ್ತದೆ. ರ‌್ಯಾಫ್ಟಿಂಗ್ ಮಾಡುವ ಸಂದರ್ಭದಲ್ಲಿ ನೀರಿಗೆ ಬಿದ್ದರೂ ಮುಳುಗುವ ಅಪಾಯವಿಲ್ಲ. ನುರಿತ ಗೈಡ್‌ಗಳು ರ‌್ಯಾಫ್ಟ್ ಮುನ್ನಡೆಸುವುದರಿಂದ ಇಲ್ಲಿ ರ‌್ಯಾಫ್ಟಿಂಗ್ ಮಾಡುವವರಿಗೆ ಯಾವ ಅಪಾಯವೂ ಇಲ್ಲ.
ದುಬಾರೆ ರಿವರ್ ರ‌್ಯಾಫ್ಟಿಂಗ್ ಅಸೋಸಿಯೇಷನ್ ಮೂಲಕ ವ್ಯವಸ್ಥಿತವಾಗಿ ರ‌್ಯಾಫ್ಟಿಂಗ್ ನಡೆಯುತ್ತಿದೆ. ೩೫ ಮಾಲೀಕರು ೬೫ ರ‌್ಯಾಫ್ಟ್ ಹೊಂದಿದ್ದಾರೆ. ರ‌್ಯಾಫ್ಟ್ ಮಾಲೀಕರ ನಡುವೆ ಪೈಪೋಟಿ ನಡೆಯವುದು, ಸಂಘರ್ಷಕ್ಕೆ ಆಸ್ಪದವಾಗದ್ದಂತೆ ವ್ಯವಸ್ಥಿತವಾಗಿ ರ‌್ಯಾಫ್ಟಿಂಗ್ ಮಾಡುವ ವ್ಯವಸ್ಥೆ ಇಲ್ಲಿದೆ.
**
ತನ್ನ ಸ್ನೇಹಿತರೊಂದಿಗೆ ಮೊದಲ ಬಾರಿಗೆ ಕೊಡಗಿಗೆ ಭೇಟಿ ನೀಡಿದ್ದೇನೆ. ಕಾವೇರಿ ನದಿ (ದುಬಾರೆ)ಯಲ್ಲಿ ರಿವರ್ ರ‌್ಯಾಫ್ಟಿಂಗ್ ಮಾಡಿದ್ದೂ ಪ್ರವಾಸಕ್ಕೆ ವಿಶೇಷ ಮೆರಗು ನೀಡಿದೆ. ರ‌್ಯಾಫ್ಟಿಂಗ್ ಮಾಡುವಾಗ ಮೊದಲು ಭಯವಾಗಿತ್ತು. ಗೈಡ್ ನಮ್ಮನ್ನು ಚನ್ನಾಗಿ ನೋಡಿಕೊಂಡರು. ಮೈದುಂಬಿ ಹರಿಯುವ ನದಿ ನೀರಿನಲ್ಲಿ ಈಜಾಡುವ ಅವಕಾಶವೂ ಸಿಕ್ಕಿತ್ತು. ಜಲಕ್ರೀಡೆ ಸ್ಮರಣೀಯ ಅನುಭವ ನೀಡಿದೆ. ದಿವ್ಯಾ ಜೈನ್, ಪ್ರವಾಸಿ ಯುವತಿ, ಮುಂಬಯಿ.
**