ದುಬಾರೆ ಜಲಕ್ರೀಡೆಯಲ್ಲಿ ಸಂಭ್ರಮಿಸಿದ ಕೊಡಗಿನ ಪತ್ರಕರ್ತರು

23mdkj5 - Copy
Published on

ಮಡಿಕೇರಿ: ಸದಾ ಸುದ್ದಿ ಒತ್ತಡದಲ್ಲಿರುವ ಪತ್ರಕರ್ತರು ಮೈದುಂಬಿ ಹರಿಯುತ್ತಿರುವ ಜೀವನದಿ ಕಾವೇರಿಯಲ್ಲಿ (ದುಬಾರೆ) ಸಾಹಸಮಯ ಜಲಕ್ರೀಡೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ಕೊಡಗು ಪ್ರೆಸ್ ಕ್ಲಬ್, ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ದುಬಾರೆ ರಿವರ್ ರ‌್ಯಾಫ್ಟಿಂಗ್ ಅಸೋಸಿಯೇಷನ್ ವತಿಯಿಂದ ಕೊಡಗಿನ ಪತ್ರಕರ್ತರಿಗೆ ಶುಕ್ರವಾರ ದುಬಾರೆಯಲ್ಲಿ ವೈಟ್ ವಾಟರ್ ರಿವರ್ ರ‌್ಯಾಫ್ಟಿಂಗ್ ಆಯೋಜಿಸಲಾಗಿತ್ತು.

ಕಾವೇರಿ ನದಿಯಲ್ಲಿ ೭ ಕಿಲೋಮೀಟರ್ ದೂರ ನಡೆದ ರ‌್ಯಾಫ್ಟಿಂಗ್‌ನಲ್ಲಿ ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ೬೩ ಪತ್ರಕರ್ತರು ಪಾಲ್ಗೊಂಡಿದ್ದರು. ಕೊಡಗು ಪ್ರೆಸ್ ಕ್ಲಬ್ ಉಪಾಧ್ಯಕ್ಷ ಚೀಯಂಡಿ ತೇಜಸ್ ಪಾಪಯ್ಯ ಸಂಚಾಲಕತ್ವದಲ್ಲಿ ಕಾರ್ಯಕ್ರಮ ಆಯೋಜಿಸ ಲಾಗಿತ್ತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ದುಬಾರೆ ರಿವರ್ ರ‌್ಯಾಫ್ಟಿಂಗ್ ಅಸೋಸಿಯೇಷನ್ ಅಧ್ಯಕ್ಷ ವಿಜು ಚಂಗಪ್ಪ, ದುಬಾರೆ ಸಾಕಾನೆ ಶಿಬಿರದತ್ತ ತೆರಳಲು ನೀರು ಇದ್ದ ಸಮಯದಲ್ಲಿ ಮಾತ್ರ ಮೋಟಾರ್ ಬೋಟ್ ಬಳಸಲಾಗುತ್ತಿದೆ. ಬೇರೆ ಸಮಯದಲ್ಲಿ ನಡೆದುಕೊಂಡೇ ಹೋಗಬೇಕಾದ ಅನಿವಾರ್ಯತೆ ಇದೆ. ದುಬಾರೆಯಲ್ಲಿ ತೂಗು ಸೇತುವೆ ನಿರ್ಮಾಣವಾದರೆ ಪ್ರವಾಸಿಗರಿಗೆ ಹಾಗೂ ಸ್ಥಳೀಯರಿಗೆ ಅನುಕೂಲವಾಗಲಿದೆ ಎಂದರು.

ಇಪ್ಪತ್ತು ವರ್ಷಗಳಿಂದ ದುಬಾರೆಯಲ್ಲಿ ರಿವರ್ ರ‌್ಯಾಫ್ಟಿಂಗ್ ನಡೆಸಿಕೊಂಡು ಬರಲಾಗುತ್ತಿದೆ. ಪ್ರಕೃತಿ ವಿಕೋಪ, ಕೋವಿಡ್ ಹಿನ್ನೆಲೆಯಲ್ಲಿ ಸ್ಥಗಿತ ಗೊಂಡಿದ್ದ ರ‌್ಯಾಫ್ಟಿಂಗ್ ಮತ್ತೆ ಪ್ರಾರಂಭವಾಗಿದೆ. ರ‌್ಯಾಫ್ಟಿಂಗ್ ಸಮಯದಲ್ಲಿ ನುರಿತ ಗೈಡ್‌ಗಳಿಂದ ಪ್ರವಾಸಿಗರಿಗೆ ಮಾಹಿತಿ ನೀಡಲಾಗು ತ್ತದೆ. ಲೈಫ್ ಜಾಕೆಟ್, ಹೆಲ್ಮೆಟ್ ಸೇರಿದಂತೆ ಅಗತ್ಯ ಮುನ್ನಚ್ಚರಿಕೆ ವಹಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷೆ ಬಿ.ಆರ್. ಸವಿತಾ ರೈ ಮಾತನಾಡಿ, ಸದಾ ಒತ್ತಡದಲ್ಲಿ ರುವ ಪತ್ರಕರ್ತರಿಗೆ ಇಂತಹ ಕಾರ್ಯಕ್ರಮ ಒಂದಷ್ಟು ಚೇತರಿಕೆ ನೀಡಲಿದೆ. ಪತ್ರಕರ್ತರು ಇಂತಹ ಕಾರ್ಯಕ್ರಮದಲ್ಲಿ ಹೆಚ್ಚಾಗಿ ಪಾಲ್ಗೊಳ್ಳುವಂತಾಗ ಬೇಕೆಂದರು.

ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷ ಎಂ.ಎನ್. ಚಂದ್ರಮೋಹನ್, ವಿರಾಜಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷ ಕೆ.ಕೆ. ರೆಜಿತ್ ಕುಮಾರ್, ಭಾರತೀಯ ಪತ್ರಕರ್ತರ ಒಕ್ಕೂಟ ಸದಸ್ಯ ಸುನಿಲ್ ಪೊನ್ನೆಟ್ಟಿ, ದುಬಾರೆ ರಿವರ್ ರ‌್ಯಾಫ್ಟಿಂಗ್ ಅಸೋಸಿಯೇಷನ್ ನಿರ್ದೇಶಕರಾದ ಶಿವರಾಮು, ವಿಜು ಗಣಪತಿ, ಪ್ರಫ್ತುಲ್ಲಾ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net