

ಮಡಿಕೇರಿ: ದುಬಾರೆ, ಬರಪೊಳೆಯಲ್ಲಿ ರ‌್ಯಾಫ್ಟಿಂಗ್ ಶುಲ್ಕ ೨೦೦ ರೂಪಾಯಿ ಹೆಚ್ಚಿಸಲು ಜಿಲ್ಲಾಧಿಕಾರಿ ಡಾ.ಬಿ.ಸಿ. ಸತೀಶ ಅಧ್ಯಕ್ಷತೆಯಲ್ಲಿ ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ರಿವರ್ ರ‌್ಯಾಫ್ಟಿಂಗ್ ನಿರ್ವಹಣೆ ಮತ್ತು ಮೇಲುಸ್ತುವಾರಿ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ರಿವರ್ ರ‌್ಯಾಫ್ಟಿಂಗ್ ಸಮಿತಿ ಸದಸ್ಯರಾದ ರತೀಶ್, ಪಿ.ಸಿ. ವಸಂತ, ಸಿ.ಎಸ್. ರತನ್, ಪೂವಯ್ಯ, ಪೊನ್ನಪ್ಪ ರ‌್ಯಾಫ್ಟಿಂಗ್ ದರ ಹೆಚ್ಚಿಸಲು ಮನವಿ ಮಾಡಿದರು. ದುಬಾರೆಯಲ್ಲಿ ೮೦೦, ಬರಪೊಳೆಯಲ್ಲಿ ೧,೨೦೦ ಹಾಗೂ ಕುಮಾರಧಾರದಲ್ಲಿ ೨೫೦ ರೂ. ಶುಲ್ಕ ಸಂಗ್ರಹಿಸಲು ಅನುಮತಿ ನೀಡಲಾಯಿತು.
ದುಬಾರೆಗೆ ವಾರಾಂತ್ಯದಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ಮೂಲ ಸೌಲಭ್ಯ ಮತ್ತಷ್ಟು ಹೆಚ್ಚಿಸಬೇಕಿದೆ. ಟಿಕೆಟ್ ಕೌಂಟರ್, ಶೌಚಾಲಯ, ಬಟ್ಟೆ ಬದಲಿಸುವ ಕೊಠಡಿ ವ್ಯವಸ್ಥೆ ಮಾಡಬೇಕು. ಆ ನಿಟ್ಟಿನಲ್ಲಿ ಸಂಬಂಧಪಟ್ಟವರು ಅಗತ್ಯ ಕ್ರಮ ವಹಿಸ ಬೇಕೆಂದರು.
ರಿವರ್ ರ‌್ಯಾಫ್ಟಿಂಗ್ ಬೋಟ್ ಸುಸ್ಥಿತಿಯಲ್ಲಿರಬೇಕು. ರ‌್ಯಾಫ್ಟಿಂಗ್ ಸಂದರ್ಭ ರಕ್ಷಣಾ ಕವಚ ಕಡ್ಡಾಯವಾಗಿ ಬಳಸಬೇಕು. ನುರಿತ ತಜ್ಞರು ಬೋಟ್ ನಡೆಸಬೇಕೆಂದು ನಿರ್ದೇಶನ ನೀಡಿದರು. ದುಬಾರೆಯಲ್ಲಿ ೬೫ ಬೋಟ್ ಕಾರ್ಯನಿರ್ವಹಿಸುತ್ತಿವೆ. ೮ ಬೋಟ್ ಹೆಚ್ಚುವರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಮತ್ತೊಂದು ಹೆಚ್ಚುವರಿ ಬೋಟ್ ಕಾರ್ಯನಿರ್ವಹಣೆಗೆ ಅನುಮತಿ ನೀಡಲಾಯಿತು.
ಬರಪೊಳೆಯಲ್ಲಿ ೩ ಬೋಟ್ ಕಾರ್ಯನಿರ್ವಹಿಸುತ್ತಿದ್ದು, ಹೆಚ್ಚುವರಿಯಾಗಿ ೩ ಬೋಟ್‌ಕಾರ್ಯನಿರ್ವಹಣೆಗೆ ಅನುಮತಿ ನೀಡಲಾಯಿತು. ಕುಮಾರಧಾರದಲ್ಲಿ ರ‌್ಯಾಫ್ಟಿಂಗ್ ನಡೆಸಲು ೨ ಸಂಸ್ಥೆ ಅರ್ಜಿ ಸಲ್ಲಿಸಿದ್ದು, ೪ ಬೋಟ್ ಕಾರ್ಯನಿರ್ವಹಣೆಗೆ ಅನುಮೋದನೆ ನಿಡಲಾಯಿತು.
ಬೋಟ್ ಸುಸ್ಥಿಯಲ್ಲಿರಬೇಕು. ಪ್ರವಾಸಿಗರಿಗೆ ಕಿರಿಕಿರಿ ಉಂಟಾಗದಂತೆ ನಡೆದುಕೊಳ್ಳಬೇಕು. ವಾಹನ ನಿಲುಗಡೆಗೆ ಮತ್ತಷ್ಟು ಸ್ಥಳಾವಕಾಶ ಕಲ್ಪಿಸುವುದು, ರ‌್ಯಾಫ್ಟ್ ನಡೆಸುವವರ ಪ್ರಮಾಣ ಪತ್ರ ಇರಬೇಕೆಂದು ಡಿಸಿ ಸ್ಪಷ್ಟ ನಿರ್ದೇಶನ ನೀಡಿದರು.
ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಯತೀಶ್ ಉಳ್ಳಾಲ್, ಸಮಿತಿ ಸದಸ್ಯರಾದ ಪಿ.ಚಂದನ್, ಲೋಕೋಪಯೋಗಿ ಇಲಾಖೆ ಎಇಇ ಹರ್ಷ, ಜಿಪಂ ಮುಖ್ಯಯೋಜನಾಧಿಕಾರಿ ಜಗದೀಶ್, ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ ಸಲಹೆಗಾರ ಮಂಜುನಾಥ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗೋಪಾಲ್, ನಂಜರಾಯಪಟ್ಟಣ ಗ್ರಾಪಂ ಪಿಡಿಒ ಕಲ್ಪನಾ, ಬೆಟ್ಟದಳ್ಳಿ ಗ್ರಾಪಂ ಪಿಡಿಒ ಕೆ. ರವಿ, ಜಿಲ್ಲಾ ಪ್ರವಾಸೋದ್ಯಮ ಸಮಾಲೋಚಕ ಜತೀನ್ ಬೋಪಣ್ಣ ಮತ್ತಿತರರು ಇದ್ದರು.