

ಮಡಿಕೇರಿ:
ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳ ಪೈಕಿ ಒಂದಾಗಿರುವ ದುಬಾರೆಯಲ್ಲಿ ಪ್ರವೇಶ ದರವನ್ನು ಸ್ವಲ್ಪ ಇಳಿಸಿದಂತೆ ಮಾಡಲಾಗಿದ್ದು, ಪ್ರವಾಸಿಗರ ಮೂಗಿಗೆ ತುಪ್ಪ ಸವರುವ ಕೆಲಸ ನಡೆದಿದೆ. ಆಗಸ್ಟ್ನಲ್ಲಿ ಮನಬಂದAತೆ ಶುಲ್ಕ ಏರಿಸಿದ್ದ ಅರಣ್ಯ ಇಲಾಖೆ ಇದೀಗ ತೀವ್ರ ವಿರೋಧದ ನಂತರ ಈ ಕ್ರಮ ತೆಗೆದುಕೊಂಡಿದೆ. ಸಾಮಾನ್ಯ ದಿನಗಳ ಪ್ರವೇಶ ಶುಲ್ಕ ಹಿಂದಿನAತೆಯೇ ಮುಂದುವರಿಸಲಾಗಿದ್ದು, ರಜಾ ದಿನಗಳಿಗೆ ಮಾತ್ರ ಕೊಂಚ ಕಡಿಮೆ ಮಾಡಲಾಗಿದೆ.
ಅರಣ್ಯ ಇಲಾಖೆಗೆ ಒಳಪಡುವ ಪ್ರವಾಸಿ ತಾಣಗಳು, ಟ್ರಕ್ಕಿಂಗ್ ಹಾದಿಗಳು, ಅರಣ್ಯದಲ್ಲಿ ಸಫಾರಿ, ಅರಣ್ಯ ಪ್ರದೇಶದ ಒಳಗೆ ಹಾದುಹೋಗುವ ರಸ್ತೆಗಳಿಗೆ ಶುಲ್ಕ...ಹೀಗೆ ಸಾಧ್ಯವಿರುವ ಎಲ್ಲಾ ಕಡೆಗಳಲ್ಲೂ ಮನಸೋಇಚ್ಛೆ ಹಣ ಸಂಗ್ರಹಕ್ಕೆ ಇಳಿದಿರುವ ಇಲಾಖೆಯ ಕಣ್ಣು ದುಬಾರೆ ಸಾಕಾನೆ ಶಿಬಿರ ಮೇಲೂ ಬಿದ್ದಿದ್ದ ಕಾರಣ ಆಗಸ್ಟ್ 1ರಿಂದ ಇಲ್ಲಿಯ ಪ್ರವೇಶ ಶುಲ್ಕ ದುಪ್ಪಟ್ಟು ಏರಿಸಲಾಗಿತ್ತು. ಈ ಮೂಲಕ 'ಬಜೆಟ್ ಪ್ರವಾಸಿ'ಗರನ್ನು ದುಬಾರೆ ಸಾಕಾನೆ ಶಿಬಿರದಿಂದ ದೂರ ಇಟ್ಟು 'ಕ್ಲಾಸ್ ಪ್ರವಾಸಿ'ಗರಿಗೆ ಮಾತ್ರ ಅವಕಾಶ ಕೊಡುವ ಹುನ್ನಾರ ನಡೆದಿರುವ ಬಗ್ಗೆ ಆರೋಪ ಕೇಳಿಬಂದಿತ್ತು.
ಒಂದು ವರ್ಷದ ಹಿಂದೆ ಒಮ್ಮಿಂದೊಮ್ಮೆಲೆ ದುಬಾರೆ ಪ್ರವೇಶ ಶುಲ್ಕ 150 ರೂ.ಗೆ ಹೆಚ್ಚಳ ಮಾಡಲಾಗಿತ್ತು. ಆಗಲೇ ಸ್ಥಳೀಯರು, ಪ್ರವಾಸಿಗರು ಹಾಗೂ ಪ್ರವಾಸೋದ್ಯಮಿಗಳು ತೀವ್ರ ವಿರೋಧ ವ್ಯಕ್ತ ಪಡಿಸಿದ್ದರು. ಆದರೆ ಇದನ್ನೆಲ್ಲಾ ಗಣನೆಗೆ ತೆಗೆದುಕೊಳ್ಳದ ಅರಣ್ಯ ಇಲಾಖೆ ಆಗಸ್ಟ್ನಿಂದ ಮತ್ತೆ ಪ್ರವೇಶ ದರ ಏರಿಕೆ ಮಾಡುವ ಮೂಲಕ ನೇರವಾಗಿ ಪ್ರವಾಸಿಗೆ ಜೇಬಿಗೆ ಕೈ ಹಾಕಿತ್ತು. ಸಾಮಾನ್ಯ ದಿನಗಳಲ್ಲಿ ಪ್ರವೇಶ ಶುಲ್ಕ ದೋಣಿ ಸಂಚಾರ ದರ ಸೇರಿ 180 ರೂ., ಶನಿವಾರ, ಭಾನುವಾರ, ಹಬ್ಬಗಳು, ಸರ್ಕಾರಿ ರಜಾ ದಿನಗಳಲ್ಲಿ ದೋಣಿ ಸಂಚಾರ ಸೇರಿ 275 ರೂ. ನಿಗದಿ ಮಾಡಲಾಗಿತ್ತು.
ಅರಣ್ಯ ಇಲಾಖೆ ಈ ನಿರ್ಧಾರ ತೆಗೆದುಕೊಳ್ಳುವ ಮೂಲಕ ಸಾಮಾನ್ಯ ಪ್ರವಾಸಿಗರನ್ನು ಸಾಕಾನೆ ಶಿಬಿರ ವೀಕ್ಷಣೆಯಿಂದ ವಂಚಿತರನ್ನಾಗಿ ಮಾಡಿದ ಆರೋಪ ಎದುರಿಸುವಂತಾಗಿತ್ತು. ಈ ಬೆಳವಣಿಗೆ ಜಿಲ್ಲೆಯ ಪ್ರವಾಸೋದ್ಯಮದ ಮೇಲೂ ನಕರಾತ್ಮಕ ಪರಿಣಾಮ ಬೀರಲು ಕಾರಣವಾಗಿತ್ತು. ಹಾಗಾಗಿ ಅರಣ್ಯ ಇಲಾಖೆಯ ಧನದಾಹಕ್ಕೆ ಎಲ್ಲಾ ವಲಯಗಳಿಂದಲೂ ತೀವ್ರ ವಿರೋಧ ವ್ಯಕ್ತವಾಗಿತ್ತು. ಶಾಸಕ ಡಾ. ಮಂತರ್ ಗೌಡ ಕೂಡ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಈ ವಿಷಯದಲ್ಲಿ ಬಿಸಿ ಮುಟ್ಟಿಸಿದ್ದರು.
ಶುಲ್ಕ ಹೆಚ್ಚಳಕ್ಕೆ ತೀವ್ರ ವಿರೋಧ ವ್ಯಕ್ತ ಆಗುತ್ತಿದ್ದಂತೆಯೇ ತನ್ನ ನಿರ್ಧಾರವನ್ನು ಸ್ವಲ್ಪ ಸಡಿಲಿಸಿರುವ ಅರಣ್ಯ ಇಲಾಖೆ ಸದ್ದಿಲ್ಲದೆ ಪ್ರವೇಶ ಶುಲ್ಕದಲ್ಲಿ ಸ್ವಲ್ಪ ಇಳಿಕೆ ಮಾಡಿದಂತೆ ತೋರಿಸುವ ಕೆಲಸ ಮಾಡಿದ್ದು, ಪ್ರವೇಶದ್ವಾರದ ಬಳಿ ಚಿಕ್ಕದಾಗಿ ಹೊಸ ದರಪಟ್ಟಿ ಅಳವಡಿಸಲಾಗಿದೆ. ಶನಿವಾರ, ಭಾನುವಾರ, ಹಬ್ಬಗಳು, ಸರ್ಕಾರಿ ರಜಾ ದಿನಗಳಲ್ಲಿ ದೋಣಿ ಸಂಚಾರ ಸೇರಿ 275 ರೂ. ಇದ್ದ ಪ್ರವೇಶ ದರ 210 ರೂ.ಗೆ ಇಳಿಸಲಾಗಿದೆ. ಸಾಮಾನ್ಯ ದಿನಗಳಲ್ಲಿ ಪ್ರವೇಶ ಶುಲ್ಕ ದೋಣಿ ಸಂಚಾರ ದರ ಸೇರಿ 180 ರೂ., ಇದ್ದಿದ್ದು ಹಾಗೆಯೇ ಮುಂದುವರಿಸಲಾಗಿದೆ. ಅರಣ್ಯ ಇಲಾಖೆಯ ಈ ಕಣ್ಣಾಮುಚ್ಚಾಲೆ ಆಟಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.
ಸಾಮಾನ್ಯ ದಿನಗಳಲ್ಲಿ ಆನೆಗಳನ್ನು ಸ್ನಾನ ಮಾಡಿಸುವ ಅನುಭವ ಪಡೆದುಕೊಳ್ಳಲು 300 ರೂ., ಶನಿವಾರ, ಭಾನುವಾರ, ಹಬ್ಬಗಳು, ಸರ್ಕಾರಿ ರಜಾ ದಿನಗಳಲ್ಲಿ ಇದಕ್ಕಾಗಿ 500 ರೂ. ಹೆಚ್ಚುವರಿಯಾಗಿ ಹಣ ಕೊಡಬೇಕು. ಕ್ಯಾಮೆರಾದಿಂದ ಫೋಟೋ ತೆಗೆಯುವುದಾದರೆ ಮತ್ತೆ 400 ರೂ. ಕೊಟ್ಟು ಟಿಕೆಟ್ ತೆಗೆದುಕೊಳ್ಳಬೇಕು. ಒಬ್ಬ ಪ್ರವಾಸಿಗ ದುಬಾರೆ ಸಾಕಾನೆ ಶಿಬಿರದ ಸಂಪೂರ್ಣ ಅನುಭವ ಪಡೆಯಲು ಕನಿಷ್ಠ ಸಾವಿರ ರೂ. ಇಟ್ಟುಕೊಳ್ಳಲೇಬೇಕಾದ ಪರಿಸ್ಥಿತಿಯ ಮೇಲೆ ಅರಣ್ಯ ಇಲಾಖೆಯ ಹೊಸ ನಿರ್ಧಾರ ಯಾವುದೇ ಪರಿಣಾಮ ಬೀರಿಲ್ಲ.
ಇದೀಗ ಶಾಲಾ ಮಕ್ಕಳ ಪ್ರವಾಸದ ಅವಧಿ ಶುರುವಾಗುತ್ತಿದೆ. ಆದರೆ ಅರಣ್ಯ ಇಲಾಖೆಯ ಈ ದುಬಾರಿ ಶುಲ್ಕದ ಕಾರಣದಿಂದ ಮಕ್ಕಳು ಇಲ್ಲಿ ಕಾವೇರಿ ನದಿ ಮಾತ್ರ ನೋಡಿ ಮರಳುವಂತಾಗಿದೆ. ಬಜೆಟ್ ಪ್ರವಾಸಿಗರಿಗೂ ದುಬಾರೆಯಲ್ಲಿ ನಿರಾಸೆಯೇ ಕಾದಿದೆ.
ಪ್ಯಾಕೇಜ್ ಪ್ರವಾಸ ಸಂಘಟಕರು ತಮ್ಮ ಕೊಡಗು ಪ್ರವಾಸದ ಪಟ್ಟಿಯಲ್ಲಿ ಅನಿವಾರ್ಯವಾಗಿದುಬಾರೆಯನ್ನು ಕೈಬಿಡುವಂತಾಗಿದೆ. ಇದರ ಬದಲು ಈಗ ಹಾರಂಗಿ ಅಣೆಕಟ್ಟೆ ಬಳಿ ಜಲಾಶಯದ ಹಿನ್ನೀರು ಪ್ರದೇಶದಲ್ಲಿರುವ ಸಾಕಾನೆ ಶಿಬಿರವನ್ನು ಸೇರಿಸಿಕೊಂಡಿದ್ದಾರೆ. ಇಲ್ಲಿಯ ಪ್ರವೇಶ ದರ 50 ರೂ. ಮಾತ್ರ. ದುಬಾರೆಗೆ ಹೋಲಿಸಿದರೆ ಇದು ಕಡಿಮೆ ಮೊತ್ತವಾಗಿದೆ. ಇದರಿಂದಾಗಿ ದುಬಾರೆ ಸಾಕಾನೆ ಮೇಲೆ ದುಷ್ಪರಿಣಾಮ ಬೀರುವಂತಾಗಿದೆ.
ಈ ಮಧ್ಯೆ ಮತ್ತೊಂದು ಬದಲಾವಣೆಯಾಗಿ ದುಬಾರೆ ಸಾಕಾನೆ ಶಿಬಿರಕ್ಕೆ ಮಂಗಳವಾರ ಕೊಡುತ್ತಿದ್ದ ರಜೆಯನ್ನು ಅರ್ಧ ದಿನಕ್ಕೆ ಮೊಟಕು ಮಾಡಲಾಗಿದೆ. ಸಾಮಾನ್ಯ ದಿನಗಳಲ್ಲಿ ಬೆಳಗ್ಗೆ 9ರಿಂದ 11 ಹಾಗೂ ಸಂಜೆ 4.30ರಿಂದ 5.30ರ ತನಕ ಸಾಕಾನೆ ಶಿಬಿರಕ್ಕೆ ಪ್ರವಾಸಿಗರಿಗೆ ಪ್ರವೇಶಾವಕಾಶ ಇದ್ದರೆ ಮಂಗಳವಾರ ಬೆಳಗ್ಗೆ 9ರಿಂದ 11 ಗಂಟೆ ತನಕ ಮಾತ್ರ ಒಳ ಬಿಡಲಾಗುತ್ತದೆ.
ದುಬಾರೆಯನ್ನು ದುಬಾರಿ ಮಾಡುವ ಮೂಲಕ ಇಲ್ಲಿಗೆ ಪ್ರವಾಸಿಗರು ಬಾರದಂತೆ ಮಾಡುವ ಹುನ್ನಾರ ನಡೆದಿದೆ. ಇಲ್ಲಿಯ ಆನೆ ಶಿಬಿರಕ್ಕೆ ಕಾಲಿಡಲು ಮೊದಲಿಗಿಂತ ಎರಡರಷ್ಟು ಹಣ ಪಾವತಿ ಮಾಡಬೇಕು. ತೀವ್ರ ವಿರೋಧದ ಕಾರಣ ಶುಲ್ಕದಲ್ಲಿ ಸ್ವಲ್ಪ ಇಳಿಕೆ ಮಾಡುವ ಮೂಲಕ ಕಣ್ಣೊರೆಸುವ ತಂತ್ರದ ಮೊರೆ ಹೋಗಿದೆ. ಇದರಿಂದ ಸಾಮಾನ್ಯ ಪ್ರವಾಸಿಗರಿಗೆ ಯಾವುದೇ ಪ್ರಯೋಜನ ಇಲ್ಲ. ಅರಣ್ಯ ಇಲಾಖೆ ಹೆಚ್ಚು ಹೆಚ್ಚು ಪ್ರವಾಸಿಗರನ್ನು ಆಕರ್ಷಿಸಲು ಯೋಜನೆ ರೂಪಿಸುವುದು ಬಿಟ್ಟು ನೇರವಾಗಿ ಅವರ ಜೇಬಿಗೆ ಕೈ ಹಾಕುವ ಮೂಲಕ ಸ್ಥಳೀಯ ಪ್ರವಾಸೋದ್ಯಮದ ಮೇಲೆ ಹೊಡೆತ ಬೀಳುವಂತೆ ಮಾಡಿದೆ.
ಕೆ.ಜಿ. ಮನು, ಸ್ಥಳೀಯ ನಿವಾಸಿ, ದುಬಾರೆ
ದುಬಾರೆ ಸಾಕಾನೆ ಶಿಬಿರದಲ್ಲಿ ಅರಣ್ಯ ಇಲಾಖೆ ಹಗಲು ದರೋಡೆ ಕುರಿತು ಶಾಸಕರ ಗಮನ ಸೆಳೆಯಲಾಗಿದೆ. ದುಬಾರೆಯನ್ನು ನಿರ್ಲಕ್ಷಿಸಿ ಹಾರಂಗಿ ಸಾಕಾನೆ ಶಿಬಿರಕ್ಕೆ ಹೆಚ್ಚು ಪ್ರವಾಸಿಗರನ್ನು ಸೆಳೆಯಲು ಹೀಗೆಲ್ಲಾ ಮಾಡುತ್ತಿರುವ ಸಾಧ್ಯತೆ ಇದೆ. ಶನಿವಾರ, ಭಾನುವಾರ, ಹಬ್ಬಗಳು, ಸರ್ಕಾರಿ ರಜಾ ದಿನಗಳಲ್ಲಿ ದೋಣಿ ಸಂಚಾರ ಸೇರಿ 275 ರೂ. ಇದ್ದ ಪ್ರವೇಶ ದರ 210 ರೂ.ಗೆ ಇಳಿಸಿರುವುದರಿಂದ ಯಾರಿಗೆ ಪ್ರಯೋಜನ ಆಗುತ್ತಿದೆ ? ಸಾಮಾನ್ಯ ದಿನಗಳಲ್ಲಿ ಪ್ರವೇಶ ಶುಲ್ಕ ದೋಣಿ ಸಂಚಾರ ದರ ಸೇರಿ 180 ರೂ., ಇದ್ದಿದ್ದು ಹಾಗೆಯೇ ಮುಂದುವರಿಸಲಾಗಿದೆ.
ಸಿ.ಎಲ್. ವಿಶ್ವ, ಗ್ರಾಮ ಪಂಚಾಯಿತಿ ಅಧ್ಯಕ್ಷ, ನಂಜರಾಯಪಟ್ಟಣ