ನನಸಾಗದ ತೂಗು ಸೇತುವೆಯ ಕನಸು

dubarae
Published on

ಮಡಿಕೇರಿ:

ಜಗತ್ಪçಸಿದ್ಧ ಪ್ರವಾಸಿ ತಾಣ ದುಬಾರೆ ದ್ವೀಪಕ್ಕೆ ಸಂಪರ್ಕ ಕಲ್ಪಿಸಲು ತೂಗುಸೇತುವೆ ಬೇಕು ಎನ್ನುವುದು ಸ್ಥಳೀಯರು ಮತ್ತು ಪ್ರವಾಸಿಗರ ಬಹಳ ಹಳೆಯ ಬೇಡಿಕೆ. ಆದರೆ ಸರ್ಕಾರದ ಇಲಾಖೆಗಳ ನಡುವಿನ ಸಮನ್ವಯತೆಯ ಕೊರತೆಯಿಂದ ಈ ಕನಸು ಇನ್ನೂ ಕೂಡ ನನಸಾಗಿಲ್ಲ. ಈ ಹಿಂದೊಮ್ಮೆ 2.23 ಕೋಟಿ ರೂ. ವೆಚ್ಚದಲ್ಲಿ ಇಲ್ಲಿ ತೂಗು ಸೇತುವೆ ನಿರ್ಮಾಣಕ್ಕೆ ಸರ್ಕಾರದಿಂದ ಮಂಜೂರಾತಿ ಸಿಕ್ಕಿದ್ದರೂ ಈ ಮೊತ್ತ ಸಾಕಾಗುವುದಿಲ್ಲ ಎನ್ನುವ ಕಾರಣಕ್ಕೆ ಪ್ರಸ್ತಾವನೆ ಹಿಂತೆಗೆದುಕೊAಡಿದ್ದ ಬೆಳವಣಿಗೆಯೂ ನಡೆದಿತ್ತು.

'ನದಿಯ ಮಾಲೀಕತ್ವ ಯಾರಿಗೆ ಸೇರಿದ್ದು?' ದಸರಾ ಆನೆಗಳು ಸೇರಿದಂತೆ 30ಕ್ಕೂ ಅಧಿಕ ಆನೆಗಳಿಗೆ ಆಶ್ರಯ ನೀಡುವ ಮೂಲಕ ಪ್ರವಾಸಿ ತಾಣವಾಗಿಯೂ ಪ್ರವರ್ಧಮಾನಕ್ಕೆ ಬಂದಿರುವ ಕೊಡಗಿನ ಕುಶಾಲನಗರ ತಾಲೂಕು ದುಬಾರೆ ಸಾಕಾನೆ ಶಿಬಿರದ ಬಳಿ ಹರಿಯುವ ಕಾವೇರಿ ನದಿಗೆ ಸಂಬAಧಿಸಿದAತೆ ಇಂಥದ್ದೊAದು ಪ್ರಶ್ನೆ ಹುಟ್ಟಿಕೊಂಡಿದೆ. ಇಲ್ಲಿಗೆ ತೀರಾ ಅಗತ್ಯವಾಗಿರುವ ತೂಗು ಸೇತುವೆ ನಿರ್ಮಾಣ ಕಾರ್ಯ ದಶಕಗಳಿಂದಲೂ ನೆನೆಗುದಿಗೆ ಬಿದ್ದಿರುವುದೇ ಇದಕ್ಕೆ ಕಾರಣ. ಪ್ರವಾಸೋದ್ಯಮ ಇಲಾಖೆ, ಅರಣ್ಯ ಇಲಾಖೆ, ಲೋಕೋಪಯೋಗಿ ಇಲಾಖೆ, ಒಳನಾಡು ಜಲಸಾರಿಗೆ ಇಲಾಖೆ, ಕಾವೇರಿ ನೀರಾವರಿ ನಿಗಮ, ಪುರಾತತ್ವ ಇಲಾಖೆ ಹಾಗೂ ಸ್ಥಳೀಯ ನಂಜರಾಯಪಟ್ಟಣ ಗ್ರಾ.ಪಂ.ಗೆ ದುಬಾರೆ ಜತೆಗೆ ಒಂದಿಲ್ಲೊAದು ನಂಟು ಇರುವುದರಿಂದ ತೂಗು ಸೇತುವೆಯ ಪ್ರಸ್ತಾಪ ಬಂದಾಗಲೆಲ್ಲಾ ಒಂದು ಇಲಾಖೆಯಿಂದ ಮತ್ತೊಂದು ಇಲಾಖೆ ಕಡೆಗೆ ಕೈ ತೋರಿಸುತ್ತಾ ಕಾಲ ಕಳೆಯುತ್ತಿರುವ ಆರೋಪ ವ್ಯಕ್ತವಾಗುತ್ತಿದೆ.

ನಂಜರಾಯಪಟ್ಟಣ ಮಾರ್ಗವಾಗಿ ದುಬಾರೆ ದ್ವೀಪದ ಸಾಕಾನೆ ಶಿಬಿರಕ್ಕೆ ತೆರಳುವವರು ಕಾವೇರಿ ನದಿಯನ್ನು ದಾಟಲೇ ಬೇಕು. ಬಿರು ಬೇಸಿಗೆಯ ಏಪ್ರಿಲ್, ಮೇ ತಿಂಗಳುಗಳಲ್ಲಿ ನೀರಿನ ಹರಿವು ಕಡಿಮೆ ಇರುವುದರಿಂದ ನದಿಯಲ್ಲಿನ ಕಲ್ಲುಗಳ ಮೇಲೆ ಸರ್ಕಸ್ ಮಾಡಿಕೊಂಡು ಹೇಗೋ ಆನೆ ಕ್ಯಾಂಪ್ ತಲುಪಬಹುದು. ಸ್ವಲ್ಪ ಎಚ್ಚರ ತಪ್ಪಿದರೆ ನೀರು ಪಾಲಾಗುವ ಅಪಾಯವೂ ಇಲ್ಲಿ ಇದ್ದಿದ್ದೇ. ಈ ರೀತಿ ಸಾಹಸ ಮಾಡಲು ಹೋಗಿ ಕಳೆದ 5 ವರ್ಷಗಳಲ್ಲಿ 12ಕ್ಕೂ ಅಧಿಕ ಪ್ರವಾಸಿಗರು ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಮಳೆಗಾಲದಲ್ಲಿ ಕಾವೇರಿ ನದಿ ತುಂಬಿ ಹರಿಯುವುದರಿಂದಲೂ ಅಪಾಯ ಸಾಮಾನ್ಯ. ಈ ಸಂದರ್ಭದಲ್ಲಿ ನದಿ ದಾಟಲು ಯಾಂತ್ರಿಕೃತ ದೋಣಿಗಳನ್ನು ಉಪಯೋಗಿಸಲಾಗುತ್ತದೆ. ದುಬಾರೆ ದ್ವೀಪದಲ್ಲಿರುವ ಗಿರಿಜನರ ಓಡಾಟಕ್ಕೆ, ಪ್ರವಾಸಿಗರನ್ನು ಕರೆದೊಯ್ಯಲು ಈ ದೋಣಿಗಳನ್ನು ಬಳಸಲಾಗುತ್ತದೆ. ಒಂದು ದೋಣಿ ದಿನಕ್ಕೆ ಕನಿಷ್ಠ 10 ಬಾರಿಯಾದರೂ ನದಿಯ ಎರಡೂ ದಂಡೆಗಳÀ ಮಧ್ಯೆ ಓಡಾಡುತ್ತದೆ. ಪ್ರವಾಸಿಗರ ಸಂಖ್ಯೆ ಹೆಚ್ಚಿರುವ ರಜಾ ದಿನಗಳಲ್ಲಂತೂ ದೋಣಿಗಳ ಟ್ರಿಪ್ ಸಂಖ್ಯೆ ಇನ್ನೂ ಹೆಚ್ಚಿರುತ್ತದೆ. ಇದರ ನೇರ ಪರಿಣಾಮ ನದಿ ಮಧ್ಯೆ ಇರುವ ದ್ವೀಪಗಳ ಮೇಲೆ ಆಗುತ್ತಿದ್ದು, ದೋಣಿಗಳು ಓಡಾಡುವುದರಿಂದ ಉಂಟಾಗುವ ನೀರಿನ ಅಲೆಗಳು ಅಪ್ಪಳಿಸಿ ದ್ವೀಪಗಳು ಕರಗುತ್ತಿರುವು ಆತಂಕವನ್ನು ಸ್ಥಳೀಯರು ವ್ಯಕ್ತಪಡಿಸುತ್ತಾರೆ.

ಯಾಂತ್ರಿಕೃತ ದೋಣಿಗಳ ನಿರಂತರ ಓಡಾಟದಿಂದ ದ್ವೀಪದ ಮಣ್ಣು ಕುಸಿಯುತ್ತಿದೆ. ಅಲ್ಲಿರುವ ಮರಗಳು ಒಂದೊAದಾಗಿ ನದಿ ಪಾಲಾಗುತ್ತಿದೆ. ಉಳಿದಿರುವ ಅಲ್ಪಸ್ವಲ್ಪ ಹಸಿರು ಕಾಡು ನದಿ ಪಾಲಾಗಲು ಕಾಯುತ್ತಿವೆ. ಹಾಗಾಗಿ ನದಿಯಲ್ಲಿರುವ ದ್ವೀಪಗಳ ರಕ್ಷಣೆಗೆ, ದುಬಾರೆ ಹಾಡಿಯಲ್ಲಿರುವ ಗಿರಿಜನರಿಗೆ ಹೊರ ಜಗತ್ತಿನ ಸಂಪರ್ಕ ಕಲ್ಪಿಸಲು, ಇಂಧನ ಸೋರಿಕೆಯಿಂದ ಆಗುತ್ತಿರುವ ಕಾವೇರಿ ನದಿ ಮಾಲಿನ್ಯಕ್ಕೆ ಕಡಿವಾಣ ಹಾಕಲು, ದುಬಾರೆ ಸಾಕಾನೆ ಶಿಬಿರವನ್ನು ಪ್ರವಾಸಿಗರ ಪಾಲಿಗೆ ಮತ್ತಷ್ಟು ಆಕರ್ಷಣೀಯಗೊಳಿಸಲು.. ಹೀಗೆ ಈ ಎಲ್ಲಾ ಕಾರಣಗಳಿಂದ ಇಲ್ಲಿಗೊಂದು ತೂಗು ಸೇತುವೆ ಅತ್ಯಗತ್ಯ ಎನ್ನುವ ಕೂಗು ಹಲವು ವರ್ಷಗಳಿಂದಲೇ ಇದೆ.

ತೂಗುಸೇತುವೆ ತಜ್ಞ ಸುಳ್ಯದ ಗಿರೀಶ್ ಭಾರದ್ವಾಜ್ ಈ ಹಿಂದೆಯೇ ಸ್ಥಳ ಪರಿಶೀಲನೆ ನಡೆಸಿದ್ದು, 2-3 ಬಾರಿ ಸರ್ವೆ ಕಾರ್ಯವನ್ನೂ ಮಾಡಿದ್ದಾರೆ. ಇದೀಗ ಅರಣ್ಯ ಇಲಾಖೆ ಮುಖಾಂತರ ತೂಗು ಸೇರುವೆ ನಿರ್ಮಾಣಕ್ಕೆ ಮುಂದಾಗಿರುವ ಮಾಹಿತಿ ಸಿಕ್ಕಿದ್ದು, ಅಂದಾಜು ಪಟ್ಟಿ ತಯಾರಿಸಲು ಲೋಕೋಪಯೋಗಿ ಇಲಾಖೆಗೆ ಕೇಳಿಕೊಳ್ಳಲಾಗಿದೆ. ಅಲ್ಲಿಂದ ಅಂದಾಜು ಪಟ್ಟಿ ಬಂದ ನಂತರ ಮುಂದಿನ ಪ್ರಕ್ರಿಯೆಗಳು ಶುರುವಾಗಲಿದೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.

ದುಬಾರೆಗೆ ತೂಗು ಸೇತುವೆ ಬೇಕು ಎನ್ನುವುದು ಸ್ಥಳೀಯರ ಬಹು ಹಳೆಯ ಬೇಡಿಕೆಯಾಗಿದೆ. ಪ್ರವಾಸಿಗರ ಅನುಕೂಲತೆ, ಆಕರ್ಷಣೆ ಮತ್ತು ದುಬಾರೆ ಗಿರಿಜನ ಹಾಡಿಯ ನಿವಾಸಿಗಳ ಸುರಕ್ಷತೆ ದೃಷ್ಟಿಯಿಂದ ತೂಗುಸೇತುವೆ ಇಲ್ಲಿಗೆ ಅಗತ್ಯವಾಗಿ ಬೇಕಿದೆ. ಅಧಿಕಾರಿಗಳ ಈ ನಿಟ್ಟಿನಲ್ಲಿ ಮನಸ್ಸು ಮಾಡಬೇಕು.

ರತೀಶ್, ಪ್ರವಾಸೋದ್ಯಮಿ, ದುಬಾರೆ ನಿವಾಸಿ

ದುಬಾರೆಗೆ ತೂಗು ಸೇತುವೆ ಅಗತ್ಯತೆ ಬಗ್ಗೆ ನಮ್ಮ ಪಂಚಾಯಿತಿ ವತಿಯಿಂದಲೂ ಸಂಬAಧಿಸಿದವರಿಗೆ ಮನವರಿಕೆ ಮಾಡಿಕೊಡಲಾಗಿದೆ. ಮಳೆಗಾಲದಲ್ಲಿ ಮಾತ್ರವಲ್ಲದೆ ಬೇಸಿಗೆಯಲ್ಲೂ ಇಲ್ಲಿಗೆ ತೂಗು ಸೇತುವೆ ಬೇಕು. ಈ ಹಿಂದೊಮ್ಮೆ ತೂಗು ಸೇತುವೆ ಮಂಜೂರು ಆಗಿದ್ದರೂ, ಅನುದಾನದ ಮೊತ್ತ ಕಡಿಮೆ ಆಯಿತು ಎನ್ನುವ ಕಾರಣಕ್ಕೆ ಅನುಷ್ಠಾನಕ್ಕೆ ಬಂದಿರಲಿಲ್ಲ.

ಸಿ.ಎಲ್. ವಿಶ್ವ, ಅಧ್ಯಕ್ಷ, ಗ್ರಾ.ಪಂ. ನಂಜರಾಯಪಟ್ಟಣ

ದುಬಾರೆಗೆ ತೂಗು ಸೇತುವೆ ನಿರ್ಮಾಣಕ್ಕೆ ಸಂಬAಧಿಸಿದ ಪ್ರಕ್ರಿಯೆಗಳು ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಈಗಾಗಲೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದಕ್ಕೆ ಪೂರಕವಾಗಿ ಲೋಕೋಪಯೋಗಿ ಇಲಾಖೆಯಿಂದ ಅಂದಾಜು ಪಟ್ಟಿ ತಯಾರಿಸಲು ಕೇಳಲಾಗಿದೆ. ಅಂದಾಜು ಪಟ್ಟಿ ಲಭ್ಯವಾದ ಕೂಡಲೇ ಮುಂದಿನ ಕೆಲಸಗಳು ಶುರುವಾಗುತ್ತದೆ.

ಬಿ. ಭಾಸ್ಕರ್, ಡಿಸಿಎಫ್, ಮಡಿಕೇರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net