ದುಬೈ ಯಕ್ಷಗಾನ ಅಭ್ಯಾಸ ಕೇಂದ್ರದ ಗೆಜ್ಜೆಸೇವೆ

.
.
Published on

ಪ್ರಮುಖ ಮುಖ್ಯಾಂಶಗಳು

  • ಆಗಸ್ಟ್ 2ರಂದು ಮಧ್ಯಾಹ್ನ 1.20ಕ್ಕೆ ಕಟೀಲಿನಲ್ಲಿ "ದಶಾವತಾರ' ಪ್ರಸಂಗ
  • ಆ. 8ರಂದು ಮಧ್ಯಾಹ್ನ 1.20ಕ್ಕೆ ಮಂಗಳಾದೇವಿ ದೇವಸ್ಥಾನದಲ್ಲಿ "ಸುದರ್ಶನೋಪಾಖ್ಯಾನ' ಪ್ರಸಂಗ
ಮಂಗಳೂರು: ಮಧ್ಯಪ್ರಾಚ್ಯದ ಏಕೈಕ ಹಾಗೂ ಸರ್ವಪ್ರಥಮ ಸಮಗ್ರ ಯಕ್ಷಗಾನ ಕಲಿಕಾ ಸಂಸ್ಥೆಯಾಗಿ ಹೆಸರಾಗಿರುವ ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ ದುಬೈ ಏಕಾದಶ ವರ್ಷೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸುತ್ತಿದ್ದು, ಈ ವಿಶೇಷ ಸಂದರ್ಭದಲ್ಲಿ ಕರಾವಳಿಯಲ್ಲಿ ಮೂರು ಮಹತ್ವದ ಕಾರ್ಯಕ್ರಮಗಳನ್ನು ಆಯೋಜಿಸಿದೆ.
ದುಬೈನ ಕಲಾವಿದರು ಆಗಸ್ಟ್ 2ರಂದು ಮಧ್ಯಾಹ್ನ 1.20ಕ್ಕೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸರಸ್ವತೀ ಸದನದಲ್ಲಿ "ದಶಾವತಾರ' ಪ್ರಸಂಗದ ಪ್ರದರ್ಶನದ ಮೂಲಕ ಶ್ರೀ ದೇವಿಯ ಸನ್ನಿಧಿಯಲ್ಲಿ ಗೆಜ್ಜೆಸೇವೆ ಸಲ್ಲಿಸಲಿದ್ದಾರೆ. ಮೂಡುಬಿದಿರೆಯ ಆಳ್ವಾಸ್ ವಿದ್ಯಾಗಿರಿಯ ಡಾ. ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅವರ 75ನೇ ಜನ್ಮಸಂವತ್ಸರ ಸರಣಿ ಕಾರ್ಯಕ್ರಮದ ಅಂಗವಾಗಿ ಆಳ್ವಾಸ್ ಯಕ್ಷಗಾನ ಅಧ್ಯಯನ ಕೇಂದ್ರದ ಸಹಯೋಗದಲ್ಲಿ "ಮೋಹಿನಿ ಏಕಾದಶಿ' ಯಕ್ಷಗಾನ ಪ್ರದರ್ಶನ ಹಾಗೂ ಡಾ. ಮೋಹನ ಆಳ್ವ ಗೌರವಾಭಿನಂದನೆ ಕಾರ್ಯಕ್ರಮ ನಡೆಯಲಿದೆ. ದುಬೈ ಯಕ್ಷಗಾನ ಅಭ್ಯಾಸ ಕೇಂದ್ರದ ಕಲಾವಿದರು ಕಲಾ ಪ್ರತಿಭೆಯನ್ನು ಅನಾವರಣಗೊಳಿಸಲಿದ್ದಾರೆ.
ಆಗಸ್ಟ್ 8ರಂದು ಮಧ್ಯಾಹ್ನ 1.20 ಗಂಟೆಗೆ ಮಂಗಳೂರಿನ ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದ ಸಭಾಂಗಣದಲ್ಲಿ "ಸುದರ್ಶನೋಪಾಖ್ಯಾನ' ಪ್ರಸಂಗದ ಮೂಲಕ ಮಂಗಳಾದೇವಿಯ ಸನ್ನಿಧಿಯಲ್ಲಿ ಗೆಜ್ಜೆಸೇವೆ ಹಾಗೂ 'ಯಕ್ಷ ಶ್ರೀ ರಕ್ಷಾ' ಗೌರವ ಪ್ರದಾನ ಸಮಾರಂಭ ನಡೆಯಲಿದೆ ಎಂದು ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇಯ ಸಂಚಾಲಕ ದಿನೇಶ್ ಶೆಟ್ಟಿ ಕೊಟ್ಟಾರಂಜ ವಿನಂತಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net