ದುಬೈಯಿಂದ 177 ಮಂದಿ ಮಂಗಳೂರಿಗೆ

mangalore airport new
Published on

ಮಂಗಳೂರು: ವಿದೇಶಗಳಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ಏರ್‌ಲಿಫ್ಟ್ ಮಾಡುವ ಯೋಜನೆ ‘ವಂದೇ ಭಾರತ್’ ಗುರುವಾರ ಚಾಲನೆ ಪಡೆದುಕೊಂಡಿದ್ದು, ಮಂಗಳೂರಿಗೆ ಪ್ರಥಮ ವಿಮಾನ ಮೇ 14ರಂದು ಆಗಮಿಸಲಿರುವುದು ಖಚಿತವಾಗಿದೆ.

ದುಬೈಯಿಂದ ವಿಮಾನ ಮಂಗಳೂರಿಗೆ ಮೇ 12ರಂದು ಬರಲಿದೆ ಎಂದು ಹೇಳಲಾಗಿತ್ತು. ಈಗ ದಿನಾಂಕ ಬದಲಾವಣೆಯಾಗಿದ್ದು, ಮೇ 14ರಂದು ಸಾಯಂಕಾಲ 4.10ಕ್ಕೆ ದುಬೈಯಿಂದ ವಿಮಾನ ಪ್ರಯಾಣ ಆರಂಭಿಸುವುದು ದೃಢಗೊಂಡಿದೆ. ರಾತ್ರಿ 9 ಗಂಟೆಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಲಿದ್ದು, ಒಟ್ಟು 177 ಪ್ರಯಾಣಿಕರು ಇರುತ್ತಾರೆ ಎನ್ನುವುದನ್ನು ದಕ್ಷಿಣ ಕನ್ನಡ ಜಿಲ್ಲಾಡಳಿತ ಖಚಿತಪಡಿಸಿದೆ.

ಮೇ 12ರಂದು ಕೇರಳದ ಕೋಯಿಕೋಡ್ ಮೂಲಕ ಕನ್ನಡಿಗರು ಭಾರತಕ್ಕೆ ಆಗಮಿಸಲು ಅವಕಾಶ ನೀಡುವ ಭರವಸೆ ನೀಡಲಾಗಿತ್ತು. ಆದರೆ ನಮಗೆ ಬೇಕಾಗುವ ವಿಮಾನ ಮಂಗಳೂರಿನಲ್ಲೇ ಬಂದಿಳಿಯಬೇಕು ಮತ್ತು ಈ ವಿಮಾನದಲ್ಲಿ ಪ್ರಯಾಣಿಸುವ ಎಲ್ಲರೂ ಕನ್ನಡಿಗರು ಆಗಿರಬೇಕು ಎನ್ನುವುದು ನಮ್ಮ ಬೇಡಿಕೆಯಾಗಿತ್ತು. ಈ ಬೇಡಿಕೆಗೆ ಕೇಂದ್ರದಿಂದ ಒಪ್ಪಿಗೆ ದೊರೆತಿದೆ. ವಿಮಾನ, ಸಮಯ ನಿಗದಿಯಾಗಿದೆ ಎಂದು ದುಬೈ ಅನಿವಾಸಿ ಭಾರತೀಯ ಕರ್ನಾಟಕ ವೇದಿಕೆ ಅಧ್ಯಕ್ಷ ಪ್ರವೀಣ್ ಶೆಟ್ಟಿ ’ವಿಜಯವಾಣಿ’ಗೆ ತಿಳಿಸಿದ್ದಾರೆ.

ಪ್ರಥಮ ಸುತ್ತಿನಲ್ಲೇ ಬಹ್ರೈನ್‌ನಿಂದ ಒಂದು ವಿಮಾನ ಬೆಂಗಳೂರಿಗೆ ಆಗಮಿಸಲಿದೆ. ಎರಡನೇ ಸುತ್ತಿನಲ್ಲಿ ದುಬೈಯಿಂದ ಮಂಗಳೂರು ಹಾಗೂ ಬೆಂಗಳೂರಿಗೆ ತಲಾ ಒಂದು ವಿಮಾನ ಒದಗಿಸುವಂತೆ ಕೇಂದ್ರವನ್ನು ಒತ್ತಾಯಿಸಿದ್ದೇವೆ ಎಂದು ಅವರು ತಿಳಿಸಿದರು.

ಎಷ್ಟು ವಿಮಾನಗಳು ಬರುತ್ತವೆ. ಇತರ ಯಾವ ದೇಶಗಳ ವಿಮಾನಗಳು ಮಂಗಳೂರಿಗೆ ಬರುತ್ತವೆ. ವಿಮಾನದಲ್ಲಿ ಬಂದಿಳಿಯುವ ಪ್ರಯಾಣಿಕರನ್ನು ಎಲ್ಲಿ ಕ್ವಾರಂಟೈನ್‌ನಲ್ಲಿ ಇಡಬೇಕು ಎಂದು ಯೋಜನೆ ರೂಪಿಸಲಾಗುತ್ತಿದೆ. ಇನ್ನೂ ಅಂತಿಮಗೊಂಡಿಲ್ಲ ಎಂದು ಮಂಗಳೂರು ಮಹಾನಗರ ಪಾಲಿಕೆ ಜಂಟಿ ನಿರ್ದೇಶಕಿ ಗಾಯತ್ರಿ ನಾಯಕ್ ತಿಳಿಸಿದ್ದಾರೆ.

ಗರ್ಭಿಣಿಯ ಆತಂಕ: ದುಬೈಯಿಂದ ಮಂಗಳೂರಿಗೆ ವಿಮಾನಯಾನ ಮಾಡಲು ಹೆಸರು ನೋಂದಣಿ ಮಾಡಿಕೊಂಡಿರುವ ಗರ್ಭಿಣಿಯೊಬ್ಬರು ವಿಚಿತ್ರ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಆಕೆಯ ಗರ್ಭದಲ್ಲಿರುವ ಮಗುವಿಗೆ ಶ್ವಾಸಕೋಶ ಸಂಬಂಧಿ ಸಮಸ್ಯೆ ಇದ್ದು, ಮೇ 27ರ ಒಳಗೆ ಅಬಾರ್ಷನ್ ಮಾಡಿಕೊಳ್ಳುವಂತೆ ವೈದ್ಯರು ಸೂಚಿಸಿದ್ದಾರೆ. ಗರ್ಭಪಾತ ಮಾಡಿಸಿಕೊಳ್ಳಲು ದುಬೈ ದೇಶದ ಕಾನೂನಿನಲ್ಲಿ ಅವಕಾಶವಿಲ್ಲ. ಆಕೆ ಸಾಕಷ್ಟು ಮುಂಚಿತವಾಗಿ ಭಾರತ ತಲುಪುವುದು ಅನಿವಾರ್ಯ ಎಂದು ಪ್ರವೀಣ್ ಶೆಟ್ಟಿ ವಿದೇಶಗಳಲ್ಲಿ ಬಾಕಿಯಾಗಿ ಸಂಕಷ್ಟ ಎದುರಿಸುವವರ ಬಗ್ಗೆ ಉದಾಹರಣೆ ನೀಡಿದರು.

ಮೊದಲ ಏರ್‌ಲಿಫ್ಟ್‌ಗೆ ಮಂಗಳೂರಿನ ಕ್ಯಾಪ್ಟನ್

ವಂದೇ ಭಾರತ್ ಮಿಷನ್‌ನ ಮೊದಲ ಏರ್‌ಲಿಫ್ಟ್‌ಗೆ ಮಂಗಳೂರಿನ ವೆಲೆನ್ಸಿಯಾ ನಿವಾಸಿ ಕ್ಯಾ.ಮೈಕಲ್ ಪೈಲಟ್ ಆಗಿದ್ದರು. ಅಬುಧಾಬಿಯಿಂದ ಗುರುವಾರ ಸಾಯಂಕಾಲ 6.45ಕ್ಕೆ ಹೊರಟು ರಾತ್ರಿ 10.17ಕ್ಕೆ ಕೇರಳದ ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಏರ್ ಇಂಡಿಯಾ ವಿಮಾನವನ್ನು ಮೈಕಲ್ ಅವರು ಇನ್ನೋರ್ವ ಪೈಲಟ್ ಅಖಿಲೇಶ್ ಜತೆ ಸುರಕ್ಷಿತವಾಗಿ ಮುನ್ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net