ದುಬೈ ಕನ್ನಡಿಗರಿಗೆ ತವರಿನಲ್ಲೂ ಸಂಕಷ್ಟ

mangalore airport new
Published on

ಮಂಗಳೂರು: ದುಬೈಯಿಂದ ಏರ್‌ಇಂಡಿಯಾ ವಿಮಾನದಲ್ಲಿ ಮಂಗಳವಾರ ರಾತ್ರಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಅನಿವಾಸಿ ಕನ್ನಡಿಗರು, ಊರಲ್ಲಿ ಅಗತ್ಯ ಸೌಕರ್ಯಗಳಿಲ್ಲದೆ ಮುಂಜಾನೆ ತನಕ ಅತಂತ್ರರಾಗಬೇಕಾಯಿತು ಎನ್ನುವ ಆಕ್ಷೇಪ ಕೇಳಿಬಂದಿವೆ.

ಆರೋಗ್ಯ ತಪಾಸಣೆ ಬಳಿಕ ಇಮಿಗ್ರೇಶನ್ ಪ್ರಕ್ರಿಯೆ ಪೂರ್ಣಗೊಂಡಿತು. ಬಳಿಕ ಚಪಾತಿ, ಪಲ್ಯದ ಪೊಟ್ಟಣ ಒದಗಿಸಲಾಯಿತು. ಆದರೆ ಊಟ ಅಥವಾ ಇತರ ತಿಂಡಿ ಇರಲಿಲ್ಲ. ಲಾಕ್‌ಡೌನ್ ಬಳಿಕ ದುಬೈಯಿಂದ ಬರುತ್ತಿರುವ ಮೊದಲ ವಿಮಾನವಾದ ಕಾರಣ ಅಧಿಕ ಸಂಖ್ಯೆಯಲ್ಲಿ ಇದ್ದ ಅಸ್ವಸ್ಥರು, ಗರ್ಭಿಣಿಯರು ಮತ್ತು ರಂಜಾನ್ ಉಪವಾಸದಲ್ಲಿದ್ದ ಪ್ರಯಾಣಿಕರಿಗೆ ಚಪಾತಿ, ಪಲ್ಯ ಪಥ್ಯವಾಗಿಲ್ಲ ಎಂದು ಕೆಲವು ಪ್ರಯಾಣಿಕರು ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ.

ಹಾಸ್ಟೆಲ್ ವ್ಯವಸ್ಥೆಯೂ ಇಲ್ಲ: ದುಬೈಯಿಂದ ಆಗಮಿಸಿದ 176 ಪ್ರಯಾಣಿಕರಲ್ಲಿ 150 ಮಂದಿ ಹೋಟೆಲ್ಗಳಲ್ಲಿ ಮುಂಗಡ ಬುಕಿಂಗ್ ಮಾಡಿಕೊಂಡಿದ್ದರು. ಉಳಿದ ಪ್ರಯಾಣಿಕರು ಜಿಲ್ಲಾಡಳಿತ ನಿಗದಿಪಡಿಸಿದ್ದ ಹಾಸ್ಟೆಲ್ಗಳಲ್ಲಿ ಉಳಿಯಲು ಬಯಸಿದ್ದರು. ಆದರೆ ಹಾಸ್ಟೆಲ್ ವ್ಯವಸ್ಥೆ ಪೂರ್ಣಗೊಂಡಿಲ್ಲ ಎಂದು ಅಧಿಕಾರಿಗಳು ತಿಳಿಸಿದರು. ಮುಂಜಾನೆ 4 ಗಂಟೆ ತನಕವೂ ವಿಮಾನ ನಿಲ್ದಾಣದಲ್ಲೇ ಉಳಿಸಿಕೊಂಡರು. ವೃದ್ಧರು, ಮಹಿಳೆಯರು, ಅನಾರೋಗ್ಯದಿಂದ ಇದ್ದವರು ಸಮಸ್ಯೆ ಎದುರಿಸಬೇಕಾಯಿತು. ಬಿಸ್ಕತ್ತು ಮತ್ತು ಕುಡಿಯುವ ನೀರಿಗೂ ಅಂಗಾಲಾಚುವ ಪರಿಸ್ಥಿತಿ ಎದುರಾಯಿತು ಎಂದು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ದೂರಿಕೊಂಡಿದ್ದಾರೆ.

ಸಮಸ್ಯೆ ನಡುವೆಯೂ ನೆರವು: ವಿಮಾನದಲ್ಲಿ ಆಗಮಿಸಿದ ಪ್ರಯಾಣಿಕರಲ್ಲಿ ದುಬೈನಲ್ಲಿ ಸಾಮಾನ್ಯ ಕೆಲಸ ಮಾಡುತ್ತಿದ್ದ ಕಾರ್ಮಿಕರು ಕೂಡ ಇದ್ದರು. ಎಲ್ಲರೂ ಶ್ರೀಮಂತರು ಆಗಿರಲಿಲ್ಲ. ದುಬೈನಲ್ಲಿ ಸಾಮಾನ್ಯ ಕಾರ್ಮಿಕರು ಆಗಿದ್ದವರು ಕೂಡ ಅದರಲ್ಲಿ ಇದ್ದರು. ಮಂಗಳೂರಿನಲ್ಲಿ ಲಭ್ಯವಿದ್ದ ಹೊಟೇಲ್ಗಳಲ್ಲಿ ದಿನಕ್ಕೆ ಕನಿಷ್ಠ 1 ಸಾವಿರ ರೂ.ಬಾಡಿಗೆ ಇತ್ತು. ಆದ್ದರಿಂದ ಅನೇಕ ಮಂದಿ ಹಾಸ್ಟೆಲ್ಗಳಲ್ಲೇ ಉಳಿಯಲು ಬಯಸಿದ್ದರು ಎಂದು ಪ್ರಯಾಣಿಕರೊಬ್ಬರು ತಿಳಿಸಿದ್ದಾರೆ. ಸಮಸ್ಯೆಗಳ ನಡುವೆಯೂ ಕೆಲ ಅಧಿಕಾರಿಗಳು ನೆರವಾಗಿದ್ದಾರೆ. ಸ್ಯಾನಿಟೈಸರ್ ಬಳಕೆ, ಸಾಮಾಜಿಕ ಅಂತರ ಪಾಲನೆ ಸಹಿತ ಅಗತ್ಯ ಮುಂಜಾಗರೂಕತಾ ಕ್ರಮಗಳ ಜತೆ ತಿನ್ನಲು ಬಿಸ್ಕತ್ತು, ಕುಡಿಯುವ ನೀರು ಒದಗಿಸಿ ಸಹಕರಿಸಿದರು. ಲಗೇಜ್ ಕೊಂಡೊಯ್ಯಲು ನೆರವಾದರು ಎಂದು ಕೆಲವು ಪ್ರಯಾಣಿಕರು ನೆನಪಿಸಿಕೊಂಡಿದ್ದಾರೆ.

ನಾನು ವಿಸಿಟಿಂಗ್ ವೀಸಾದಲ್ಲಿ 6 ತಿಂಗಳ ಹಿಂದೆ ಅಜ್ಮಾನ್‌ಗೆ ತೆರಳಿದ್ದೆ. ಎರಡು ತಿಂಗಳು ಕೆಲಸಕ್ಕಾಗಿ ಅಲೆದಾಡಿದೆ. 2 ತಿಂಗಳು ತಾತ್ಕಾಲಿಕ ಕೆಲಸ ಸಿಕ್ಕಿತು. ಅಷ್ಟರಲ್ಲೇ ಕರೊನ ಲಾಕ್‌ಡೌನ್ ಸಮಸ್ಯೆಗೆ ಸಿಲುಕಿದೆ. ಮತ್ತೆ 2 ತಿಂಗಳು ಕೆಲಸವಿಲ್ಲದೆ ರೂಮಲ್ಲೇ ಕಾಲ ಕಳೆದೆ. ಕೇರಳೀಯರೊಬ್ಬರ ನೆರವಿನಿಂದ ಊರು ಸೇರಿದೆ. ಎರಡು ವಾರಕ್ಕೆ ಕನಿಷ್ಠ 30 ಸಾವಿರ ರೂ.ಕಟ್ಟಿ ಕ್ವಾರಂಟೈನ್‌ಗೆ ಒಳಗಾಗುವುದಾದರೆ ನಾವು ಇಲ್ಲಿಗೆ ಯಾಕೆ ಬರಬೇಕು? ಗಲ್ಫ್‌ನಲ್ಲೇ ನಿಲ್ಲಬಹುದಿತ್ತೇನೋ ಎಂದು ಅನಿಸುತ್ತಿದೆ. ಮನ್ಸೂರ್, ಸೋಮೇಶ್ವರ ಉಚ್ಚಿಲ ನಿವಾಸಿ

ತೊಂದರೆಗೆ ಸಿಲುಕಿದ ಗರ್ಭಿಣಿ ‘ದುಬೈಯಿಂದ ಮಂಗಳೂರು ವಿಮಾನ ನಿಲ್ದಾಣ ತನಕ ಯಾವುದೇ ಸಮಸ್ಯೆ ಇರಲಿಲ್ಲ. ಪ್ರಯಾಣದ ಮೊದಲು ಭಾರತದಲ್ಲಿ ಎಲ್ಲ ವ್ಯವಸ್ಥೆ ಮಾಡಲಾಗುತ್ತದೆ. ಊಟ, ಸೂಕ್ತ ವಾಸ್ತವ್ಯ ವ್ಯವಸ್ಥೆ ಇರುತ್ತದೆ ಎಂದು ಭರವಸೆ ನೀಡಲಾಗಿತ್ತು. ಆದರೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಅಗತ್ಯ ವ್ಯವಸ್ಥೆ ಇರಲಿಲ್ಲ’ -ಇದು ವಿಮಾನದಲ್ಲಿ ದುಬೈಯಿಂದ ಮಂಗಳೂರಿಗೆ ಮಂಗಳವಾರ ರಾತ್ರಿ ತಲುಪಿದ ಏಳೂವರೆ ತಿಂಗಳ ಗರ್ಭಿಣಿಯೊಬ್ಬರ ಅಳಲು.

ವಿಮಾನ ನಿಲ್ದಾಣದಲ್ಲಿ ಕೂಲಿಯಾಳುಗಳು ಇರಲಿಲ್ಲ. ನಾನು ಗರ್ಭಿಣಿ ಎಂಬುದು ದೂರಕ್ಕೆ ಕಾಣುತ್ತಿದ್ದರೂ ಯಾರೂ ನೆರವಿಗೆ ಬರಲಿಲ್ಲ. ಪತಿ ದುಬೈಯಲ್ಲಿ ಉದ್ಯೋಗಿ. ನಾನು ಏಕಾಂಗಿಯಾಗಿ ಬಂದೆ. ಟ್ರಾಲಿಯಿಂದ ನನ್ನ ಲಗೇಜನ್ನು ನಾನೇ ಎತ್ತಿ ಹೊತ್ತೊಯ್ಯಬೇಕಾಯಿತು ಎಂದು ಮಾಧ್ಯಮ ಪ್ರತಿನಿಧಿ ಜತೆ ಅವರು ದುಃಖ ತೋಡಿಕೊಂಡರು.

ವಾಸ್ತವ್ಯ ವ್ಯವಸ್ಥೆಯೂ ಸಮರ್ಪಕ ಇರಲಿಲ್ಲ. ದಿನಕ್ಕೆ 1000 ರೂ.ಗಿಂತ ಕಡಿಮೆ ಬಾಡಿಗೆಯ ರೂಂ ಇರಲಿಲ್ಲ. ವಿಮಾನ ನಿಲ್ದಾಣದಲ್ಲೂ 4 ಗಂಟೆ ಕುಳ್ಳಿರಿಸಲಾಯಿತು. ಬಳಿಕ ನಿಲ್ದಾಣದಿಂದ ನಗರಕ್ಕೆ ಕೆಎಸ್ಸಾರ್ಟಿಸಿ ಬಸ್ ಪ್ರಯಾಣ. ಅಲ್ಲಿ ಹೊಟ್ಟೆನೋವು ಜೋರಾಗಿದ್ದು ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದೇನೆ ಎಂದು ವಿವರಿಸಿದರು.

ವೆನ್ಲಾಕ್ ಆಸ್ಪತ್ರೆಗೆ ಬುಧವಾರ ಬೆಳಗ್ಗೆ ಆಂಬುಲೆನ್ಸ್ ಸಿಬ್ಬಂದಿ ಜತೆಯಲ್ಲೇ ತೆರಳಿದ್ದೇನೆ. ಊರಿನಲ್ಲಿರುವ ಮನೆಮಂದಿ ಯಾರೂ ಪ್ರಯಾಣಿಕರನ್ನು ಭೇಟಿಯಾಗದಂತೆ ಜಿಲ್ಲಾಡಳಿತ ಈ ಮೊದಲೇ ಕಟ್ಟಾಜ್ಞೆ ವಿಧಿಸಿತ್ತು. ಹೋಟೆಲ್ ಕೊಠಡಿಯಲ್ಲಿ ಕೂಡ ತಾನೊಬ್ಬಳೇ ಇದ್ದು, ಮನೆಯ ಓರ್ವ ಸದಸ್ಯರನ್ನು ನೆರವಿಗೆ ನಿಲ್ಲಿಸಿಕೊಳ್ಳಲು ವಿನಂತಿಸಿರುವುದಾಗಿ ಅವರು ತಿಳಿಸಿದರು.

ಉಡುಪಿಯಲ್ಲಿ 49 ವಿದೇಶೀಯರಿಗೆ ಕ್ವಾರಂಟೈನ್

ಉಡುಪಿ: ದುಬೈಯಿಂದ ಮಂಗಳವಾರ ರಾತ್ರಿ ಮಂಗಳೂರಿಗೆ ಆಗಮನಿಸಿದ್ದ 49 ಮಂದಿಯನ್ನು ರಾತ್ರಿಯೇ ಬಸ್ಸಿನಲ್ಲಿ ಉಡುಪಿಗೆ ಕರೆತರಲಾಗಿದೆ. ಇವರ ಪೈಕಿ 44 ಮಂದಿ ಹೋಟೆಲ್ ಹಾಗೂ 5 ಮಂದಿ ಹಾಸ್ಟೆಲ್ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. ಇವರ ಗಂಟಲು ದ್ರವ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಹೊರ ರಾಜ್ಯದಿಂದ ಜಿಲ್ಲೆಗೆ ಬುಧವಾರ 233 ಮಂದಿ ಆಗಮಿಸಿದ್ದು, ಅವರೆಲ್ಲರನ್ನೂ ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net