ಡಿಟಿಡಿಎಂ ಕೋರ್ಸ್‌ಗೆ ಪ್ರವೇಶಾತಿ: ಪ್ರಾಂಶುಪಾಲ ಟಿ.ಶಿವಕುಮಾರ್ ಮಾಹಿತಿ

DTDM Course Admission Press Conference Mandya
Published on

ಮಂಡ್ಯ: ಮದ್ದೂರು ತಾಲೂಕು ಸೋಮನಹಳ್ಳಿಯಲ್ಲಿರುವ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ ಪ್ರಸಕ್ತ ಸಾಲಿನಲ್ಲಿ ಡಿಪ್ಲೊಮೊ ಇನ್ ಟೂಲ್ ಮತ್ತು ಡೈ ಮೇಕಿಂಗ್(ಡಿಟಿಡಿಎಂ) ಕೋರ್ಸ್‌ಗೆ ಪ್ರವೇಶಾತಿ ನಡೆಯುತ್ತಿದೆ. ಶೇ.100ರಷ್ಟು ಕೆಲಸದ ಖಚಿತತೆ ಇರುವ ಕೋರ್ಸ್‌ಗೆ ದಾಖಲಾತಿ ಪಡೆಯಬಹುದೆಂದು ಪ್ರಾಂಶುಪಾಲ ಟಿ.ಶಿವಕುಮಾರ್ ಹೇಳಿದರು.

ಪ್ರಸ್ತುತ ಕೆಲವೇ ಸೀಟುಗಳಷ್ಟೇ ಬಾಕಿ ಇವೆ. ಎಸ್ಸೆಸ್ಸೆಲ್ಸಿ ಉತ್ತೀರ್ಣರಾದವರು ಪ್ರಥಮ ವರ್ಷ ಹಾಗೂ ಐಟಿಐ ಮತ್ತು ಪಿಯುಸಿ ಉತೀರ್ಣರಾಗಿರುವವರು ಲ್ಯಾಟರಲ್ ಮೂಲಕ ದ್ವಿತೀಯ ವರ್ಷಕ್ಕೆ ಪ್ರವೇಶ ಪಡೆಯಬಹುದು. ಮೊದಲ ಬಂದವರಿಗೆ ಆದ್ಯತೆ ಸಿಗಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಹಿರಿಯ ಉಪನ್ಯಾಸಕ ನರೇಂದ್ರಬಾಬು ಮಾತನಾಡಿ, 4 ವರ್ಷದ ಕೋರ್ಸ್ ಇದಾಗಿದೆ. ಮೂರು ವರ್ಷ ವ್ಯಾಸಂಗದ ಬಳಿಕ ಕೊನೆಯ ಒಂದು ವರ್ಷ ಕಂಪನಿಗಳಲ್ಲಿ ಕಡ್ಡಾಯವಾಗಿ ತರಬೇತಿ ಪಡೆಯಬೇಕು. ಈ ವೇಳೆ ಮಾಸಿಕ ವೇತನ ಸಿಗಲಿದೆ. ನಂತರ ಅವರ ಕೌಶಲದ ಆಧಾರದಲ್ಲಿ ಕಂಪನಿಗಳನ್ನು ಆಯ್ಕೆ ಮಾಡಿಕೊಂಡು ಉತ್ತಮ ಬದುಕು ರೂಪಿಸಿಕೊಳ್ಳಬಹುದು. ಇನ್ನು ಪ್ರಮುಖವಾಗಿ ಇಂಗ್ಲೀಷ್ ಭಾಷೆಯಲ್ಲಿ ಕಲಿಯುವುದು ಕೆಲ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿತ್ತು. ಈ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷದಿಂದ ಕನ್ನಡದಲ್ಲಿಯೇ ಓದಲು ಹಾಗೂ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ. ಯಾವುದೇ ಸಮುದಾಯದ ವಿದ್ಯಾರ್ಥಿಯಾದರೂ ನಿಯಮದಂತೆ ಕುಟುಂಬದ ವಾರ್ಷಿಕ ಆದಾಯ ಮಿತಿಯೊಳಗಿದ್ದರೆ ವಿದ್ಯಾರ್ಥಿ ವೇತನ ಪಡೆಯಬಹುದು. ಈ ಕೋರ್ಸ್‌ನಲ್ಲಿ ಶೇ.70ರಷ್ಟು ಪ್ರಾಯೋಗಿಕ ಇರಲಿದೆ. ಜತೆಗೆ ವ್ಯಾಸಂಗ ಮುಗಿಸಿದವರಿಗೆ ಉದ್ಯೋಗದಲ್ಲಿಯೂ ಸಾಕಷ್ಟು ಅವಕಾಶಗಳಿವೆ ಎಂದು ವಿವರಿಸಿದರು.

ಹಿರಿಯ ಉಪನ್ಯಾಸಕ ಸಿದ್ದಾರ್ಥ ಮಾತನಾಡಿ, 2000ನೇ ಇಸವಿಯಲ್ಲಿ ನಮ್ಮ ಸಂಸ್ಥೆ ಪ್ರಾರಂಭವಾಯಿತು. ಈವರೆಗೆ 800 ವಿದ್ಯಾರ್ಥಿಗಳು ತರಬೇತಿ ಪಡೆದು ಉನ್ನತ ಹುದ್ದೆ, ವಿದೇಶದಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಮಾತ್ರವಲ್ಲದೆ ಸ್ವಂತ ಉದ್ದಿಮೆ ನಡೆಸುತ್ತಿದ್ದಾರೆ. ಮುಂದಿನ ವರ್ಷದಿಂದ ಎರಡು ಕೋರ್ಸ್‌ಗಳನ್ನು ಪ್ರಾರಂಭಿಸಲು ಅವಕಾಶ ಸಿಗಬಹುದು ಎಂದರು.

ಉಪನ್ಯಾಸಕ ಶರತ್‌ರಾಜ್ ಅರಸ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net