

ವಿಜಯಯವಾಣಿ ಸುದ್ದಿಜಾಲ ಉಡುಪಿ
ರಾಜ್ಯ ಗೃಹ ಸಚಿವರಾಗಿದ್ದ ಬಿಜೆಪಿಯ ಡಾ. ವಿ.ಎಸ್. ಆಚಾರ್ಯ ಅವರ ಕಾರ್ಯತತ್ಪರತೆ, ಜವಾಬ್ದಾರಿ, ಹೊಣೆಗಾರಿಕೆ, ಕರ್ತವ್ಯನಿಷ್ಠೆ ಎಲ್ಲರಿಗೂ ಪ್ರೇರಣಾದಾಯಕ. ಅವರ ಜೀವನಾದರ್ಶ ಎಂದಿಗೂ ಅನುಕರಣೀಯ. ರಾಜಕೀಯವನ್ನು ವೃತ್ತಿಯಾಗಿಸದೆ ವೃತವಾಗಿ ಸ್ವೀಕರಿಸಿ ಜನ ಸೇವೆಗೈದವರು. ರಾಜಕಾರಣ ಮತ್ತು ಆದರ್ಶಕ್ಕೆ ಇನ್ನೊಂದು ಹೆಸರು ಡಾ. ವಿ.ಎಸ್. ಆಚಾರ್ಯ ಎಂದು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅಭಿಮತ ವ್ಯಕ್ತಪಡಿಸಿದರು.
ಉಡುಪಿಯ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ದೀನದಯಾಳ್ ಚಾರಿಟೇಬಲ್ ಟ್ರಸ್ಟ್ (ರಿ.) ವತಿಯಿಂದ ಶನಿವಾರ ಸಂಜೆ ಆಯೋಜಿಸಿದ್ದ ನಗರಸಭಾ ವ್ಯಾಪ್ತಿಯ ಪ್ರೌಢಶಾಲೆಗಳಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪಂಡಿತ್ ದೀನದಯಾಳ್ ಉಪಾಧ್ಯಾಯ ಸ್ಮರಣ ಪಾರಿತೋಷಕ ಹಾಗೂ ಡಾ. ವಿ.ಎಸ್. ಆಚಾರ್ಯ ಸ್ಮರಣ ಪಾರಿತೋಷಕ ಮತ್ತು ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿನಿಯೋರ್ವಳಿಗೆ ಕುಮಾರಿ ಗಾಯತ್ರಿ ಸ್ಮರಣ ಪಾರಿತೋಷಕ ವಿತರಿಸಿ ಮಾತನಾಡಿದರು.
ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ ಮಾತನಾಡಿ, ಡಾ. ವಿ.ಎಸ್. ಆಚಾರ್ಯ ಅವರು ಮೃದು ಸ್ವಭಾವದವರಾಗಿದ್ದರೂ ಸಹ ಗಟ್ಟಿ ನಿರ್ಧಾರಕ್ಕೆ ಹೆಸರುವಾಸಿಯಾಗಿದ್ದರು. ಸಮಾಜಕ್ಕೆ ಏನು ಬೇಕು ಎನ್ನುವುದನ್ನು ತಿಳಿದು ಅನುಷ್ಠಾನ ಮಾಡಿದವರು ಎಂದರು. ಜೀವನದ ಪ್ರಗತಿಗೆ ದೊಡ್ಡ ಕನಸು ಕಾಣಬೇಕು. ಕನಸು ದೊಡ್ಡದಾದಂತೆ ಶ್ರಮವೂ ಹೆಚ್ಚಿರಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಉಡುಪಿ ನಗರಸಭೆಯ ಮಾಜಿ ಅಧ್ಯಕ್ಷ ಗುಜ್ಜಾಡಿ ಪ್ರಭಾಕರ ನಾಯಕ್ ಮಾತನಾಡಿ, ಟ್ರಸ್ಟ್ ನ ಉದ್ದೇಶ ತಿಳಿಸಿದರು. ಡಾ. ಶ್ಯಾಮಾ ಪ್ರಸಾದ್ ಮುಖರ್ಜಿ, ಪಂ.ದೀನದಯಾಳ್ ಉಪಾಧ್ಯಾಯ ಹಾಗೂ ಡಾ. ವಿ.ಎಸ್. ಆಚಾರ್ಯ ಅವರ ಜೀವನತತ್ವ ಮತ್ತು ಸಾಧನೆ ಕುರಿತು ವಿದ್ಯಾರ್ಥಿಗಳಿಗೆ ವಿವರಿಸಿದರು.
ಉಡುಪಿ ನಗರಸಭೆ ವ್ಯಾಪ್ತಿಯ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಒಟ್ಟು 36 ಪ್ರೌಢಶಾಲೆಗಳಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚು ಅಂಕ ಗಳಿಸಿದ 38 ವಿದ್ಯಾರ್ಥಿಗಳಿಗೆ ಪಾರಿತೋಷಕ ವಿತರಿಸಲಾಯಿತು.
ಟ್ರಸ್ಟ್ ನ ಉಪಾಧ್ಯಕ್ಷೆ ರಶ್ಮಿ ಆರ್. ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟ್ ನ ನಿಕಟಪೂರ್ವ ಅಧ್ಯಕ್ಷ ಮೋಹನ ಉಪಾಧ್ಯಾಯ ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತನಾಡಿದರು. ಟ್ರಸ್ಟಿಗಳಾದ ವಿಶ್ವನಾಥ್ ಭಟ್, ನಯನಾ ಗಣೇಶ್, ಕೆ.ಟಿ. ಪ್ರಸಾದ್ ಹಾಗೂ ಪಾಲಕರು ಮತ್ತು ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಇದ್ದರು.
ಟ್ರಸ್ಟಿ ದಿನಕರ ಶೆಟ್ಟಿ ಹೆರ್ಗ ಕಾರ್ಯಕ್ರಮ ನಿರೂಪಿಸಿದರು.
ದೃಷ್ಟಾರರಾಗಿದ್ದ ಡಾ. ವಿ.ಎಸ್. ಆಚಾರ್ಯ ಅವರು ಉಡುಪಿಯ ಅಭಿವೃದ್ಧಿಗೆ ವಿಶೇಷ ಕೊಡುಗೆ ನೀಡಿದ್ದಾರೆ. ನವ ಉಡುಪಿಯ ನಿರ್ಮಾತೃರಾದ ಅವರ ದೂರದರ್ಶಿತ್ವ, ಹೊಸ ಚಿಂತನೆಗಳು, ತತ್ವಾದರ್ಶಗಳು ನಮಗೆಲ್ಲರಿಗೂ ಸ್ಫೂರ್ತಿದಾಯಕ. ಯಶ್‌ಪಾಲ್ ಸುವರ್ಣ. ಶಾಸಕ, ಉಡುಪಿ