ಅಂಬೇಡ್ಕರ್ ಪುತ್ಥಳಿ ಸ್ಥಾಪನೆಗೆ ಡಿಎಸ್‌ಎಸ್ ಮನವಿ

HUN-OCT-13-3(DSS MEMORENDUM)
Published on


ಹುಣಸೂರು : ಹುಣಸೂರು ನಗರದ ಪ್ರಮುಖ ಸ್ಥಳದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಸ್ಥಾಪಿಸುವಂತೆ ಆಗ್ರಹಿಸಿ ದಲಿತ ಸಂಘಟನೆಗಳು ಶಾಸಕ ಜಿ.ಡಿ. ಹರೀಶ್‌ಗೌಡರಿಗೆ ಮನವಿ ಸಲ್ಲಿಸಿದರು.


ಶನಿವಾರ ನಗರಸಭೆ ಆವರಣದಲ್ಲಿ ಮನವಿ ಸಲ್ಲಿಸಿ ಮಾತನಾಡಿದ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ನಿಂಗರಾಜ ಮಲ್ಲಾಡಿ, ಹುಣಸೂರು ಉಪವಿಭಾಗ ಮಟ್ಟದ ಕೇಂದ್ರವಾಗಿದ್ದು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ಇತರೆ ತಳ ಸಮುದಾಯಗಳು ವಾಸಮಾಡುವ ಪ್ರಮುಖ ಸ್ಥಳವಾಗಿದೆ. ಸಾಮಾಜಿಕ ನ್ಯಾಯದ ಹರಿಕಾರ ಡಿ.ದೇವರಾಜ ಅರಸು ಪ್ರತಿನಿಧಿಸಿರುವ ಕೇಂದ್ರವೂ ಇದಾಗಿದೆ. ಇಂತಹ ಸ್ಥಳದಲ್ಲಿ ಅಂಬೇಡ್ಕರ್ ಪ್ರತಿಮೆ ಸ್ಥಾಪನೆ ಮಾಡುವಂತೆ ಕಳೆದ ಹತ್ತಾರು ವರ್ಷಗಳಿಂದ ಹಲವಾರು ಸಭೆ ಸಮಾರಂಭಗಳಲ್ಲಿ ಮನವಿ ಮಾಡುತ್ತಾ ಬರುತ್ತಿದ್ದರೂ ತಾಲೂಕು ಆಡಳಿತವಾಗಲೀ, ಹುಣಸೂರು ನಗರಸಭೆಯಾಗಲಿ, ಜನರಿಂದ ಆಯ್ಕೆಯಾದ ಶಾಸಕರಾಗಲಿ ದಲಿತರ ಮನವಿಗೆ ಯಾವುದೇ ರೀತಿಯ ಸ್ಪಂದನೆ ಮಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.


ಇಂತಹ ಮಹಾನ್ ನಾಯಕರ ಪ್ರತಿಮೆಯನ್ನು ಹುಣಸೂರು ನಗರದಲ್ಲಿ ಸ್ಥಾಪನೆ ಮಾಡದಿರುವುದು ವಿಷಾದದ ಸಂಗತಿ. ಹುಣಸೂರು ನಗರಸಭೆಗೆ ಹಲವಾರು ಬಾರಿ ಮನವಿ ಮಾಡಿದ್ದರೂ ನಗರಸಭೆಯ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಪ್ರತಿಮೆ ಸ್ಥಾಪನೆ ಮಾಡಲು ತಾತ್ಸಾರ ತೋರುತ್ತಿದ್ದಾರೆ. ನಗರದ ಸಂವಿಧಾನ ವೃತ್ತದ ನಗರಸಭೆಯ ಮೈದಾನದ ಪಕ್ಕದಲ್ಲಿ 40*40 ಅಳತೆಯ ಜಾಗವನ್ನು ಗುರುತಿಸಿ ಈ ಜಾಗದಲ್ಲಿ ಉದ್ಯಾನ, ಅಂಬೇಡ್ಕರ್ ಪ್ರತಿಮೆಯನ್ನು ಬಹುಕೋಟಿಗಳ ವೆಚ್ಚದಲ್ಲಿ ನಿರ್ಮಾಣ ಮಾಡಬೇಕೆಂದು ಒತ್ತಾಯಿಸಿದರು.


ವಕೀಲ ಪುಟ್ಟರಾಜು ಮಾತನಾಡಿ, ನಿಮ್ಮ ತಂದೆಯವರು ಹುಣಸೂರಿನ ಶಾಸಕರಾದಾಗಿನಿಂದಲೂ ಅಂಬೇಡ್ಕರ್ ಪುತ್ಥಳಿಯನ್ನು ಹುಣಸೂರು ನಗರದಲ್ಲಿ ಸ್ಥಾಪನೆ ಮಾಡುವಂತೆ ಮನವಿ ಮಾಡುತ್ತಾ ಬರುತ್ತಿದ್ದರೂ ಎಲ್ಲರೂ ನಿರ್ಲಕ್ಷಿಸಿದ್ದಾರೆ. ತಾವಾದರೂ ಹುಣಸೂರು ನಗರದ ಸಂವಿಧಾನ ವೃತ್ತದ ಬದಿಯಲ್ಲಿ ಅಂಬೇಡ್ಕರ್ ಪುತ್ಥಳಿಯನ್ನು ಬಹುಕೋಟಿಗಳ ವೆಚ್ಚದಲ್ಲಿ ನಿರ್ಮಾಣ ಮಾಡಬೇಕೆಂದು ಮನವಿ ಮಾಡಿದರು.


ಮನವಿ ಸ್ವೀಕರಿಸಿ ಮತನಾಡಿದ ಶಾಸಕ ಜಿ.ಡಿ.ಹರೀಶ್‌ಗೌಡ, ಈ ಬಗ್ಗೆ ನಾನು ಆದ್ಯತೆ ಮೇರೆಗೆ ನಗರಸಭೆ ಕೌನ್ಸಿಲ್‌ರೊಂದಿಗೆ ಚರ್ಚಿಸಿ ಒಮ್ಮತದ ತೀರ್ಮಾನ ಕೈಗೊಳ್ಳುತ್ತೇನೆ. ಬಹುಕೋಟಿ ರೂ.ವೆಚ್ಚದಲ್ಲಿ ಅಂಬೇಡ್ಕರ್ ಪ್ರತಿಮೆ ಮತ್ತು ಉದ್ಯಾನ ನಿರ್ಮಿಸಲು ಕ್ರಮವಹಿಸುತ್ತೇನೆ ಎಂದರು.


ನಗರಸಭಾ ಅಧ್ಯಕ್ಷರಾದ ಶರವಣ, ಪೌರಾಯುಕ್ತೆ ಕೆ.ಮಾನಸಾ, ಸದಸ್ಯರಾದ ದೊಡ್ಡಹೆಜ್ಜೂರು ರಮೇಶ, ಕೃಷ್ಣರಾಜಗುಪ್ತ, ಸತೀಶ್, ದಲಿತ ಮುಖಂಡರಾದ ಬಸವಲಿಂಗಯ್ಯ, ಡೀಡ್ ಸಂಸ್ಥೆಯ ಡಾ.ಎಸ್.ಶ್ರೀಕಾಂತ್, ಆದಿಜಾಂಬವ ಸಂಘದ ಬಿ.ಶಿವಣ್ಣ, ರತ್ನಪುರಿ ಪುಟ್ಟಸ್ವಾಮಿ, ದೇವೇಂದ್ರ ಕುಳುವಾಡಿ, ಕಿರಿಜಾಜಿ ಗಜೇಂದ್ರ, ಬಲ್ಲೇನಹಳ್ಳಿ ಕೆಂಪರಾಜು, ಕೊಳಗಟ್ಟ ಕೃಷ್ಣ, ಅತ್ತಿಕುಪ್ಪೆ ರಾಮಕೃಷ್ಣ, ಸಿದ್ದೇಶ, ಅಂಬೇಡ್ಕರ್ ಸೇನೆಯ ನಾಗೇಶ್, ದೊಡ್ಡಹೆಜ್ಜೂರು, ಸಂತೋಷ್ ಕೆ.ಎಂ.ವಾಡಿ, ಸೋಮನಹಳ್ಳಿಯ ಕೆಂಪರಾಜು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net