

ಮೈಸೂರು: ಸಮಾಜದಲ್ಲಿ ಶಾಂತಿ ಕದಡುತ್ತಿರುವ ಆರ್‌ಎಸ್‌ಎಸ್ ಸಂಘಟನೆಯನ್ನು ನಿಷೇಧಿಸಬೇಕು ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಬೆದರಿಕೆಯೊಡ್ಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ವತಿಯಿಂದ ನಗರದ ಪುರಭವನ ಆವರಣದ ಅಂಬೇಡ್ಕರ್ ಪ್ರತಿಮೆ ಎದುರು ಪ್ರತಿಭಟನೆ ನಡೆಯಿತು.
ಸರ್ಕಾರಿ ಶಾಲಾ, ಕಾಲೇಜುಗಳ ಮೈದಾನ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಮುಗ್ಧ ಮಕ್ಕಳು ಹಾಗೂ ಜನಸಾಮಾನ್ಯರನ್ನು ಕೋಮು ಗಲಬೆ, ಸಾಮೂಹಿಕ ಹಿಂಸಾಚಾರಕ್ಕೆ ಪ್ರಚೋದಿಸುತ್ತಿರುವ ಆರ್‌ಎಸ್‌ಎಸ್ ಸಂಘಟನೆಯನ್ನು ನಿಷೇಧಿಸಬೇಕು ಎಂದು ದಸಂಸ ಜಿಲ್ಲಾ ಸಂಚಾಲಕ ಚೋರನಹಳ್ಳಿ ಶಿವಣ್ಣ ಒತ್ತಾಯಿಸಿದರು.
ದೇಶದಲ್ಲಿ ಚಾತುವರ್ಣ ವ್ಯವಸ್ಥೆ ಮರುಸ್ಥಾಪನೆಗಾಗಿ ದೇಶದ ಸಂವಿಧಾನದ ಸಮಾನತೆಯ ಆಶಯಗಳನ್ನು ಆರ್‌ಎಸ್‌ಎಸ್ ವಿರೋಧಿಸುತ್ತಾ ಬಂದಿದೆ. ಇದೀಗ ತನ್ನ 100 ವರ್ಷಗಳ ಸಂಭ್ರಮಾಚರಣೆ ಹೆಸರಿನಲ್ಲಿ ಮಾರಕಾಸ್ತ್ರಗಳನ್ನು ಸಾರ್ವಜನಿಕವಾಗಿ ಪ್ರದರ್ಶಿ ಸುತ್ತಾ ಹಿಂಸೆಗೆ ಪ್ರಚೋದನೆ ನೀಡುತ್ತಿದೆ. ಆರ್‌ಎಸ್‌ಎಸ್ ಕುರಿತು ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆಗೆ ಬೆದರಿಕೆ ಒಡ್ಡಲಾಗುತ್ತಿದೆ. ಕೂಡಲೇ ಆರೋಪಿಗಳನ್ನು ಗುರುತಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ದಸಂಸ ಮುಖಂಡರಾದ ಕೆ.ವಿ.ದೇವೇಂದ್ರ, ಕಿರಂಗೂರು ಸ್ವಾಮಿ, ನಟರಾಜ್ ಹಾರೋಹಳ್ಳಿ, ಶಂಭುಲಿಂಗ ಸ್ವಾಮಿ, ತಳೂರು ಸಂತೋಷ್, ಬೊಮ್ಮನಹಳ್ಳಿ ಮಹದೇವ್, ಯಡದೊರೆ ಮಹದೇವಯ್ಯ, ವರುಣ ಮಹೇಶ್, ಸಣ್ಣಮಾದು, ಚಿಕ್ಕ ನಿಂಗಯ್ಯ, ಸುರೇಶ್ ಕುಮಾರ್ ಹಾಗೂ ಇತರರು ಪಾಲ್ಗೊಂಡಿದ್ದರು.