

ಕಾರವಾರ: ಒಕ್ಕಲಿಗರು ಹಾಗೂ ಲಿಂಗಾಯತ ಸಮುದಾಯಗಳ ವಿರೋಧಗಳನ್ನು ಪರಿಗಣಿಸದೇ ಕಾಂತರಾಜ್ ನೇತೃತ್ವದ ಸಮಿತಿಯ ಜಾತಿ ಗಣತಿಯ ವರದಿಯಲ್ಲಿನ ಶಿಫಾರಸುಗಳನ್ನು ಜಾರಿಗೆ ತರುವಂತೆ ಆಗ್ರಹಿಸಿ ಬಿ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಸದಸ್ಯರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು. ನಗರದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನೆ ನಡೆಸಿ, ನಂತರ ಮುಖ್ಯಮಂತ್ರಿಗಳಿಗೆ ಬರೆದ ಪತ್ರವನ್ನು ಅಪರ ಜಿಲ್ಲಾಽಕಾರಿ ಪ್ರಕಾಶ ರಜಪೂತ ಅವರ ಮೂಲಕ ಸಲ್ಲಿಸಿದರು. ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಎಸ್.ಫಕೀರಪ್ಪ, 2015-16 ರಲ್ಲಿ ಕಾಂತರಾಜ್ ಅವರ ನೇತೃತ್ವದಲ್ಲಿ ಆಯೋಗ ರಚನೆ ಮಾಡಿ, ರಾಜ್ಯದ ಪ್ರತಿ ಕುಟುಂಬಗಳ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಮತ್ತು ಜಾತಿಯ ಸಮೀಕ್ಷೆ ಮಾಡಲಾಯಿತು. ಅದಕ್ಕಾಗಿ ಸರ್ಕಾರ ಕೋಟ್ಯಂತರ ರೂ. ಖರ್ಚು ಮಾಡಿದೆ. ಈಗ ವರದಿ ನೀಡಿದ ಶಿಫಾರಸುಗಳನ್ನು ಜಾರಿ ಮಾಡುವ ಹಂತ ಬಂದಾಗ ಲಿಂಗಾಯತ ಹಾಗೂ ಒಕ್ಕಲಿಗರು ವಿರೋಧ ಮಾಡುತ್ತಿದ್ದಾರೆ. ಎಂಎಲ್‌ಎ, ಎಂಪಿ ಸೀಟು ಹಾಗೂ ಸಚಿವಗಿರಿ ಪಡೆಯುವಾಗ ತಮ್ಮ ಸಮುದಾಯದ ಜನಸಂಖ್ಯೆ ಹೆಚ್ಚು ಎಂದು ವಾದಿಸುವ ಪ್ರಬಲ ಸಮುದಾಯಗಳು ಈಗ ಜಾತಿ ಗಣತಿಗೆ ವಿರೋಧ ಮಾಡುತ್ತಿರುವುದರ ಹಿಂದಿನ ಮರ್ಮವೇನು ಎಂಬುದು ಅರ್ಥವಾಗುತ್ತಿದೆ ಎಂದರು. ಶ್ರೀರಂಗಪಟ್ಟಣದ ಕಾರ್ಯಕ್ರಮವೊಂದರಲ್ಲಿ ಮುಸ್ಲಿಂ ಮಹಿಳೆಯರ ಬಗ್ಗೆ ಮಾತನಾಡಿದ ಕಲ್ಲಡ್ಕ ಪ್ರಭಾಕರ ಭಟ್, ಇಡೀ ಹೆಣ್ಣು ಕುಲಕ್ಕೆ ಅಪಮಾನ ಮಾಡಿದ್ದಾರೆ. ಅವರನ್ನು ಬಂಽಸಬೇಕು. ಚಿಕ್ಕಮಗಳೂರು ಜಿಲ್ಲೆಯ ತರಿಕೆರೆ ತಾಲೂಕು ಗೊಲ್ಲರ ಹಟ್ಟಿ ಗ್ರಾಮದಲ್ಲಿ ಇತ್ತೀಚೆಗೆ ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣವೊಂದು ನಡೆದಿದೆ. ಅಲ್ಲಿ ಹಾಗೂ ರಾಜ್ಯದ ವಿವಿಧೆಡೆ ಅಸ್ಪçಶ್ಯತೆ ಆಚರಣೆ ಇನ್ನೂ ಜೀವಂತವಾಗಿದ್ದು, ಅದನ್ನು ತಡೆಯಲು ಸರ್ಕಾರ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು. ಮಂಜುನಾಥ ಹಳ್ಳೇರ, ಗೋಪಾಲ ನಡಕಿನಮನಿ, ಬಸವರಾಜ ಹಳಮ್ಮನವರ್, ಸಂತೋಷ ಎಸ್.ಕಟ್ಟಿಮನಿ, ಸಂಗೀತಾ ವಾಗ್ಮೋರೆ, ಪರಶುರಾಮ ನಾಯಕ ಇತರರು ಇದ್ದರು.
ಇದನ್ನೂ ಓದಿ: ಮತ್ತೆ ಜಿಲ್ಲೆಯಲ್ಲಿ ಮಂಗನ ಕಾಯಿಲೆ ಆತಂಕ