

ಮಂಡ್ಯ: ಮಂಡ್ಯ ತಾಲೂಕು ಹಾಡ್ಯ ಗ್ರಾಪಂ ಪಿಡಿಒ ಹಾಗೂ ಶ್ರೀರಂಗಪಟ್ಟಣ ತಾಲೂಕು ಮಹದೇವಪುರ ಗ್ರಾಪಂ ಪಿಡಿಒ ಅಮಾನತು ಮಾಡಬೇಕೆಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಹಾಡ್ಯ ಗ್ರಾಮದ 8 ಕುಟುಂಬಗಳಿಗೆ ಸರ್ಕಾರದಿಂದ ಸರ್ವೆ ನಂ. 161ರಲ್ಲಿ 20 ಗುಂಟೆ ಜಾಗವನ್ನು ನೀಡಿದ್ದರೂ ಅಲ್ಲಿಯ ಪಿಡಿಒ ಇತರೆ ವ್ಯಕ್ತಿಗಳೊಂದಿಗೆ ಸೇರಿಕೊಂಡು ನಿವೇಶನ ಹಂಚಿಕೆ ಮಾಡಿಲ್ಲ. ಅಂತೆಯೇ ಮಹದೇವಪುರ ಗ್ರಾಪಂ ಸೇರಿದ ದಲಿತರ ಕಾಲನಿಗೆ ತಿರುಗಾಡಲು ರಸ್ತೆ ಮಾಡಿಕೊಡದೆ ಪಿಡಿಒ ಸತಾಯಿಸುತ್ತಿದ್ದಾರೆ. ಆದ್ದರಿಂದ ಕೂಡಲೇ ಇವರಿಬ್ಬರನ್ನು ಕೂಡಲೇ ಅಮಾನತು ಮಾಡಿ ಶಿಸ್ತುಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್ ಅವರಿಗೆ ಮನವಿ ಸಲ್ಲಿಸಿದರು.
ಹಾಡ್ಯ ಗ್ರಾಪಂ ಪಿಡಿಒ ನಿವೇಶನ ಹಂಚಿಕೆ ಮಾಡದೆ ಪಂಚಾಯಿತಿ ವ್ಯಾಪ್ತಿಯ ಕಾನೂನನ್ನು ಉಲ್ಲಂಘನೆ ಮಾಡಿದ್ದಾರೆ. ಈ ಜಮೀನಿನಲ್ಲಿ ಮೇಲ್ವರ್ಗದವರು ಕಾನೂನನ್ನು ಧಿಕ್ಕರಿಸಿ ಸುಮಾರು 25 ತೆಂಗಿನ ಸಸಿಗಳನ್ನು ನೆಟ್ಟಿದ್ದಾರೆ. ಈ ವಿಚಾರವಾಗಿ ಹಲವು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಸಹ ಯಾವುದೇ ಕ್ರಮ ಜರುಗಿಸಿಲ್ಲ. ಮಹದೇವಪುರ ಬೋರೆ ಗ್ರಾಮದಲ್ಲಿ ಸುಮಾರು 25 ಮನೆಗಳಿಗೆ ತಿರುಗಾಡಲು ರಸ್ತೆಯಿಲ್ಲದೆ 5 ವರ್ಷಗಳಿಂದ ಎಷ್ಟೇ ಪ್ರಯತ್ನ ಮಾಡಿದರೂ ಸಹ ರಸ್ತೆಯನ್ನು ಮಾಡಿಕೊಡದೆ ಇಲ್ಲಿಯೂ ಸಹ ದಲಿತ ವಿರೋಧಿ ನೀತಿ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಸಮಿತಿಯ ಜಿಲ್ಲಾ ಸಂಚಾಲಕ ನಂಜುಂಡಮೌರ್ಯ, ಸಂಘಟನಾ ಸಂಚಾಲಕರಾದ ನಂಜುಂಡಸ್ವಾಮಿ, ಎಂ.ಎಂ. ಮಹೇಶ, ಎಸ್.ವಿಜಯ್ ಕುಮಾರ್, ಸುಲೋಚನಾ, ಪಾಪಮ್ಮ ಇತರರಿದ್ದರು.