ಸಮಗ್ರ ಭೂಕಾಯ್ದೆ ಜಾರಿಗೊಳಿಸಿ: ನಗರದಲ್ಲಿ ಡಿಎಸ್‌ಎಸ್ ಪ್ರತಿಭಟನೆ

1 (3)
Published on

ಮಂಡ್ಯ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸೇರಿದಂತೆ ಎಲ್ಲ ಸಮುದಾಯದ ಭೂರಹಿತ ಕೃಷಿ ಕೂಲಿ ಕಾರ್ಮಿಕರಿಗೆ ತಲಾ ಐದು ಎಕರೆ ಭೂಮಿ ನೀಡುವ ಕರ್ನಾಟಕ ಸಮಗ್ರ ಭೂಕಾಯ್ದೆ ಜಾರಿಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ(ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ)ಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಮಾಯಿಸಿದ ಸಮಿತಿ ಕಾರ್ಯಕರ್ತರು, ಸ್ವಾಭಿಮಾನಿ ನಾಯಕ ಪ್ರೊ.ಬಿ.ಕೃಷ್ಣಪ್ಪ ಅವರ ಜನ್ಮದಿನೋತ್ಸವ ಹಾಗೂ ಸಮತೆಯ ಸಾಮಾಜಿಕ ನ್ಯಾಯಕ್ಕಾಗಿ ಜನಾಗ್ರಹ ಸಮಾವೇಶ ಆಯೋಜಿಸಬೇಕೆಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು. ಅಂತೆಯೇ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಅವರಿಗೆ ಮನವಿ ಸಲ್ಲಿಸಿದರು.

ಇನ್ನು ಪರಿಶಿಷ್ಟರ ಮೀಸಲಾತಿ ವರ್ಗಿಕರಣಕ್ಕಾಗಿ ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿಯನ್ನು ಸದನದಲ್ಲಿ ಚರ್ಚಿಸಿ ಕೇಂದ್ರಕ್ಕೆ ಶಿಫಾರಸು ಮಾಡಬೇಕು. ನ್ಯಾ.ನಾಗಮೋಹನ್‌ದಾಸ್ ವರದಿಯಂತೆ ಪರಿಶಿಷ್ಟ ಜಾರಿ ಜನಸಂಖ್ಯಾವಾರು ಮೀಸಲಾತಿ ಹೆಚ್ಚಿಸಬೇಕು. ಬಿಜೆಪಿ ಸರ್ಕಾರ ತಂದಿರುವ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕೈಬಿಟ್ಟು ರಾಜ್ಯಶಿಕ್ಷಣ ತಜ್ಞರನ್ನೊಳಗೊಂಡ ಶಿಕ್ಷಣ ಆಯೋಗ ರಚಿಸುವುದರ ಜತೆಗೆ ಏಕರೂಪದ ಶಿಕ್ಷಣ ಜಾರಿಗೆ ತರಬೇಕು. ಎಚ್.ಕಾಂತರಾಜ್ ನೇತೃತ್ವದಲ್ಲಿ ಮಂಡಿಸಿದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸ್ಥಿತಿಗತಿಗಳ ಸಮೀಕ್ಷೆಯನ್ನು ಜನಗಣತಿ ವರದಿಯನ್ನು ಸದನದಲ್ಲಿ ಅಂಗೀಕರಿಸಿ ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿದರು.

ಎಸ್ಸಿ/ಎಸ್ಟಿ ಅಭಿವೃದ್ಧಿಗಾಗಿ ಪ್ರತಿ ಕುಟುಂಬಕ್ಕೂ ತಲಾ 25 ಲಕ್ಷ ರೂ ವಿಶೇಷ ಅನುದಾನ ಬಿಡುಗಡೆ ಮಾಡಬೇಕು. ದಲಿತ ಸಮುದಾಯದ ಯುವಕ ಮತ್ತು ಯುವತಿಯರಿಗೆ ಕೌಶಲ ತರಬೇತಿ ನೀಡಿ ಸ್ವ ಉದ್ಯೋಗ ಕಲ್ಪಿಸಬೇಕು. ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಮಹಿಳಾ ಸ್ವ ಸಹಾಯ ಸಂಘಗಳಿಗೆ ಕೌಶಲ ತರಬೇತಿ ನೀಡುವುದರ ಜತೆಗೆ 1 ಕೋಟಿ ರೂ ಅನುದಾನದಲ್ಲಿ ವ್ಯಾಪಾರ, ಕೈಗಾರಿಕಾ ಘಟಕ ಸ್ಥಾಪಿಸಬೇಕು. ಸಾರಿಗೆ, ಕಂದಾಯ, ನೀರಾವರಿ ಇಲಾಖೆಯಲ್ಲಿನ ಹೊರಗುತ್ತಿಗೆಯಲ್ಲಿ ಕೆಲಸ ಮಾಡುತ್ತಿರುವವರ ಹುದ್ದೆ ಖಾಯಂಗೊಳಿಸಬೇಕು. ಸರ್ವರಿಗೂ ಆರೋಗ್ಯ ಸೇವೆಯನ್ನು ಉಚಿತವಾಗಿ ನೀಡಲು ಯೋಜನೆ ರೂಪಿಸಬೇಕು. ಖಾಸಗಿ ಕ್ಷೇತ್ರದಲ್ಲಿಯೂ ಮೀಸಲಾತಿ ನೀತಿ ಜಾರಿಗೊಳಿಸಬೇಕು. ಭಗವಾನ್ ಬುದ್ದರ ವಿಚಾರ ಕ್ರಾಂತಿ ಮತ್ತು ಬೌದ್ದ ಸ್ಮಾರಕ ಸಂರಕ್ಷಣೆಗಾಗಿ ಕರ್ನಾಟಕ ಬೌದ್ಧ ಪ್ರಾಧಿಕಾರ ರಚಿಸಬೇಕೆಂದು ಆಗ್ರಹಿಸಿದರು.

ಈ ವೇಳೆ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ, ಮೈಸೂರು ವಿಭಾಗೀಯ ಸಂಚಾಲಕ ಕೆ.ಎಂ.ಅನಿಲ್‌ಕುಮಾರ್, ಜಿಲ್ಲಾಧ್ಯಕ್ಷ ಕೆ.ಎಂ.ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿ ಈಚಗೆರೆ ನಾಗರಾಜ್, ಸಂಘಟನಾ ಕಾರ್ಯದರ್ಶಿಗಳಾದ ಎಸ್.ಕುಮಾರ್, ವೈ.ಸುರೇಶ್‌ಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net