

ಮಂಡ್ಯ: ಕೇಂದ್ರ ಮತ್ತು ರಾಜ್ಯ ಸರ್ಕಾರ ಮಂಡಿಸಿದ ಬಜೆಟ್ ರೈತ ಮತ್ತು ದಲಿತ ವಿರೋಧಿ ಎಂದು ಆರೋಪಿಸಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ನಗರದಲ್ಲಿ ಪ್ರತಿಭಟಿಸಿದರು.
ಸರ್ ಎಂ.ವಿ ಪ್ರತಿಮೆ ಎದುರು ಜಮಾವಣೆಗೊಂಡ ಕಾರ್ಯಕರ್ತರು, ‘ಬಿಜೆಪಿ ಹಠಾವೋ ಭಾರತ್ ಬಚಾವೋ’ ಎಂದು ಘೋಷಣೆ ಕೂಗುತ್ತಾ ಮೆರವಣಿಗೆ ಮೂಲಕ ಸಾಗಿ ಡಿಸಿ ಡಾ.ಎಚ್.ಎನ್.ಗೋಪಾಲಕೃಷ್ಣ ಅವರಿಗೆ ಮನವಿ ಸಲ್ಲಿಸಿದರು. ಬಡ ಜನರು, ರೈತರು, ಕಾರ್ಮಿಕರು, ದಲಿತ ಸಮುದಾಯಕ್ಕೆ ಕನಿಷ್ಠ ಅನ್ನಕ್ಕೂ ಖಾತ್ರಿ ಇಲ್ಲದ ಜನ ವಿರೋಧಿ ಬಜೆಟ್ ಮಂಡನೆ ಮಾಡಿದೆ ಎಂದು ಕಿಡಿಕಾರಿದರು.
ಅಂತೆಯೇ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿರುವ ಬೆಂಗಳೂರಿನ ಜೈನ ವಿಶ್ವವಿದ್ಯಾಲಯದ ಮಾನ್ಯತೆ ರದ್ದುಪಡಿಸಿ ಬಾಗಿಲು ಮುಚ್ಚಿಸಬೇಕು. ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಜೀವ ಬೆದರಿಕೆ ಹಾಕಿರುವ ಸಚಿವ ಡಾ.ಅಶ್ವತ್ಥ ನಾರಾಯಣ ವಿರುದ್ಧ ಪ್ರಕರಣ ದಾಖಲಿಸಬೇಕು. ಕೇಂದ್ರ ಸರ್ಕಾರ ಎಸ್‌ಸಿಎಸ್‌ಪಿ, ಟಿಎಸ್‌ಪಿ ಉಪ ಯೋಜನಾ ಕಾಯ್ದೆಯನ್ನು ಜಾರಿಗೊಳಿಸಿಬೇಕು. ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಬೇಕು, ಭಾರತ ಬುದ್ಧ ಧಮ್ಮ ಸ್ಮಾರಕ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ರಚಿಸಬೇಕು ಸೇರಿದಂತೆ ಹಲವು ಬೇಡಿಕೆ ಈಡೇರಿಕೆಗೆ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಮಿತಿ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ, ಕೆ.ಎಂ.ಶ್ರೀನಿವಾಸ್, ನಾಗರಾಜ್, ಎಚ್.ಬಿ.ಹರಿಕುಮಾರ್, ಬಾಲರಾಜ್, ವೈ.ಸುರೇಶ್‌ಕುಮಾರ್, ಮಾರಪ್ಪ, ವೈ.ಎನ್.ಮಮತಾಸ್ವಾಮಿ, ಮಹಾದೇವ್ ಕೊತ್ತತ್ತಿ, ಬಿ.ಎಂ.ಸೋಮಶೇಖರ್ ಇತರರಿದ್ದರು.