ಒಳ ಮೀಸಲಾತಿ ಜಾರಿಗೆ ಸುಗ್ರೀವಾಜ್ಞೆ ಜಾರಿಗೊಳಿಸಿ: ದಸಂಸ ಕಾರ್ಯಕರ್ತರ ಪ್ರತಿಭಟನೆ

Dss Protest Mandya
Published on

ಮಂಡ್ಯ: ಪರಿಶಿಷ್ಟರ ಒಳ ಮೀಸಲಾತಿ ನೀತಿ ಜಾರಿಗೆ ಸುಗ್ರೀವಾಜ್ಞೆ ಜಾರಿ ಹಾಗೂ ಕಾಂಗ್ರೆಸ್ ಶಾಸಕನ ಲಂಚಬಾಕತನಕ್ಕೆ ಬಲಿಯಾದ ಪಿಎಸ್‌ಐ ಪರಶುರಾಮ್ ಸಾವಿನ ಪ್ರಕರಣ ಸಿಬಿಐ ತನಿಖೆಗೆ ವಹಿಸುವಂತೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ಸರ್ ಎಂ.ವಿ ಪ್ರತಿಮೆ ಬಳಿ ಜಮಾಯಿಸಿದ ಕಾರ್ಯಕರ್ತರು, ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ರವಾನಿಸಿದರು. ಪರಿಶಿಷ್ಟರ ಮೀಸಲಾತಿ ನೀತಿಯನ್ವಯ ಪರಿಶಿಷ್ಟರ ಪ್ರಾತಿನಿಧ್ಯಕ್ಕೆ ಸಂಚಕಾರವಾಗದಂತೆ ಕ್ರಿಮಿಲೇಯರ್ ತತ್ವ ಅಳವಡಿಕೆ ಅವಶ್ಯವಾಗಿದ್ದು, ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು. ಪರಿಶಿಷ್ಟರ ಒಳ ಮೀಸಲಾತಿ ನೀತಿ ಜಾರಿಗಾಗಿ ರಾಜ್ಯ ಸರ್ಕಾರ ಈ ಕೂಡಲೇ ಸುಗ್ರೀವಾಜ್ಞೆ ಹೊರಡಿಸಬೇಕು. ಸುಪ್ರೀ ಕೋರ್ಟ್ ಸಮ್ಮತಿ ತೀರ್ಪಿನಲ್ಲಿ ಪರಿಶಿಷ್ಟರ ಮೀಸಲಾತಿ ನೀತಿಯಲ್ಲಿ ಕ್ರಿಮಿಲೇಯರ್ ತತ್ವ ಅಳವಡಿಸಲು ಸಂವಿಧಾನ ಪೀಠದ ಬಹುತೇಕ ನ್ಯಾಯಾಧೀಶರು ಸೂಚಿಸಿದ್ದಾರೆ. ಆದ್ದರಿಂದ ಆ ತತ್ವಕ್ಕೆ ಒಳಪಟ್ಟ ಫಲಾನುಭವಿಗಳಲ್ಲಿ ಫಲಾನುಭವಿಗಳು ಲಭ್ಯವಿಲ್ಲದಿದ್ದಾಗ ಪರಿಶಿಷ್ಟ ಅರ್ಹರನ್ನೇ ಪರಿಗಣಿಸಿ, ಪರಿಶಿಷ್ಟರ ಮೀಸಲಾತಿ ನೀತಿಯನ್ವಯ ಸಮರ್ಪಕ ಪ್ರಾತಿನಿಧ್ಯ ಸಂರಕ್ಷಿಸಬಹುದಾದ ಕ್ರಿಮಿಲೇಯರ್ ತತ್ವ ಅಳವಡಿಸಬೇಕು. ಅಂತೆಯೇ ಇಲ್ಲಿಯೂ ಒಳ ಮೀಸಲಾತಿ ನೀತಿಯನುಸಾರವೇ ಎಲ್ಲಾ ಅವಕಾಶಗಳನ್ನು ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಶಾಸಕ ಚನ್ನಾರೆಡ್ಡಿ ಪಾಟೀಲ್, ಇವರ ಮಗ ಸೊನ್ನಿಗೌಡರ ಲಂಚಬಾಕತನಕ್ಕೆ ಬಲಿಯಾಗಿರುವ ಪಿಎಸ್‌ಐ ಪರಶುರಾಮ್ ಛಲವಾದಿ ಸಾವು ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು. 30 ಲಕ್ಷ ರೂ ಲಂಚಕ್ಕೆ ಒತ್ತಾಯಿಸಿರುವ ಈ ಆರೋಪಿಗಳ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯನ್ವಯ ಆರೋಪಿಗಳನ್ನು ಈ ಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಮಿತಿ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ, ಮುಖಂಡರಾದ ಬಿ.ಆನಂದ್, ಸುರೇಶ್‌ಕುಮಾರ್, ಸಿದ್ದಯ್ಯ, ವೇಧಮೂರ್ತಿ, ಮಹದೇವ, ಎನ್.ಸಿ. ಸಿದ್ದರಾಜು, ಸುರೇಶ್, ಸುಮಿತ್ರಾ, ಸರಳಾ, ಗೀತಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net