

ಮಂಡ್ಯ: ಕೋಮುವಾದದ ಭಾಷಣದ ಮೂಲಕ ಜನಸಾಮಾನ್ಯರ ಸಾಮರಸ್ಯ ಬದುಕಿಗೆ ಧಕ್ಕೆ ತರುತ್ತಿರುವ ಚಕ್ರವರ್ತಿ ಸೂಲಿಬೆಲೆ ಜಿಲ್ಲೆ ಪ್ರವೇಶಕ್ಕೆ ಜಿಲ್ಲಾಡಳಿತ ನಿರ್ಬಂಧ ಹಾಕಬೇಕೆಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಎದುರು ಗೋಬ್ಯಾಕ್ ಎಂದು ಘೋಷಣೆ ಕೂಗಿದ ಸಮಿತಿಯ ಕಾರ್ಯಕರ್ತರು, ಮಾ.16ರಂದು ನಗರದಲ್ಲಿ ಆಯೋಜಿಸಿರುವ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಚಕ್ರವರ್ತಿ ಸೂಲಿಬೆಲೆ ಅವರ ಪ್ರವೇಶಕ್ಕೆ ಅನುಮತಿ ನೀಡಬಾರದು. ಮಂಡ್ಯ ಸ್ವಾಭಿಮಾನ, ಸ್ವಾಮರಸ್ಯ ಮತ್ತು ಪ್ರೀತಿಗೆ ಹೆಸರುವಾಸಿ ಜಿಲ್ಲೆ. ಇದು ದೇಶಕ್ಕೆ ಗೊತ್ತಿರುವ ವಿಚಾರ, ಕೆಲ ದಿನಗಳ ಹಿಂದೆ ಧ್ವಜದ ವಿಚಾರವಾಗಿ ಕೋಮುವಾದಿಗಳು, ಜಾತಿವಾದಿಗಳು ರಾಷ್ಟ್ರಧ್ವಜಕ್ಕೆ ಅವಮಾನಿಸಿ ಜಿಲ್ಲೆಯಲ್ಲಿ ಶಾಂತಿ ಕದಡಲು ಮುಂದಾಗಿದ್ದರು. ಆದರೆ ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಿದ್ದರಿಂದ ಕುಚೇಷ್ಟೆಯ ಕೆಲಸ ನಡೆಯಲಿಲ್ಲ ಎಂದರು.
ಪ್ರತಿಭಟನೆಯಲ್ಲಿ ಸಮಿತಿಯ ಶಿವರಾಜ್ ಮರಳಿಗ, ಮದ್ದೂರು ಶ್ರೀನಿವಾಸ್, ತಿಮ್ಮೇಶ್, ಗುರುಲಿಂಗಯ್ಯ, ಸವಿತಾ, ರವಿ ಇತರರಿದ್ದರು.