ನಿವೇಶನರಹಿತರಿಗೆ ಮೂಲಸೌಕರ್ಯ ಕಲ್ಪಿಸಿ: ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರ ಪ್ರತಿಭಟನೆ

DSS protest Mandya
Published on

ಮಂಡ್ಯ: ನಿವೇಶನ ಹಂಚಿಕೆ ಮಾಡಿರುವ ಕಡೆ ಮೂಲಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ನಗರದ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರು ಜಮಾಯಿಸಿದ ಕಾರ್ಯಕರ್ತರು ಜಿಲ್ಲಾ ಪಂಚಾಯಿತಿ ಕಚೇರಿವರೆಗೂ ಮೆರವಣಿಗೆ ನಡೆಸಿ ನಂತರ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಚಿಕ್ಕಮಂಡ್ಯ ವಸತಿ ರಹಿತ ಜನರಿಗೆ ಎಚ್.ಕೋಡಿಹಳ್ಳಿ ಸರ್ವೇ ನಂ.67ರಲ್ಲಿ 2018ರಲ್ಲಿ ನಿವೇಶನ ಹಂಚಿಕೆ ಮಾಡಲಾಗಿದೆ. ಕೂಡಲೇ ರಸ್ತೆ, ಚರಂಡಿ, ನೀರು, ವಿದ್ಯುತ್ ಒಳಗೊಂಡಂತೆ ಮೂಲಸೌಕರ್ಯ ಕಲ್ಪಿಸಲು ಅಗತ್ಯ ಕ್ರಮ ವಹಿಸಬೇಕು. ನಿವೇಶನ ಹಂಚಿಕೆಯಾಗಿರುವ ಬಡಾವಣೆಗೆ ಮುಖ್ಯ ರಸ್ತೆಯಿಂದ ಸಂಪರ್ಕ ರಸ್ತೆ ಕಲ್ಪಿಸಲು ರಸ್ತೆಗೆ ಅಗತ್ಯವಿರುವ ಭೂಮಿಯ ಸ್ವಾಧೀನಕ್ಕೆ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.

ಹಕ್ಕುಪತ್ರ ವಿತರಿಸಿರುವ ಎಲ್ಲರಿಗೂ ಮನೆ ನಿರ್ಮಾಣ ಮಾಡಿಕೊಂಡು ವಾಸಿಸಲು ರಾಜೀವ್ ಗಾಂಧಿ ವಸತಿ ನಿಗಮದಿಂದ ಸಹಾಯ ಧನ ಬಿಡುಗಡೆ ಮಾಡಬೇಕು. ವಾಸ ಮಾಡಲು ಯೋಗ್ಯವಲ್ಲದ ಭೂಮಿಯನ್ನು ಖರೀದಿಸಿ ಚಿಕ್ಕ ಮಂಡ್ಯದ ವಸತಿರಹಿತ ಜನರಿಗೆ ಹಂಚಿಕೆ ಮಾಡಿ ಭೂ ಮಾಲೀಕರ ಹತ್ತಿರ ಕಮಿಷನ್ ಪಡೆದು ಸರ್ಕಾರಕ್ಕೆ ವಂಚಿಸಿ ಅಕ್ರಮವೆಸಗಿರುವ ಅಧಿಕಾರಿಗಳು ಮತ್ತು ದಲ್ಲಾಳಿಗಳನ್ನು ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.

ಚಿಕ್ಕಮಂಡ್ಯದ 62 ವಸತಿರಹಿತ ಜನರನ್ನು ಆಯ್ಕೆ ಮಾಡಿದ್ದು ಇವರಲ್ಲಿ 29 ಜನರಿಗೆ ಹಕ್ಕು ಪತ್ರ ವಿತರಿಸಲಾಗಿದೆ. ಉಳಿದ 33 ಜನರಿಗೆ ತಕ್ಷಣ ಹಕ್ಕುಪತ್ರ ವಿತರಿಸಬೇಕು. ವಾಸಿಸಲು ಯೋಗ್ಯವಾಗುವಂತಹ ಅಗತ್ಯ ಮೂಲಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಮುಖಂಡರಾದ ಅಂದಾನಿ ಸೋಮನಹಳ್ಳಿ, ಶಿವು ಮದ್ದೂರು, ಬಿ.ಎಂ.ಸತ್ಯ, ಮೂರ್ತಿ ಕಂಚಿನಕೋಟೆ, ಡಿ.ಕೆ.ಅಂಕಯ್ಯ, ಮೋಹನ್ ಚಿಕ್ಕಮಂಡ್ಯ, ಲಿಂಗರಾಜು, ನಿರಂಜನ್, ಮುರುಗನ್, ನಾಗರಾಜು, ವೆಂಕಟಗಿರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net