

ಮಂಡ್ಯ: ಚಿಂದಗಿರಿದೊಡ್ಡಿ ಗ್ರಾಮದಲ್ಲಿ ವಾಸಿಸುತ್ತಿರುವ ಬಡ ಕುಟುಂಬಗಳಿಗೆ ಹಕ್ಕು ಪತ್ರ ನೀಡಿ ಇಸ್ವತ್ತು ಮಾಡಿಕೊಡುವಂತೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಿಂದ ಮೆರವಣಿಗೆ ಹೊರಟು ಜಿಲ್ಲಾ ಪಂಚಾಯಿತಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ಮಂಡ್ಯ ಗ್ರಾಮಾಂತರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಂದಗಿರಿದೊಡ್ಡಿ ಗ್ರಾಮದಲ್ಲಿ 19 ಕುಟುಂಬ ಕಳೆದ 40 ವರ್ಷದಿಂದ ವಾಸವಿದ್ದು, ಇವರಿಗೆ ಇದುವರೆಗೂ ಹಕ್ಕುಪತ್ರ ನೀಡಿರುವುದಿಲ್ಲ. ಇ-ಸ್ವತ್ತು ಮಾಡಿಕೊಟ್ಟಿರುವುದಿಲ್ಲ. ಪರಿಣಾಮ ಸರ್ಕಾರದ ಯಾವುದೇ ಸೌಲಭ್ಯ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸುವರ್ಣ ಮತ್ತು ದೊಡ್ಡೋಳಮ್ಮರಿಗೆ ಸೇರಿದ ಎರಡು ಮನೆಗಳು ಮಾರಾಟ ಮಾಡಲಾಗಿದೆ. ಆದರೆ ಅಧಿಕಾರಿಗಳು ಹಣ ಪಡೆದು ಬೇರೆಯವರಿಗೆ ಇ ಸ್ವತ್ತು ಮಾಡಿಕೊಟ್ಟಿದ್ದಾರೆ. ಆದ್ದರಿಂದ ಗ್ರಾಪಂ ವ್ಯಾಪ್ತಿಯ ಎಲ್ಲ ಕುಟುಂಬಗಳಿಗೂ ಇ ಸ್ವತ್ತು ಮಾಡಿಕೊಟ್ಟು ಮೂಲಸೌಕರ್ಯ ಮತ್ತು ಸರ್ಕಾರದ ಸೌಲಭ್ಯ ಪಡೆಯಲು ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಮಿತಿಯ ರಾಜ್ಯ ಸಂಚಾಲಕ ಅಂದಾನಿ ಸೋಮನಹಳ್ಳಿ, ವಿಭಾಗೀಯ ಸಂಚಾಲಕ ಟಿ.ಡಿ.ಬಸವರಾಜು, ಡಿ.ಕೆ.ಅಂಕಯ್ಯ, ಶಿವು, ಮುರುಗನ್, ಉಮೇಶ್ ಉಮ್ಮಡಹಳ್ಳಿ, ಧನಲಕ್ಷ್ಮೀ, ನಾಗಮಣಿ, ಲಕ್ಷ್ಮೀ, ಮಾರಿಯಮ್ಮ, ಸುಶೀಲಾ, ಯಶೋದಮ್ಮ, ಯಲ್ಲಮ್ಮ, ಆಶಾ, ಸಿ.ಪಿ.ಸೌಮ್ಯ, ವಸಂತಾ ಇತರರಿದ್ದರು.