

ಬಾಗೇಪಲ್ಲಿ: ಸರ್ಕಾರದಿಂದ ಸಾಲ ಸೌಲಭ್ಯ ಕೊಡಿಸುವುದಾಗಿ ನಂಬಿಸಿ ಪರಿಶಿಷ್ಠ ಜಾತಿ ಮತ್ತು ಪಂಗಡದವರಿಂದ ಜಮೀನು ಕ್ರಯ ಮಾಡಿಸಿಕೊಂಡಿರುವವ ವಿರುದ್ಧ ಕಾನೂನು ಕೈಗೊಳ್ಳುವಂತೆ ಹಾಗೂ ತಾಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆಯನ್ನು ನಿಲ್ಲಿಸುವಂತೆ ಆಗ್ರಹಿಸಿ ಬಾಗೇಪಲ್ಲಿ ದಲಿತ ಸಂಘರ್ಷ ಸಮಿತಿ ಅನಿರ್ದಿಷ್ಠಾವಧಿ ಧರಣಿ ಆರಂಭಿಸಿದೆ.
ತಾಲೂಕು ಕಚೇರಿ ಅವರಣದಲ್ಲಿ ಸೋಮವಾರದಿಂದ ಧರಣಿ ಕುಳಿತ ಸಮಿತಿ ಪದಾಧಿಕಾರಿಗಳು ಹಾಗೂ ಸಂತ್ರಸ್ತರು, ಗೂಳೂರು ಮತ್ತು ಕಸಬಾ ಹೋಬಳಿಗಳ ವ್ಯಾಪ್ತಿಯಲ್ಲಿ ದಲಿತರಿಗೆ ಸೇರಿರುವ ಕೃಷಿ ಜಮೀನುಗಳನ್ನು ಮೋಸದಿಂದ ಕ್ರಯ ಮಾಡಿಸಿಕೊಂಡಿರುವುದನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿದರು.
ಕಸಬಾ ಹೋಬಳಿಯ ದೇವರಗುಡಿಪಲ್ಲಿ ಗ್ರಾಪಂನ ವಿವಿಧ ಗ್ರಾಮಗಳ ದಲಿತರಿಗೆ ಎಸ್ಸಿ, ಎಸ್ಟಿ ಕಾರ್ಪೋರೇಷನ್‌ನಿಂದ ಸಾಲ ಕಲ್ಪಿಸುವುದಾಗಿ, ಸರ್ಕಾರದ ವಿವಿಧ ಯೋಜನೆಗಳ ಸಬ್ಸಿಡಿ ಮಾಡಿಸಿಕೊಡುವುದಾಗಿ ನಂಬಿಸಿ 80 ಎಕರೆ ಕೃಷಿ ಜಮೀನನ್ನು ತಾಲೂಕಿನ ಗೂಳೂರಿನ ವೆಂಕಟರಾಮಯ್ಯಶೆಟ್ಟಿ 2004 ಮತ್ತು 2005ನೇ ಸಾಲಿನಲ್ಲಿ ಬಾಗೇಪಲ್ಲಿಯ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಕ್ರಯ ಮಾಡಿಸಿ ಖಾತೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ ಎಂದು ಸಂಘಟನಾ ಸಂಚಾಲಕ ಬಿ.ವಿ.ವೆಂಕಟರವಣ ಆರೋಪಿಸಿದರು.
2013ರಲ್ಲಿ ವೆಂಕಟರಾಮಯ್ಯಶೆಟ್ಟಿ ಮೃತಪಟ್ಟಿದ್ದು, ಅವರ ಮಕ್ಕಳಾದ ಸತ್ಯನಾರಾಯಣಬಾಬು ಮತ್ತು ವೆಂಕಟೇಶ್‌ಬಾಬು ಹೆಸರಿಗೆ 80 ಎಕರೆ ಕೃಷಿ ಜಮೀನು ಪೌತಿ ಖಾತೆಯಾಗಿದೆ. ಅನ್ಯಾಯದಿಂದ ಪಡೆದಿರುವ ದಲಿತರ ಜಮೀನಿನ ಕ್ರಯ ಮತ್ತು ಖಾತೆಯನ್ನು ರದ್ದುಗೊಳಿಸಿ ಮೂಲ ಖಾತೆದಾರರಿಗೆ ಜಮೀನು ಖಾತೆ ಮಾಡಿಕೊಡಬೇಕೆಂದು ಜಿಲ್ಲಾಡಳಿತವನ್ನು ಒತ್ತಾಯಿಸಿದರು.
ಗೂಳೂರು, ಮಿಟ್ಟೇಮರಿ ಹೋಬಳಿ ವ್ಯಾಪ್ತಿಯಲ್ಲಿ ಎಗ್ಗಿಲ್ಲದೆ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ಅರಣ್ಯ ಸಂಪತ್ತು ಲೂಟಿಯಾಗುತ್ತಿದ್ದರೂ ಜಿಲ್ಲಾ ಮತ್ತು ತಾಲೂಕು ಆಡಳಿತ ಕಣ್ಮುಚ್ಚಿ ಕುಳಿತಿದೆ. ಗಣಿಗಾರಿಕೆಯ ಬೃಹತ್ ವಾಹನ ಸಂಚಾರದಿಂದ ಹಳ್ಳಿಯ ರಸ್ತೆಗಳು ಹಾಳಾಗುತ್ತಿವೆ, ಕೃಷಿ ಜಮೀನುಗಳು ಗಣಿ ಧೂಳಿನಿಂದ ಕಲುಷಿತಗೊಂಡು ಬೆಳೆಹಾನಿ ಉಂಟಾಗುತ್ತಿವೆ ಎಂದು ಸಂಚಾಲಕ ಪೈಪಾಳ್ಯ ರವಿ ಆಕ್ರೋಶ ವ್ಯಕ್ತಪಡಿಸಿದರು. ಪದಾಧಿಕಾರಿಗಳಾದ ಎಲ್.ಎನ್.ನರಸಿಂಹಯ್ಯ, ಕೋಟಪ್ಪ, ಎಚ್.ಎನ್.ಗೋಪಿ, ಪಿ.ನಾಗಪ್ಪ, ಗಂಗಾಧರ, ಪ್ರಕಾಶ್, ಶ್ರೀನಿವಾಸ್, ನರಸಿಂಹಪ್ಪ, ಮಂಜುನಾಥ ಮತ್ತಿತರರು ಇದ್ದರು.
13 ಬಿಜಿಪಿ ಡಿಎಸ್‌ಎಸ್ ನ್ಯೂಸ್ ಪೋಟೊ