ಸಚಿವ ಸುಧಾಕರ್ ಬಂಧನಕ್ಕೆ ಆಗ್ರಹ: ಮಂಡ್ಯ ನಗರದಲ್ಲಿ ಡಿಎಸ್‌ಎಸ್ ಕಾರ್ಯಕರ್ತರ ಪ್ರತಿಭಟನೆ

Dss Protest
Published on

ಮಂಡ್ಯ: ಬೆಂಗಳೂರಿನ ಯಲಹಂಕದಲ್ಲಿ ದಲಿತರ ಇನಾಂ ಭೂಮಿ ವಂಚಿಸುವುರ ಜತೆಗೆ ದೌರ್ಜನ್ಯ ನಡೆಸಿ ಗೂಂಡಾಗಿರಿ ನಡೆಸಿರುವ ಸಚಿವ ಡಿ.ಸುಧಾಕರ್ ಅವರನ್ನು ಬಂಧಿಸಬೇಕೆಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಜಮಾವಣೆಗೊಂಡ ಕಾರ್ಯಕರ್ತರು, ಬಳಿಕ ಬೆಂ-ಮೈ ಹೆದ್ದಾರಿಯಲ್ಲಿ ಮೆರವಣಿಗೆ ಹೊರಟು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ಅಂತೆಯೇ ತನಿಖೆಯ ಮುನ್ನವೇ ಪ್ರಕರಣ ಸುಳ್ಳೆಂದು ಹೇಳುವ ಮೂಲಕ ತನಿಖಾಧಿಕಾರಿ ಮೇಲೆ ಪ್ರಭಾವ ಬೀರಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಸಂಪುಟದಿಂದ ವಜಾಗೊಳಿಸಲು ಒತ್ತಾಯಿಸಿದರು.

ಯಲಹಂಕ ಗ್ರಾಮ ಸರ್ವೆ ನಂ.108/1ರಲ್ಲಿ ದಲಿತ ಮಹಿಳೆಗೆ ಸೇರಿದ ಜಮೀನನ್ನು ಸಚಿವ ಡಿ.ಸುಧಾಕರ್ ಪಾಲುದಾರಿಕೆಯ ಸೆವೆನ್ ಹಿಲ್ಸ್ ಡೆವಲಪರ್ ಮತ್ತು ಟ್ರೇಡರ್ ಕಂಪನಿ ಮೂಲಕ ಕಬಳಿಸಿ ದೌರ್ಜನ್ಯ ನಡೆಸಲಾಗಿದೆ. ಸುಧಾಕರ್ ಮೇಲೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯನ್ವಯ ಪ್ರಕರಣ ದಾಖಲಾಗಿದ್ದರೂ ಅವರನ್ನು ಬಂಧಿಸದಿರುವ ಪೊಲೀಸ್ ಇಲಾಖೆಯ ಅದಕ್ಷತೆ ಎತ್ತಿ ತೋರಿಸುತ್ತದೆ. ದಲಿತರ ಮೇಲೆ ದೌರ್ಜನ್ಯ ನಡೆಸಿ ಗೂಂಡಾಗಿರಿ ನಡೆಸಿರುವ ಸಚಿವರನ್ನು ಕೂಡಲೇ ಬಂಧಿಸಲು ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಸೂಚನೆ ನೀಡಬೇಕು. ಅಲ್ಲದೆ ಸಂಪುಟದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸಮಿತಿಯ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ, ಕೆ.ಎಂ.ಅನಿಲ್ಕುಮಾರ್, ಕೆ.ಎಂ.ಶ್ರೀನಿವಾಸ್, ಎಸ್.ಕುಮಾರ್, ಶಿವರಾಜ್ ಆತಗೂರು, ವೈ.ಸುರೇಶ್‌ಕುಮಾರ್ ಶೆಟ್ಟಹಳ್ಳಿ, ಅಮೀನಾಜ್, ಸೋಮಶೇಖರ್ ಮೇನಾಗ್ರ, ರಾಮಕೃಷ್ಣ ಸಂಪಹಳ್ಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net