

ಗೋಣಿಕೊಪ್ಪಲು: ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರತ್ತ ಶೂ ಎಸೆದ ಘಟನೆಯನ್ನು ಖಂಡಿಸಿ, ಆರೋಪಿ ವಿರುದ್ದ ದೇಶದ್ರೋಹ ಪ್ರಕರಣ ದಾಖಲಿಸಿ ಗಡಿಪಾರು ಮಾಡಬೇಕೆಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಪ್ರತಿಭಟನೆ ನಡೆಸಿತು.
ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಎಚ್.ಆರ್.ಪರಶುರಾಮ್ ನೇತೃತ್ವದಲ್ಲಿ ನಡೆದ ಪ್ರತಿಭಟನಾ ಮೆರವಣಿಗೆ, ನಗರದ ಪಾಲಿಬೆಟ್ಟ ರಸ್ತೆಯಿಂದ ಆರಂಭಗೊಂಡು ಮುಖ್ಯ ರಸ್ತೆಯಲ್ಲಿ ಸಾಗಿ ನಂತರ ಬಸ್ ನಿಲ್ದಾಣದಲ್ಲಿ ಮುಕ್ತಾಯಗೊಂಡಿತು.
ಎಚ್.ಆರ್.ಪರಶುರಾಮ್ ಮಾತನಾಡಿ, ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದ ಸಮಯದಲ್ಲಿ ನ್ಯಾಯವಾದಿ ರಾಕೇಶ್ ಕಿಶೋರ್‌ಎಂಬಾತ ನ್ಯಾಯಪೀಠದ ಮೇಲೆ ಶೂ ಎಸೆಯಲು ಮುಂದಾಗಿರುವುದು ಸಂವಿಧಾನ ವಿರೋಧಿಯಾಗಿದೆ. ರಾಕೇಶ್ ಕಿಶೋರ್ ವಿರುದ್ಧ ಕಠಿಣ ಕ್ರಮವಾಗಬೇಕು. ಇದರೊಂದಿಗೆ ಮತ್ತೊಬ್ಬ ವಕೀಲರು ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಕೊಳಕು ಮನುಷ್ಯ ಎಂದು ಅವಮಾನಿಸಿರುವ ಬಗ್ಗೆಯೂ ವರದಿಯಾಗಿದ್ದು, ಇವರ ಮೇಲೂ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಆರೋಪಿಗಳ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸುವ ತನಕ ಹೋರಾಟ ಮುಂದುವರಿಸಲಾಗುವುದು ಎಂದು ಎಚ್ಚರಿಸಿದರು.
ಗೋಣಿಕೊಪ್ಪ ಠಾಣಾಧಿಕಾರಿ ಪ್ರದೀಪ್‌ಕುಮಾರ್ ಅವರ ಮೂಲಕ ಸರ್ಕಾರಕ್ಕೆ ಮನವಿ ಪತ್ರವನ್ನು ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳಾದ ಜೆ.ಕೆ.ವಿಜಯ್, ಎಚ್.ಎನ್.ಮಂಜುನಾಥ್, ಸುರೇಶ್, ಅಜೆಯ್, ಕರಿಯ, ಕುಳಿಯ, ಜೆ.ಎ.ಲಕ್ಷ್ಮೀ, ಗೀತಾ, ತಾಯಮ್ಮ, ರೀಟಾ, ಜೆ.ಎಂ.ಪದ್ಮಾ, ರಾಜು, ಸರಸು, ಸತೀಶ್ ಇದ್ದರು.