

ಮಂಡ್ಯ: ಎಸ್.ಸಿ.ಎಸ್.ಪಿ/ಟಿ.ಎಸ್.ಪಿ ಅನುದಾನದ 25,282 ಕೋಟಿ ರೂಗಳನ್ನು ಗ್ಯಾರಂಟಿ ಯೋಜನೆಗಳಿಗೆ ವರ್ಗಾಯಿಸಿ ದುರ್ಬಳಕೆ ಮಾಡುವ ಮೂಲಕ ದಲಿತ ಸಮುದಾಯಕ್ಕೆ ವಂಚಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕೆಂದು ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ ಆಗ್ರಹಿಸಿದರು.
ಪ್ರಸಕ್ತ ಸಾಲಿನ ರಾಜ್ಯ ಬಜೆಟ್‌ನಲ್ಲಿ 39,121,46 ಕೋಟಿ ಅನುದಾನ ಬಳಕೆ ಕ್ರಿಯಾ ಯೋಜನೆಗೆ 4 ತಿಂಗಳು ಕಳೆದರೂ ಎಸ್ಸಿ, ಎಸ್ಟಿ ರಾಜ್ಯ ಅಭಿವೃದ್ಧಿ ಪರಿಷತ್ ಸಭೆ ಕರೆದು ಅನುಮೋದಿಸದೆ ಕಳೆದ ಶುಕ್ರವಾರ ಸಭೆ ನಡೆಸಿ ಗ್ಯಾರಂಟಿ ಯೋಜನೆಗಳಿಗೆ 14,282ಕೋಟಿ ವರ್ಗಾಯಿಸಲು ತೀರ್ಮಾನಿಸಲಾಗಿದೆ. ಇದಲ್ಲದೆ ವಾಲ್ಮೀಕಿ ನಿಗಮದ ಬಹುಕೋಟಿ ಭ್ರಷ್ಟಾಚಾರ ಮಾಡಿ ಆರ್ಥಿಕ ಅಶಿಸ್ತಿನ ನೈತಿಕ ಹೊಣೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಹೊರಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ದಲಿತ ವಿರೋಧಿ ಧೋರಣೆಯ ಅನ್ಯಾಯವನ್ನು ತಡೆಯಲಾಗದ ರಾಜ್ಯ ಆಡಳಿತ ಪಕ್ಷದ ದಲಿತ ಮಂತ್ರಿ, ಶಾಸಕರು ಮತ್ತು ವಿರೋಧ ಪಕ್ಷದಲ್ಲಿನ ದಲಿತ ಶಾಸಕರುಗಳೂ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಎಲ್ಲ ಅನುದಾನವನ್ನು ಮತ್ತೆ ಸೇರಿಸಿ ದಲಿತ ಸಮುದಾಯದ ಕುಟುಂಬಕ್ಕೆ ತಲಾ 25 ಲಕ್ಷ ರೂನಂತೆ ಹಂಚಿಕೆ ಮಾಡಬೇಕು. ಎಸ್‌ಸಿ, ಎಸ್‌ಟಿ/ಟಿಎಸ್ಪಿ ಅನುದಾನದ ಸದ್ಬಳಕೆ ಮಾಡದೆ, ದುರ್ಬಳಕೆ ಮಾಡಿರುವ ಅಧಿಕಾರಿ ಮತ್ತು ಜನಪ್ರತಿನಿಧಿಗಳ ಮೇಲೆ ರಾಜ್ಯ ಪರಿಶಿಷ್ಟ ಜಾತಿ/ಪಂಗಡಗಳ ಉಪಯೋಜನಾ ಕಾಯ್ದೆ (2013) ಅನ್ವಯ ಕ್ರಿಮಿನಲ್ ಹಾಗೂ ಪರಿಶಿಷ್ಟ ಜಾತಿ/ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯನ್ವಯ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಬೇಕು ಎಂದು ಆಗ್ರಹಿಸಿದರು.
ವಾಲ್ಮಿಕಿ ಅಭಿವೃದ್ಧಿ ನಿಗಮದಲ್ಲಿ ಬಹುಕೋಟಿ ಭ್ರಷ್ಟಾಚಾರ ಮಾಡಿಸಿ, ಎಸ್‌ಐಟಿ ತನಿಖೆ ನಾಟಕವಾಡುತ್ತಿರುವ ರಾಜ್ಯ ಸರ್ಕಾರವೇ ಈ ಹಗರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಇಲ್ಲದಿದ್ದಲ್ಲಿ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಜಿಲ್ಲಾಧ್ಯಕ್ಷ ಬಿ.ಆನಂದ್, ಸುರೇಶ್ ಮರಳಗಾಲ, ಮರಂಕಯ್ಯ, ಅನಿಲ್‌ಕುಮಾರ್ ಇದ್ದರು.