ಮೀಸಲಾತಿ ನೀತಿ ಜಾರಿ ಆದೇಶ ಹಿಂಪಡೆಯಿರಿ: ದಸಂಸ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ ಒತ್ತಾಯ

DSS press conference Mandya
Published on

ಮಂಡ್ಯ: ರಾಜ್ಯ ಸರ್ಕಾರ ಹೊರಗುತ್ತಿಗೆ ಪದ್ಧತಿಯಲ್ಲಿ ಮೀಸಲಾತಿ ನೀತಿ ಜಾರಿ ಆದೇಶವನ್ನು ಕೂಡಲೇ ಹಿಂಪಡೆದು ಸರ್ಕಾರಿ ಸೇವಾ ನೇಮಕಾತಿ ಪ್ರಾರಂಭಿಸಬೇಕು ಎಂದು ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ ಒತ್ತಾಯಿಸಿದರು.

ಹೊರಗುತ್ತಿಗೆ ಮೂಲಕ ಖಾಸಗಿ ಏಜೆನ್ಸಿಗಳ ಮಾಲೀಕರ ಜೇಬು ತುಂಬಲು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಸರ್ವ ಜನರ ಸರ್ಕಾರಿ ಉದ್ಯೋಗಾವಕಾಶಗಳನ್ನು ವಂಚಿಸುವ ಸಲುವಾಗಿ ಸರ್ಕಾರಿ ಸೇವೆಯಲ್ಲಿ ಸಿ ಮತ್ತು ಡಿ ಹುದ್ದೆಗಳನ್ನು ತುಂಬುವಾಗ ಹೊರಗುತ್ತಿಗೆ ಪದ್ಧತಿ ಜಾರಿ ಮಾಡುತ್ತಿರುವುದನ್ನು ಸಮಿತಿ ತೀವ್ರವಾಗಿ ಖಂಡಿಸುತ್ತದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸರ್ಕಾರಿ ನೇಮಕಾತಿ ನೀತಿಯಂತೆ ಹಾಗೂ ಅಸಂವಿಧಾನದಂತೆ ನಡೆದುಕೊಂಡು ಸಿ ಮತ್ತು ಡಿ ಹುದ್ದೆಗಳನ್ನು ಈ ಕೂಡಲೇ ಭರ್ತಿ ಮಾಡಬೇಕು. ಒಂದು ವಾರದೊಳಗೆ ಕ್ರಮ ಕೈಗೊಳ್ಳದಿದ್ದಲ್ಲಿ ತೀವ್ರ ಚಳವಳಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ ಅವರು, ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಕೋಟ್ಯಂತರ ರೂ ಲೂಟಿ ಮಾಡಿ ಭ್ರಷ್ಟಾಚಾರ ಎಸಗಿರುವ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು. ನಿಗಮದ ವ್ಯವಸ್ಥಾಪಕ ನಿರ್ದೇಶಕರು ಸೇರಿದಂತೆ ತಪ್ಪಿತಸ್ಥ ಎಲ್ಲ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ನಿಗಮದಲ್ಲಿ ಇಷ್ಟೆಲ್ಲ ಹಗರಣಗಳು ನಡೆಯುತ್ತಿದ್ದರೂ ಪರಿಶಿಷ್ಟ ಪಂಗಡದ ಕಲ್ಯಾಣ ಇಲಾಖೆಯ ಸಚಿವ ಬಿ.ನಾಗೇಂದ್ರ ಜವಾಬ್ದಾರಿ ನಿಭಾಯಿಸುವಲ್ಲಿ ವಿಫಲರಾಗಿರುವ ಕಾರಣ ಮತ್ತು ಈ ಪ್ರಕರಣದಲ್ಲಿ ಭಾಗಿಯಾಗಿರುವ ಅನುಮಾನಗಳು ಇರುವ ಕಾರಣ, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಸಮಿತಿಯ ಮುಖಂಡರಾದ ಬಿ.ಆನಂದ್, ರಾಜು ನಿಡಘಟ್ಟ, ಜಯಮ್ಮ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net