

ಮಂಡ್ಯ: ಬುದ್ಧ ಭಾರತ ಫೌಂಡೇಷನ್ ವತಿಯಿಂದ 2568ನೇ ಬುದ್ಧ ಪೂರ್ಣಿಮೆ ಅಂಗವಾಗಿ ಮೇ.23ರಂದು ಶ್ರೀರಂಗಪಟ್ಟಣ ತಾಲೂಕು ಅರಕೆರೆ ಹೋಬಳಿ ನೇರಲಕೆರೆ ಗ್ರಾಮದಲ್ಲಿ ಸಾಮೂಹಿಕ ಅನ್ನದಾಸೋಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ ತಿಳಿಸಿದರು.
ಭಾರತದಲ್ಲಿ ಬುದ್ಧ ಧರ್ಮವನ್ನು ಪುನರ್ ಪ್ರತಿಷ್ಠಾಪನೆ ಮಾಡುತ್ತೇವೆಂಬ ಅಚಲವಾದ ನಂಬಿಕೆ ಮತ್ತು ವಿಶ್ವಾಸದೊಂದಿಗೆ ಈ ಅನ್ನಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬುದ್ಧ ಮತ್ತು ಆತನ ಧರ್ಮ ಹಾಗೂ ಅವರು ಬೋಧಿಸಿದ ಬೋದನೆ, ಬದುಕಿದ್ದಾಗ ಜೀವನದಲ್ಲಿ ನಡೆದುಕೊಂಡ ನಡೆ-ನುಡಿಯ ಕುರಿತು ಸರ್ವರಿಗೂ ತಿಳಿಸಬೇಕು. ಸತ್ಯ ಮಾರ್ಗದಲ್ಲಿ ಪ್ರತೀ ಮಾನವರೂ ಬಾಳಬೇಕು ಎಂಬ ಉದ್ದೇಶ ಹೊಂದಿದ್ದು, ಆ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಬುದ್ಧ ಭಾರತ ಫೌಂಡೇಷನ್ ಆಯೋಜಿಸಿಕೊಂಡು ಬರುತ್ತಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ಕುವೆಂಪು, ಡಾ.ಬಿ.ಆರ್.ಅಂಬೇಡ್ಕರ್, ಕನಕದಾಸರ ಅನುಯಾಯಿಗಳು ಇತರೆ ದಾರ್ಶನಿಕರೆಲ್ಲರ ಅಭಿಮಾನಿಗಳು, ಅಂದು ಮಧ್ಯಾಹ್ನ 1 ಗಂಟೆಗೆ ನಡೆಯಲಿರುವ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಫೌಂಡೇಷನ್‌ನ ಕಾರ್ಯಾಧ್ಯಕ್ಷ ಜೆ. ರಾಮಯ್ಯ, ಮುಖಂಡರಾದ ಲೋಕೇಶ್, ಗುರುಮೂರ್ತಿ, ಕುಮಾರ್, ಥಾಮಸ್ ಬೆಂಜಮಿನ್, ಅಮ್ಜದ್ ಪಾಷಾ ಇದ್ದರು.