

ಮಂಡ್ಯ: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿರುವ ಹಗರಣಕ್ಕೆ ಸಂಬಂಧಿಸಿದಂತೆ ನಿಷ್ಪಕ್ಷಪಾತ ತನಿಖೆ ನಡೆಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ ಒತ್ತಾಯಿಸಿದರು.
ವಿರೋಧ ಪಕ್ಷ, ರಾಜ್ಯಪಾಲರು ಹಾಗೂ ನ್ಯಾಯಾಲಯಕ್ಕೆ ಗೌರವ ನೀಡದೆ ಕಾಂಗ್ರೆಸ್ ಪಕ್ಷದ ಪ್ರಜಾಪ್ರಭುತ್ವ ವಿರುದ್ಧದ ದಾರಿ ಹಿಡಿದಿದೆ. ಪ್ರಜಾಪ್ರಭುತ್ವದ ಮೌಲ್ಯ, ಸಂವಿಧಾನದ ಗೌರವ ಉಳಿಯಬೇಕು ಎಂದರೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಲೇಬೇಕು ಎಂದು ಸುದ್ದಿಗೋಷ್ಠಿಯಲ್ಲಿ ತಾಕೀತು ಮಾಡಿದರು.
ರಾಜ್ಯಪಾಲರು ಪ್ರಾಷಿಕ್ಯೂಷನ್‌ಗೆ ಸಮ್ಮತಿ ನೀಡಿದಾಗಲೂ ರಾಜೀನಾಮೆ ನೀಡುವ ಬದಲಾಗಿ ಅವರ ಆದೇಶವನ್ನು ಧಿಕ್ಕರಿಸಿ ಸಂವಿಧಾನಕ್ಕೆ ಅಗೌರವ ತೋರಿದ್ದಾರೆ. ಸಂವಿಧಾನ ಮತ್ತು ಪ್ರಜಾತಂತ್ರ ಮೌಲ್ಯದ ಬಗ್ಗೆ ಮಾತನಾಡುವ ಕಾಂಗ್ರೆಸ್, ಹೈಕೋಟ್ ಹಾಗೂ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ತೀರ್ಪುಗಳಿಗೂ ಉದ್ಧಟತನ ತೋರುತ್ತಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಮಿತಿಯ ಮೈಸೂರು ವಿಭಾಗಿಯ ಸಂಚಾಲಕ ಕೆ.ಎಂ.ಅನಿಲ್‌ಕುಮಾರ್, ಜಿಲ್ಲಾಧ್ಯಕ್ಷ ಬಿ.ಆನಂದ್, ಶ್ರೀರಂಗಪಟ್ಟಣ ತಾಲೂಕು ಅಧ್ಯಕ್ಷ ಮಹದೇವು, ಪುಟ್ಟಸ್ವಾಮಿ, ಆನಂದ ಇದ್ದರು.