

ಮೈಸೂರು: ಅಮೆರಿಕದಲ್ಲಿ ನಡೆದ ಕಪ್ಪು ವರ್ಣೀಯರ ಹೋರಾಟದ ಮಾದರಿಯಲ್ಲಿ ದಲಿತ ಚಳವಳಿ ಸಾಗಿದ್ದರೆ ಬಹಳಷ್ಟು ಬದಲಾವಣೆಗಳು ಗೋಚರವಾಗುತ್ತಿದ್ದವು ಎಂದು ಸಂಸ್ಕೃತಿ ಚಿಂತಕ, ನಾಟಕಕಾರ ಕೋಟಗಾನಹಳ್ಳಿ ರಾಮಯ್ಯ ಅಭಿಪ್ರಾಯಪಟ್ಟರು.
ಮೈಸೂರು ವಿಶ್ವವಿದ್ಯಾಲಯದ ಡಾ.ಬಿ.ಆರ್. ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರದಲ್ಲಿ ಗುರುವಾರ ಆಯೋಜಿಸಿದ್ದ ವಿದ್ಯಾರ್ಥಿಗಳೊಂದಿಗೆ ಮುಕ್ತ ಸಂವಾದದಲ್ಲಿ ಮಾತನಾಡಿದರು.
ಅಮೆರಿಕದಲ್ಲಿ ಕಪ್ಪು ವರ್ಣೀಯರು ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸಿದರು. ಇದರ ಫಲವಾಗಿ ಅನೇಕ ಬದಲಾವಣೆಗಳು, ಕಾನೂನುಗಳು ಜಾರಿಗೆ ಬಂದವು. ಈ ಹೋರಾಟದ ಮಾದರಿಯಲ್ಲಿ ರಾಜ್ಯದಲ್ಲೂ ದಲಿತ ಚಳವಳಿ ಸಾಗಿದ್ದರೆ ವರ್ತಮಾನದ ವಿಷಮ ಸನ್ನಿವೇಶವನ್ನು ಎದುರಿಸಲು ಶಕ್ತಿ ದೊರೆಯುತ್ತಿತ್ತು. ಈ ಅವಕಾಶವನ್ನು ಡಿಎಸ್‌ಎಸ್ ಕಳೆದುಕೊಂಡಿದೆ ಎಂದರು.
ನುಡಿಗಳ ಹೊರತು ಯಾವ ರೀತಿಯ ಬಂಡವಾಳ ಇಲ್ಲದ ಶೋಷಿತರು ಒಗ್ಗೂಡಬೇಕು ಎಂದು ಹೇಳಿದರು.
ಅಂಬೇಡ್ಕರ್ ಪರಿನಿರ್ವಾಣವಾದ ಮೇಲೆ ಹುಟ್ಟಿಕೊಂಡ ಘೋಷಿತ ಅನುಯಾಯಿಗಳು, ಅಕಾಡೆಮಿಕ್ಸ್ ವಲಯದವರು ಅಂಬೇಡ್ಕರ್ ಬಗ್ಗೆ ಸಾಕಷ್ಟು ಬರೆದಿದ್ದಾರೆ. ಅವರಿಗೆ ಅಂಬೇಡ್ಕರ್ ಅವರನ್ನು ಸಮಕಾಲೀನಗೊಳಿಸುವ ಎದೆಗಾರಿಕೆ ಇಲ್ಲ. ಹೀಗಾಗಿ, ಅವರನ್ನು ಸಮಕಾಲೀನಗೊಳಿಸುವ ಮಹತ್ವದ ಪ್ರಯೋಗ ಪರಿಣಾಮಕಾರಿಯಾಗಿ ನಡೆಯಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಇನ್ನೂ ಎಷ್ಟು ದಿನಗಳ ಕಾಲ ಗಾಂಧಿಯನ್ನು ದ್ವೇಷಿಸುತ್ತ ಅವರೊಂದಿಗೆ ಗುದ್ದಾಟ ನಡೆಸಬೇಕು? ಅವರಿಬ್ಬರ ಚರ್ಚೆಯನ್ನು ಕಾಲಾತೀತವಾಗಿ ಮುಂದುವರಿಸಬೇಕೇ? ಸವರ್ಣೀಯ ಹಿಂದುವಾಗಿ ಗಾಂಧೀಜಿ ತನ್ನ ಮಿತಿಯೊಳಗೆ ನಡೆಸಿದ ಪ್ರಯೋಗಗಳ ಬಗ್ಗೆ ಕುಂದನ್ನು ಏಣಿಸಬಾರದು ಎಂದರು.
ಕಳೆದ 70 ವರ್ಷಗಳಲ್ಲಿ ಗಾಂಧಿ ಮತ್ತು ಅಂಬೇಡ್ಕರ್ ನಡುವಿನ ಭಿನ್ನಾಭಿಪ್ರಾಯದ ಸುತ್ತಲೇ ಚರ್ಚೆ ನಡೆದಿವೆ. ಆದರೆ ವಿಶ್ವದ ಚಿಂತಕರು ಅಂಬೇಡ್ಕರ್ ಅವರನ್ನು ವಿವಿಧ ರೀತಿಯಲ್ಲಿ ಅಧ್ಯಯನ ಮಾಡಿ ಬರೆಯುತ್ತಿದ್ದಾರೆ. ಅದನ್ನು ಗಮನಿಸಿದರೆ ಸಂತೋಷವಾಗುತ್ತದೆ ಎಂದರು.
ಈವರೆಗೆ ನಮಗೆ ಬೇಕಾದಂತೆ ಅಂಬೇಡ್ಕರ್ ಜೀವನ ಚರಿತ್ರೆ ಗ್ರಹಿಸಲಾಗಿದೆ. ಅವರ ಓದನ್ನು ನಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳಲಾಗಿದೆ. ಈಗಲೂ ಅವರ ಜಯಂತಿ ಯಾವ ರೀತಿ ಆಚರಿಸಬೇಕೆಂಬುದು ನಮ್ಮಲ್ಲಿ ಬಹಳಷ್ಟು ಜನರಿಗೆ ಗೊತ್ತಿಲ್ಲ. ಅಂಬೇಡ್ಕರ್ ಅವರನ್ನು ಪ್ರತಿಮೆ, ರಾಜಕಾರಣ, ನಾಮಾಂತರದ ಆಚೆಗೆ ಸಾಧ್ಯತೆ ಕಾಣದಿದ್ದರೆ ಸ್ಥಗಿತ ಬರುತ್ತದೆ ಎಂದು ಎಚ್ಚರಿಸಿದರು.
ಗ್ರಾಮಾಂತರ ಪ್ರದೇಶದಲ್ಲಿ ಪವರ್ ಕೇಂದ್ರಗಳನ್ನು ಎದುರು ಹಾಕಿಕೊಂಡು ನಡೆದ ದಲಿತ ಚಳವಳಿಯಲ್ಲಿ ಏಕೆ ಒಡಕು ಉಂಟಾಯಿತು? ಮೈವಿವಿಯ ಮಾನಸಗಂಗೋತ್ರಿ ಆವರಣದಲ್ಲಿ ಏಕೆ ಬಾಬುಜೀವನ್‌ರಾಮ್ ಮತ್ತು ಡಾ.ಅಂಬೇಡ್ಕರ್ ಪ್ರತ್ಯೇಕ ಅಧ್ಯಯನ ಕೇಂದ್ರಗಳಿವೆ. ಇದು ನಮ್ಮ ಪ್ರಜ್ಞೆಯನ್ನೂ ವಿಭಜಿಸಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಬಳಿಕ ನಡೆದ ಸಂವಾದದಲ್ಲಿ ಮಾತನಾಡಿದ ಅವರು, ಸಿದ್ದಲಿಂಗಯ್ಯ ಅವರಿಗಿಂತ ಮುಂಚೆ ಪದ್ಯಗಳನ್ನು ಬರೆಯುತ್ತಿದ್ದೆ. ಪ್ರಾಥಮಿಕ ಶಾಲೆಯಲ್ಲೇ ಪದ್ಯ ಬರೆಯಲಾರಂಭಿಸಿದ್ದೆ ಎಂದು ಹೇಳಿದರು.
ಸಿದ್ದಲಿಂಗಯ್ಯ ಅವರ ಜಗತ್ತು, ನನ್ನ ಜಗತ್ತು ಬೇರೆಯಾಗಿತ್ತು. ಆ ಕಾಲದಲ್ಲಿ ಭಾಷಣಕಾರರು ಇಲ್ಲದಿದ್ದರಿಂದ ಹಾಡು ಬರೆಯಬೇಕಾಯಿತು. ಆಂಧ್ರದಲ್ಲಿ ಗದ್ದರ್ ಹಾಡುಗಳನ್ನು ಕನ್ನಡಕ್ಕೆ ಅನುವಾದಿಸಿದೆ. ನಂತರ ಹಾಡುಗಳನ್ನು ಬರೆದೆ. ಸಿದ್ದಲಿಂಗಯ್ಯ ಅವರ ಹಾಡುಗಳು ಗ್ರಾಮಾಂತರ ಪ್ರದೇಶದ ಜನರ ಜತೆ ಕನೆಕ್ಟ್ ಆಗುತ್ತಿರಲಿಲ್ಲ. ಬಹುತೇಕ ಹಾಡುಗಳು ರೋಮ್ಯಾಂಟಿಕ್ ಅನಿಸುತ್ತದೆ ಎಂದರು.
ಪ್ರಾದೇಶಿಕ ಪಕ್ಷ ಮತ್ತು ಯುವಕರು ರಾಜಕೀಯ ಪ್ರವೇಶ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ನೆಲೆನಿಷ್ಠ ಪಕ್ಷ ಸ್ಥಾಪನೆಗೆ ಮುಂದಾಗಿದ್ದು, ಆರಂಭಿಕ ಹಂತದಲ್ಲಿ ಪ್ರಣಾಳಿಕೆ ಸಿದ್ಧವಾಗುತ್ತಿದೆ ಎಂದು ತಿಳಿಸಿದರು.
ದಲಿತ ಪ್ರಾತಿನಿಧಿಕರಣ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಾತಿನಿಧ್ಯ ಹಕ್ಕು. ಅದು ಎಲ್ಲ ಸಮುದಾಯಗಳಿಗೆ ಸರಿಯಾಗಿ ಧಕ್ಕುವಂತಾಗಬೇಕು ಎಂದು ಉತ್ತರಿಸಿದರು. ಡಾ.ಬಿ.ಆರ್. ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರದ ನಿರ್ದೇಶಕ ಪ್ರೊ.ಜೆ.ಸೋಮಶೇಖರ್, ಪ್ರಾಧ್ಯಾಪಕ ಡಾ.ನರೇಂದ್ರ ಕುಮಾರ್ ಇದ್ದರು.