ವಿವಿಧ ಬೇಡಿಕೆ ಈಡೇರಿಸಲು ಡಿಎಸ್​ಎಸ್​ ಪಟ್ಟು

FotoJet
Published on

ಬಂಗಾರಪೇಟೆ: ಸರ್ಕಾರದ ಜನವಿರೋಧಿ ಆಡಳಿತ ನಡೆಸುತ್ತಿದೆ ಎಂದು ಆರೋಪಿಸಿ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಪಟ್ಟಣದಲ್ಲಿನ ತಾಲೂಕು ಆಡಳಿತ ಕಚೇರಿಯ ಮುಂಭಾಗದಲ್ಲಿ ಸೋಮವಾರ ಬೃಹತ್​ ಪ್ರತಿಭಟನೆ ನಡೆಸಿದರು.

ಡಿಎಸ್​ಎಸ್​ ಜಿಲ್ಲಾ ಮುಖಂಡ ಹೂವಾರಸನಹಳ್ಳಿ ರಾಜಪ್ಪ ಮಾತನಾಡಿ, ಕಾಂಗ್ರೆಸ್​ ಮತ್ತು ಬಿಜೆಪಿ ಸರ್ಕಾರಗಳು ಜನರ ಕಲ್ಯಾಣಕ್ಕಾಗಿ ಕೋಟ್ಯಂತರ ರೂ. ಬಜೆಟ್​ ಮಂಡಿಸಿವೆ ಹೊರತು ಯೋಜನೆಗಳನ್ನು ಅನುಷ್ಠಾನ ಮಾಡದೆ ತನ್ನ ಗೊಸುಂಬೆತನದ ನಾಟಕ ಪ್ರದರ್ಶನ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕಿನಲ್ಲಿ ಬಹುಸಂಖ್ಯಾತರಿಗೆ ಸಾಗುವಳಿ ಚೀಟಿ ನೀಡಿದ್ದರೂ ಬಹುದಿನಗಳಿಂದ ಉಳುಮೆ ಮಾಡುತ್ತಿರುವ ದಲಿತ ಸಮುದಾಯಕ್ಕೆ ಸಾಗುವಳಿ ಚೀಟಿ ನೀಡದೆ ವಂಚಿಸಲಾಗುತ್ತಿದೆ. ಈ ಬಗ್ಗೆ ಪ್ರಶ್ನೆ ಮಾಡಿದರೆ ಕಡತಗಳೇ ನಾಪತ್ತೆಯಾಗಿವೆ ಎಂದು ಅಧಿಕಾರಿಗಳು ಹೇಳುತ್ತಾರೆ. ಸತ್ತವರನ್ನು ಹೂಳಲೂ ಸಹ ಸ್ಮಶಾನ ಜಾಗವಿಲ್ಲದೆ ಸಮುದಾಯದವರು ಪರದಾಡುವಂತಾಗಿದೆ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.

ತಾಲೂಕಿನಾದ್ಯಂತ ಅಧಿಕಾರಿಗಳು ಭೂ ಮಾಫಿಯಾದವರ ಬೆನ್ನಿಗೆ ನಿಂತು ನಕಲಿ ದಾಖಲೆಗಳನ್ನು ಸೃಷಿಸಿದ ಪರಿಣಾಮ ಇಂದು ಗುಂಡು ತೋಪು, ಓಣಿ, ಬಂಡಿ ದಾರಿ, ಕೆರೆ, ಓಣಿ, ರಾಜಕಾಲುವೆ ಕುಂಟೆಗಳು ಭೂ ಮಾಫಿಯಾದವರ ಪಾಲಾಗಿವೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪಿಡಿಒಗಳು ಖಾತೆ ಮಾಡಿಕೊಳ್ಳಲು 10 ಸಾವಿರ ರೂ.ವರೆಗೆ ಲಂಚ ಪಡೆಯುತ್ತಿದ್ದಾರೆ ಎಂದು ಆರೋಪಿಸಿದರು.

ಬೇಡಿಕೆಗಳು

ಹಿರೇಕರಪನಹಳ್ಳಿ ಗ್ರಾಮದ ಸರ್ವೇ ನಂ.65ರಲ್ಲಿ 35 ಜನ ಫಲಾನುಭವಿಗಳಿಗೆ ಸಾಗುವಳಿ ಚೀಟಿ ನೀಡಿದ್ದು, ಅವರಿಗೆ ಪಹಣಿ ಮ್ಯುಟೇಷನ್​ ನೀಡಬೇಕು, ಬೂದಿಕೋಟೆ, ಉಕ್ಕುಂದ, ಅತ್ತಿಗಿರಿ, ಸಿಂಗರಹಳ್ಳಿ ಸೇರಿ ಹಲವು ಗ್ರಾಮಗಳಲ್ಲಿ ಾಮ್​ರ್ ನಂ.53 ಹಾಗೂ 57ರಲ್ಲಿ ಸಾಗುವಳಿ ಚೀಟಿ ನೀಡಬೇಕು, ತಾಲೂಕಿನಾದ್ಯಂತ ದಲಿತರಿಗೆ ಸ್ಮಶಾನ ಭೂಮಿ ಮಂಜೂರು ಮಾಡಿ ದಾರಿ ಒದಗಿಸಬೇಕು, ಸರ್ಕಾರಿ ಜಮೀನು ಒತ್ತುವರಿ ತೆರವುಗೊಳಿಸಬೇಕು, ಚಿಕ್ಕವಲಗಮಾದಿ ಗ್ರಾಮದ ಸರ್ವೇ ನಂ.5 ರಲ್ಲಿರುವ 15 ಎಕರೆ 15 ಗುಂಟೆ ಕೆರೆ ಜಮೀನಿನ ಅಕ್ರಮ ದಾಖಲೆ ರದ್ದುಪಡಿಸುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಸಬೇಕೆಗೆ ಪ್ರತಿಭಟನಾಕಾರರು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net