ಗೃಹ ಸಚಿವ ಅಮಿತ್ ಷಾ ಹೇಳಿಕೆ ಸಮರ್ಥನೆಗೆ ಖಂಡನೆ, ಉಮೇಶ ಕಾರಜೋಳ ಕ್ಷಮೆ ಯಾಚಿಸಲಿ ಎಂದ ಡಿಎಸ್‌ಎಸ್ ಸಂಚಾಲಕ ರಾಯಣ್ಣವರ

UMESH KARAJOL-SIDDU RAYANNAVAR
ಸಿದ್ಧು ರಾಯಣ್ಣವರ, ಡಿಎಸ್‌ಎಸ್ ಜಿಲ್ಲಾ ಸಂಚಾಲಕ
Published on

ವಿಜಯಪುರ: ‘ಅಂಬೇಡ್ಕರ್ ಹೆಸರನ್ನು ಪದೇ ಪದೇ ಹೇಳುವ ಬದಲು ದೇವರ ಹೆಸರನ್ನು ಅಷ್ಟು ಬಾರಿ ಹೇಳಿದ್ದರೆ, ಏಳು ಜನ್ಮದ ಸ್ವರ್ಗ ಪ್ರಾಪ್ತಿಯಾಗಿರುತ್ತಿತ್ತು’ ಎಂಬ ಕೇಂದ್ರ ಗೃಹ ಸಚಿವ ಅಮಿತ್ ಷಾ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಬಿಜೆಪಿ ಎಸ್‌ಸಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ ಹೇಳಿಕೆಯನ್ನು ಖಂಡಿಸಿರುವ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಸಿದ್ದು ರಾಯಣ್ಣವರ, ಈ ಕೂಡಲೇ ಉಮೇಶ ಕಾರಜೋಳ ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿದ್ದಾರೆ.

ದಲಿತ ಸಮುದಾಯದಲ್ಲಿ ಜನಿಸಿರುವ ಉಮೇಶ ಕಾರಜೋಳ ದಲಿತರ ಕಲ್ಯಾಣಕ್ಕಾಗಿ ಶ್ರಮಿಸಿದ ಡಾ.ಬಿ.ಆರ್. ಅಂಬೇಡ್ಕರ್ ಕುರಿತು ಅವಹೇಳನಕಾರಿಯಾಗಿ ಮಾತನಾಡಿರುವ ಅಮಿತ್ ಷಾ ಹೇಳಿಕೆ ಸಮರ್ಥಿಸಿಕೊಂಡಿರುವುದು ನಾಚಿಕೆಗೇಡಿನ ಸಂಗತಿ. ಹಾಗೊಂದು ವೇಳೆ ಬಾಬಾಸಾಹೇಬರು ಇರದೇ ಇದ್ದರೆ, ಸಂವಿಧಾನ ರಚಿಸದೇ ಹೋಗಿದ್ದರೆ ಉಮೇಶ ಕಾರಜೋಳ ಅಂಥವರ ಅಭಿವ್ಯಕ್ತಿ ಸ್ವಾತಂತ್ರೃವಾದರೂ ಎಲ್ಲಿರುತ್ತಿತ್ತು ಎಂದು ಅವರು ಪ್ರಶ್ನಿಸಿದ್ದಾರೆ.

ಡಾ.ಬಿ.ಆರ್. ಅಂಬೇಡ್ಕರ್ ಅವರು ನಮಗೆ ಸಂವಿಧಾನವನ್ನು ನೀಡದೆ ಇದ್ದರೆ ತಮ್ಮ ವೃತ್ತಿ ಏನಾಗಿರುತ್ತಿತ್ತು? ಮತ್ತು ಸದ್ಯ ತಾವು ಯಾವ ಸ್ಥಿತಿಯಲ್ಲಿದ್ದೀರಿ ಎಂಬುದರ ಬಗ್ಗೆ ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು. ಅಂಬೇಡ್ಕರ್ ಅವರು ನೀಡಿರುವ ಸವಲತ್ತುಗಳ ಆಧಾರದ ಮೇಲೆ ತಾವುಗಳು ಈ ಒಂದು ಹುದ್ದೆಯಲ್ಲಿ ನೇಮಕವಾಗಿರುತ್ತೀರಿ. ಸದನದಲ್ಲಿ ತಮ್ಮ ನಾಯಕರು ಡಾ.ಬಿ.ಆರ್. ಅಂಬೇಡ್ಕರ್ ಕುರಿತು ಹೇಳಿಕೆಯನ್ನು ನೀಡಿರುವುದು ಒಬ್ಬ ದಲಿತನಾಗಿ ಖಂಡಿಸುವುದನ್ನು ಬಿಟ್ಟು ಅದನ್ನೇ ಸಮರ್ಥಿಸಿಕೊಂಡಿರುವುದು ನೋಡಿದರೆ ಬಾಬಾಸೇಹಬರ ಕನಸಿಗೆ ಕೊಳ್ಳೆ ಇಟ್ಟು ಬಹುಸಂಖ್ಯಾತ ಸಮುದಾಯವನ್ನು ಮತ್ತೆ ಗುಲಾಮಗಿರಿಗೆ ತಳ್ಳುವ ಆಲೋಚನೆ ತಮ್ಮಿಂದ ಕಾಣಬರುತ್ತಿದೆ. ಈ ಕೂಡಲೇ ತಮ್ಮ ನಿಲುವು ಬದಲಿಸಿಕೊಂಡು ಕ್ಷಮೆ ಯಾಚಿಸದೇ ಹೋದರೆ ಬಹುಸಂಖ್ಯಾತರಿಂದ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಪ್ರಕಟಣೆ ಮೂಲಕ ಅವರು ಎಚ್ಚರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net