ಡಿಎಸ್‌ಎಸ್‌ನಿಂದ ಅಭಿನಂದನಾ ಕಾರ್ಯಕ್ರಮ

19MDK08
Published on

ಮಡಿಕೇರಿ:

ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಏಳನೇ ಹೊಸಕೋಟೆ ಸರ್ಕಾರಿ ಪ್ರೌಢಶಾಲೆಯಲ್ಲಿ ೨೦೨೨- ೨೩ ನೇ ಸಾಲಿನಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಾಗು ಇದಕ್ಕೆ ಕಾರಣರಾದ ಶಿಕ್ಷಕ ವೃಂದದವರಿಗೆ ಸೋಮವಾರ ಸನ್ಮಾನ ಮಾಡಲಾಯಿತು. ಈ ವೇಳೆ ಪ್ರಾಸ್ತಾವಿಕವಾಗಿ ಮಾತನಾಡಿದ ಡಿ.ಎಸ್.ಎಸ್. ಜಿಲ್ಲಾ ಸಂಚಾಲಕ ದಿವಾಕರ್ ಹೆಚ್.ಎಲ್., ದಲಿತ ಸಂಘರ್ಷ ಸಮಿತಿ ಕಳೆದ ಒಂದು ದಶಕದಿಂದ ನಡೆಸಿದ ಸೇವೆ ಬಗ್ಗೆ ಮಾಹಿತಿ ನೀಡಿದಲ್ಲದೆ, ವಿದ್ಯಾರ್ಥಿಗಳಿಗೆ, ಪೋಷಕರಿಗೆ ನೀಡಿದ ಸನ್ಮಾನದ ಉದ್ದೇಶವನ್ನು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಪಂಚಾಯತ್ ಅಧ್ಯಕ್ಷ ರಮೇಶ್ ಮಾತನಾಡಿ ನಾವು ಉತ್ತಮವಾದ ನಾಗರಿಕರಾಗಿರುವುದನ್ನು ಮುಖ್ಯವಾದ ಗುರಿಯನ್ನಾಗಿಸಿಕೊಳ್ಳಬೇಕು. ಇದೇ ಮೊದಲ ಬಾರಿಗೆ ನಮ್ಮ ಶಾಲೆ ಸನ್ಮಾನಕ್ಕೆ ಭಾಜನರಾಗುತ್ತಿರುವುದು ನಮ್ಮ ಜವಾಬ್ದಾರಿಯನ್ನು ಹೆಚ್ಚು ಮಾಡುತ್ತಿದೆ. ಈ ಸನ್ಮಾನ ಪಡೆದುಕೊಂಡು ಸಿಕ್ಕ ಗೌರವವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಪಿಡಿಒ ನಂದೀಶ್ ಮಾತನಾಡಿ, ವಿದ್ಯಾರ್ಥಿಗಳನ್ನು ಮುನ್ನಲೆಗೆ ತರುವಂತಹ ಶಿಕ್ಷಕರಿಗೆ ಸನ್ಮಾನ ನಡೆಸುವ ಕಾರ್ಯಕ್ರಮ ಹಾಗು ಮಕ್ಕಳಿಗೆ ಸನ್ಮಾನ ನೀಡುವುದು ಅಭಿನಂದನೀಯವೆಂದರು. ಅಂಬೇಡ್ಕರ್ ಅವರು ಶಾಲೆಯ ಹೊರಭಾಗದಲ್ಲಿ ಕುಳಿತು ಓದಿ ನಮ್ಮನ್ನೆಲ್ಲಾ ಒಳಗೆ ಕುಳಿತು ಓದುವ ಹಾಗೆ ಕಾನೂನು ರೂಪಿಸಿದ್ದಾರೆ. ಅವರನ್ನು ಎಂದಿಗೂ ಮರೆಯುವಂತಿಲ್ಲ ಎಂದರು.

ಡಿಎಸ್‌ಎಸ್ ತಾಲೂಕು ಸಂಚಾಲಕ ದೀಪಕ್ ಪೊನ್ನಪ್ಪ ಮಾತನಾಡಿ, ಅಂಬೇಡ್ಕರ್ ಅವರ ಸಂದೇಶದ ಮಹತ್ವವನ್ನು ಉದಾಹರಣೆಗಳ ಸಹಿತ ವಿವರಿಸಿ ಡಾ. ಬಿ. ಆರ್. ಅಂಬೇಡ್ಕರ್ ಅವರು ಅಭ್ಯಾಸ ನಡೆಸುತ್ತಿದ್ದ ರೀತಿ ಮತ್ತು ಆ ಶ್ರಮದಿಂದ ಅವರು ಗಳಿಸಿದ ಪದವಿಗಳು, ಸ್ಥಾನ, ಗೌರವದ ಮಾಹಿತಿ ನೀಡಿದರು.
ಶಾಲೆಯ ಮುಖ್ಯ ಶಿಕ್ಷಕ ಸೋಮಯ್ಯ ಮಾತನಾಡಿ ದ.ಸಂ.ಸ. ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿ ನಡೆಸುತ್ತಿದ್ದ ಕಾರ್ಯಕ್ರಮವನ್ನು ಗಮನಿಸಿ ನಮಗೂ ಆ ಸೌಭಾಗ್ಯ ಸಿಗಬೇಕೆಂದು ಆಶಿಸುತ್ತಿದ್ದೆ. ಅದೀಗ ಸಾಕಾರ ಆಯಿತು ಎಂದರು. ಕಾರ್ಯಕ್ರಮದಲ್ಲಿ ಶಾಲೆಯ ಅಭಿವೃದ್ಧಿ ಸಮಿತಿ ಅಧ್ಯಕ್ಷೆ ಶ್ರೀಜಾ, ಉಪಾಧ್ಯಕ್ಷ ಸಯ್ಯದ್ ಅಲಿ, ಸುಂಟಿಕೊಪ್ಪ ಪೊಲೀಸ್ ಠಾಣೆಯ ಸಹಾಯಕ ಉಪ ನಿರೀಕ್ಷಕರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net