ಹಗುರ ಹೇಳಿಕೆ ಬಿಟ್ಟು ಅಭಿವೃದ್ಧಿಗೆ ಗಮನ ಹರಿಸುವಂತೆ ಶಿಕ್ಷಣ ಸಚಿವರಿಗೆ ಡಿ.ಎಸ್.ಅರುಣ್ ಸಲಹೆ

bjp press meet
Published on

ಶಿವಮೊಗ್ಗ: ಚುನಾವಣೆಗಳು ಬರುತ್ತವೆ, ಹೋಗುತ್ತವೆ. ಆದರೆ ವ್ಯಕ್ತಿತ್ವವನ್ನು ಉಳಿಸಿಕೊಂಡು ಹೋಗಬೇಕು. ಮತ್ತೊಬ್ಬರ ಬಗ್ಗೆ ಕೀಳುಮಟ್ಟದ, ಹಗುರವಾದ ಹೇಳಿಕೆ ನೀಡುವುದನ್ನು ಬಿಟ್ಟು ಶಿವಮೊಗ್ಗದ ಅಭಿವೃದ್ಧಿ ಕಡೆಗೆ ಗಮನ ಹರಿಸುವಂತೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಬಿಜೆಪಿ ರಾಜ್ಯ ಕಾರ್ಯದರ್ಶಿ, ಎಂಎಲ್‌ಸಿ ಡಿ.ಎಸ್.ಅರುಣ್ ಸಲಹೆ ನೀಡಿದರು.

ಶಿವಮೊಗ್ಗ ಸುಸಂಸ್ಕೃತರ ಜಿಲ್ಲೆ. ನಾಲ್ಕು ಮುಖ್ಯಮಂತ್ರಿಗಳನ್ನು ಕೊಟ್ಟಿದ್ದು, ಜಿಲ್ಲೆಗೆ ತನ್ನದೆಯಾದ ಇತಿಹಾಸವಿದೆ. ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರು ನಾಲ್ಕು ಬಾರಿ ಸಂಸತ್ ಪ್ರವೇಶಿಸಿದ್ದು, ಬೈಂದೂರು ಒಳಗೊಂಡಂತೆ ಶಿವಮೊಗ್ಗ ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರ. ಅದನ್ನು ಅಂಕಿಅಂಶ ಸಹಿತ ಚರ್ಚೆಗೆ ಸಿದ್ಧವಿದ್ದೇವೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಸವಾಲು ಹಾಕಿದರು.

ಶಿಕ್ಷಣ ಇಲಾಖೆಯನ್ನು ಗೋವಿಂದೇಗೌಡ, ಸುರೇಶ್‌ಕುಮಾರ್, ವಿಶ್ವೇಶ್ವರ ಹೆಗಡೆ ಕಾಗೇರಿ, ಬಿ.ಸಿ.ನಾಗೇಶ್, ವಿಶ್ವನಾಥ ಅಂತಹವರು ಮುನ್ನಡೆಸಿದ್ದಾರೆ. ಆದರೆ ಮಕ್ಕಳಿಗೆ ಆದರ್ಶವಾಗಬೇಕಿದ್ದ ಇಂದಿನ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅದಕ್ಕೆ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಅವರಿಗೆ ತಾವು ಏನು ಮಾತನಾಡುತ್ತಿದ್ದೇವೆ ಎಂಬುದೇ ಅರಿವಿಲ್ಲ. ಅವರು ಕನ್ನಡದ ಶಬ್ಧಕೋಶವನ್ನೇ ಅರಿತಿಲ್ಲ. ಸಂಸ್ಕೃತಿಯೂ ಗೊತ್ತಿಲ್ಲ. ಒಬ್ಬ ಶಿಕ್ಷಣ ಸಚಿವರಾಗಿ ಹೇಗೆ ಮಾತನಾಡಬೇಕೆಂಬ ಅರಿವೇ ಅವರಿಗಿಲ್ಲ. ಇಂತಹ ಶಿಕ್ಷಣ ಸಚಿವರಿಂದ ಮಕ್ಕಳು ಏನು ಕಲಿಯುತ್ತಾರೋ ಎಂದು ಟೀಕಿಸಿದರು.

ಪ್ರತಿಪಕ್ಷಗಳು ಆರೋಪ ಮಾಡುವುದು ಸಹಜ. ಆ ಆರೋಪಗಳಿಗೆ ತಕ್ಕ ಉತ್ತರ ಕೊಡಬೇಕು. ಒಬ್ಬ ಜಿಲ್ಲಾ ಉಸ್ತುವಾರಿ ಸಚಿವರಾಗಿ ಇವರೇನು ಜಿಲ್ಲೆಯ ಅಭಿವೃದ್ಧಿ ಮಾಡಿದ್ದಾರೆ ಎಂದು ಪ್ರಶ್ನಿಸಿದ ಅವರು, ರಾಘವೇಂದ್ರ ಅಭಿವೃದ್ಧಿ ಮಾಡಿದ್ದು ಬೇಕಾದಷ್ಟಿದೆ. ಶಿವಮೊಗ್ಗ ಅಭಿವೃದ್ಧಿಯ ಬಗ್ಗೆ ನಮ್ಮೊಂದಿಗೆ ಚರ್ಚೆಗೆ ಬರಲಿ. ಯಾರ ಕಾಲದಲ್ಲಿ ಹೆಚ್ಚು ಅಭಿವೃದ್ಧಿಯಾಗಿದೆ ಎಂಬುದನ್ನು ನಾವು ಅವರಿಗೆ ಹೇಳುತ್ತೇವೆ. ಇವರು ಸಚಿವರಾದ ಮೇಲೆ ಜಿಲ್ಲೆಯಲ್ಲಿ ಒಂದು ರಸ್ತೆಯೂ ಆಗಿಲ್ಲ. ಏನು ಅಭಿವೃದ್ಧಿಯಾಗಿದೆ ಎಂದು ಶ್ವೇತಪತ್ರ ಹೊರಡಿಸಲಿ ಎಂದು ಸವಾಲು ಹಾಕಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾಲತೇಶ್, ಪ್ರಮುಖರಾದ ಕೆ.ವಿ.ಅಣ್ಣಪ್ಪ, ಚಂದಶೇಖರ್, ಪ್ರಶಾಂತ್ ಪಂಡಿತ್ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net