ಒಣಗುತ್ತಿವೆ ತೋಟಗಾರಿಕೆ ಬೆಳೆ

24 RON 1 B
Published on

ಸೋಮು ಲದ್ದಿಮಠ ರೋಣ

ಪಟ್ಟಣದಲ್ಲಿ ವಿದ್ಯುತ್ ಕಣ್ಣಾ ಮುಚ್ಚಾಲೆಯಿಂದಾಗಿ ತೋಟಗಾರಿಕೆ ಬೆಳೆಗಳು ಒಣಗುತ್ತಿವೆ. ತೋಟಗಾರಿಕೆ ಜಮೀನಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರಿದ್ದರೂ ಬಾಡುತ್ತಿರುವ ಬೆಳೆಗಳಿಗೆ ನೀರುಣಿಸಲಾಗದೇ ರೈತರು ಪರಿತಪಿಸುತ್ತಿದ್ದಾರೆ.

ಬಾಳೆ, ದಾಳಿಂಬೆ, ಲಿಂಬೆ, ಮೆಣಸಿನ ಸಸಿಗಳು, ರೇಷ್ಮೆ, ಕೊತ್ತಂಬರಿ ಸೊಪ್ಪು, ಕರಿಬೇವಿನಸೊಪ್ಪು, ನುಗ್ಗೆ ಸೇರಿ ಹಲವು ರೀತಿಯ ಬೆಳೆಗಳು ಜಮೀನಿನಲ್ಲಿಯೇ ಒಣಗುತ್ತಿವೆ.

ಸಮರ್ಪಕವಾಗಿ ವಿದ್ಯುತ್ ಪೂರೈಸುವಂತೆ ಕಳೆದ ಎರಡ್ಮೂರು ತಿಂಗಳಿನಿಂದ ಹೆಸ್ಕಾಂ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಬೆಳೆಗಾರರು.

ರೈತ ವೀರಣ್ಣ ಸಜ್ಜನ ವಿಜಯವಾಣಿಯೊಂದಿಗೆ ಮಾತನಾಡಿ, ನಾಲ್ಕು ಎಕರೆ ಜಮೀನಿನಲ್ಲಿ ನಾಲ್ಕು ಇಂಚು ನೀರಿದೆ. ಒಂದು ಲಕ್ಷ ರೂಪಾಯಿ ಖರ್ಚು ಮಾಡಿ ಎರಡು ಎಕರೆ ಬಾಳೆ, ಒಂದು ಎಕರೆ ಕೊತ್ತಂಬರಿ, ಒಂದು ಎಕರೆ ಮೆಣಸಿನ ಬೆಳೆ ಬೆಳೆದಿದ್ದೇನೆ. ಎರಡು ತಿಂಗಳಿನಿಂದ ದಿನಕ್ಕೆ 3 ಗಂಟೆ ಸಹ ವಿದ್ಯುತ್ ಪೂರೈಕೆ ಆಗುತ್ತಿಲ್ಲ. ಇನ್ನು 3 ತಾಸು ಸಿಂಗಲ್ ಫೇಸ್ ಇರುವುದರಿಂದ ನೀರಿನ ಮೋಟಾರ್ ಆನ್ ಆಗುವುದಿಲ್ಲ. ಬಾಳೆ ಬೆಳೆ ಇನ್ನೇನು ಫಲ ನೀಡಬೇಕಿದ್ದ ಸಮಯದಲ್ಲಿ ಸಂಪೂರ್ಣ ನೆಲ ಕಚ್ಚುತ್ತಿದೆ. ಜಮೀನಿನಲ್ಲಿ ನೀರಿದ್ದರೂ ಪೂರೈಕೆ ಮಾಡಲಾಗದ್ದರಿಂದ ಮೆಣಸಿನ ಸಸಿ, ಕೊತ್ತಂಬರಿ ಸೊಪ್ಪನ್ನು ಹರಗಿದ್ದೇನೆ ಎಂದರು.

‘3 ಲಕ್ಷ ರೂಪಾಯಿ ಖರ್ಚು ಮಾಡಿ ಎರಡೂವರೆ ಎಕರೆ ದಾಳಿಂಬೆ ಬೆಳೆದಿದ್ದೇನೆ. 3 ಇಂಚು ನೀರಿದೆ, ಬೆಳೆಗೆ ನೀರುಣಿಸಲು ವಿದ್ಯುತ್ ಪೂರೈಕೆ ಇಲ್ಲ. ರೈತರಿಗೆ ಯಾಕೆ ಉಚಿತವಾಗಿ ವಿದ್ಯುತ್ ನೀಡಬೇಕು ಎಂಬ ಕಾರಣವೋ ಏನೋ ಗೊತ್ತಿಲ್ಲ. ಕಾಟಾಚಾರಕ್ಕೆ ಎಂಬಂತೆ ದಿನಕ್ಕೆ 3 ತಾಸು ವಿದ್ಯುತ್ ಸರಬರಾಜು ಮಾಡುತ್ತಾರೆ. ಬೆಳೆ ಉಳಿಸಿಕೊಳ್ಳಲು ಕನಿಷ್ಠ 5 ತಾಸು ವಿದ್ಯುತ್ ಕೊಡಿ ಎಂದು ಹೆಸ್ಕಾಂ ಅಧಿಕಾರಿಗಳಿಗೆ ಕೈ ಮುಗಿದು ಬೇಡಿಕೊಂಡರೂ ಕ್ಯಾರೇ ಎನ್ನುತ್ತಿಲ್ಲ. ಇದರಿಂದಾಗಿ ದಾಳಿಂಬೆ ಬೆಳೆ ಒಣಗುತ್ತಿದೆ’ ಎಂದು ರೈತ ಬಸಣ್ಣ ಶಾಂತಗೇರಿ ಳಲು ತೋಡಿಕೊಂಡರು. ‘ಒಂದು ಎಕರೆ ಜಮೀನಿನಲ್ಲಿ ರೇಷ್ಮೆ ಕೃಷಿ ಮಾಡಿದ್ದೇನೆ. ನೀರಿಲ್ಲದೇ ಸೊಪ್ಪು ಬೆಳೆಯದ ಕಾರಣ ರೇಷ್ಮೆ ಹುಳಗಳು ವಿಲವಿಲ ಒದ್ದಾಡಿ ಸಾಯುತ್ತಿವೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ರೇಷ್ಮೆ ಶೆಡ್ ಹಾಕಿದ್ದೇನೆ. ಈಗ ಏನು ಮಾಡಬೇಕೆಂಬುದೇ ತೋಚದಂತಾಗಿದೆ’ ಎನ್ನುತ್ತಾರೆ ರೈತ ರವಿ ನಾಯ್ಕರ. ‘ಬೆಳೆಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದೇವೆ. ಅವುಗಳನ್ನು ಉಳಿಸಿಕೊಳ್ಳಲು ಹೆಸ್ಕಾಂನವರು ಅಗತ್ಯವಿರುವ ವಿದ್ಯುತ್ ಪೂರೈಸಬೇಕು. ಇಲ್ಲದಿದ್ದರೆ ತೋಟಗಾರಿಕೆ ಬೆಳೆ ಬೆಳೆಗಾರರೆಲ್ಲ ಸೇರಿ ತೀವ್ರ ಹೋರಾಟ ಮಾಡುತ್ತೇವೆ’ ಎಂದು ರೈತ ಚೆನ್ನಪ್ಪ ಸಜ್ಜನ ಇತರರು ಎಚ್ಚರಿಸಿದ್ದಾರೆ.

ಬಾಗಲಕೋಟೆ, ವಿಜಯಪುರ ಜಿಲ್ಲೆಯ ತೋಟಗಾರಿಕೆ ರೈತರು ಹೈ ವೋಲ್ಟೇಜ್ ವೈರ್ ತಂದು ಕೊಡುತ್ತಾರೆ. ಅದೇ ರೀತಿ ಇಲ್ಲಿನ ರೈತರು ಹೈ ವೋಲ್ಟೇಜ್ ವೈರ್ ತಂದು ಕೊಟ್ಟರೆ ಅವರ ಜಮೀನಿಗೆ ವಿದ್ಯುತ್ ನೀಡುತ್ತೇವೆ. ಈ ಬಗ್ಗೆ ರೈತರಿಗೆ ಹೇಳಿದ್ದೇವೆ.| ಕೆ.ಎಸ್. ಹಾದಿಮನಿ ಹೆಸ್ಕಾಂ ಎಇಇ ರೋಣ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net