ಹಿರೇಕೆರೂರ ತಾಲೂಕಿನ ರಸ್ತೆ ಪಕ್ಕ ಒಣ ಮರ- ಸವಾರರಿಗೆ ಜೀವಭಯ!

Dry Tree on road side in hirekerur
Published on

ಹಿರೇಕೆರೂರ: ಪಟ್ಟಣದಿಂದ ತಾವರಗಿ ಮಾರ್ಗವಾಗಿ ರಾಣೆಬೆನ್ನೂರು, ಶಿರಾಳಕೊಪ್ಪ, ಶ್ರೀರಾಮನಕೊಪ್ಪ, ಹಂಸಭಾವಿ, ಮಾಸೂರು ರಸ್ತೆ ಹೀಗೆ ರಾಜ್ಯ ಮತ್ತು ಜಿಲ್ಲಾ ಹೆದ್ದಾರಿಯ ಅಕ್ಕಪಕ್ಕದಲ್ಲಿ ಪುರಾತನ ಮರಗಳಿದ್ದು, ಅವು ಒಣಗಿ ಧರೆಗೆ ಉರುಳುವ ಸ್ಥಿತಿಯಲ್ಲಿದ್ದು, ಅಪಾಯಕ್ಕೆ ಆಹ್ವಾನಿಸುತ್ತಿವೆ.

ಲೋಕೋಪಯೋಗಿ ಮತ್ತು ಕೆಆರ್​ಡಿಸಿಎಲ್ ಅವರಿಗೆ ಸೇರಿದ ಜಿಲ್ಲಾ ಮತ್ತು ರಾಜ್ಯ ಹೆದ್ದಾರಿ ಇಕ್ಕೆಲದಲ್ಲಿ ಹಳೆಯ ಗಿಡ- ಮರಗಳಿದ್ದು, ಅವುಗಳಲ್ಲಿ ಕೆಲವು ಮರಗಳ ಆಯುಷ್ಯ ಬಹುತೇಕ ಮುಗಿದು ಒಣಗಿ ನಿಂತಿವೆ. ಈಗಲೋ ಆಗಲೋ ಬೀಳುವ ಸ್ಥಿತಿಯಲ್ಲಿವೆ. ಈ ಮಾರ್ಗಗಳಲ್ಲಿ ನಿತ್ಯ ಸಾವಿರಾರು ವಾಹನಗಳು, ದ್ವಿಚಕ್ರ ವಾಹನ ಸವಾರರು, ಶಾಲೆ-ಕಾಲೇಜ್​ಗಳ ವಿದ್ಯಾರ್ಥಿಗಳು ಸೇರಿ ಸಹಸ್ರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಸಂಚರಿಸುತ್ತಿದ್ದಾರೆ. ಹೀಗಾಗಿ ಒಣಗಿದ ಮರಗಳಿಂದ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ. ಹೀಗೆ ಸಾಗುವಾಗ ಅಕಸ್ಮಾತ್ ಮರಗಳು ಉರುಳಿ ಬಿದ್ದರೆ ಯಾರು ಗತಿ? ಎಂಬಂತಾಗಿದೆ.

ಕೆಲ ತಿಂಗಳುಗಳ ಹಿಂದೆ ಹೆಸ್ಕಾಂ ಕಚೇರಿಯ ಬಳಿ ಒಣಗಿದ ಮರವೊಂದು ಬೈಕ್ ಮೇಲೆ ಏಕಾಏಕಿ ಬಿದ್ದಿದ್ದರಿಂದ ಹೆಸ್ಕಾಂನ ಇಬ್ಬರು ನೌಕರರು ಸಾವನ್ನಪ್ಪಿದ್ದು, ಒಬ್ಬ ಗಂಭೀರವಾಗಿ ಗಾಯಗೊಂಡಿದ್ದು, ಈಗಲೂ ಎದ್ದು ಓಡಾಡದ ಸ್ಥಿತಿಯಲ್ಲಿದ್ದಾರೆ. ಆ ಸಮಯದಲ್ಲಿ ಎಚ್ಚೆತ್ತುಕೊಂಡ ಅರಣ್ಯ ಮತ್ತು ಲೋಕೋಪಯೋಗಿ ಇಲಾಖೆಯವರು, ಸ್ವಲ್ಪಮಟ್ಟಿಗೆ ಮಾಸೂರು ರಸ್ತೆಯಲ್ಲಿ ಮರಗಳನ್ನು ತೆರವುಗೊಳಿಸಿದ್ದರು. ಆದರೂ ಇನ್ನು ಬಹಳಷ್ಟು ಮರಗಳು ಬಾಕಿಯಿದ್ದು, ಆ ಮರಗಳನ್ನು ತೆರವುಗೊಳಿಸುವ ಗೋಜಿಗೆ ಹೋಗುತ್ತಿಲ್ಲ. ಈ ಬಗ್ಗೆ ಲೋಕೋಪಯೋಗಿ ಇಲಾಖೆಯವರು ಹಲವು ಬಾರಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಆದರೆ, ಯಾವ ಕಾರಣಕ್ಕೆ ಕಾಲಹರಣ ಮಾಡುತ್ತಿದ್ದಾರೆ ಎಂಬುದು ತಿಳಿಯದಂತಾಗಿದೆ. ಮತ್ತಷ್ಟು ಪ್ರಾಣ ಹಾನಿಯಾಗುವ ಮುನ್ನವೇ ಒಣಗಿದ ಮತ್ತು ರಸ್ತೆ ಮೇಲೆ ಬಾಗಿರುವ ಮರಗಳನ್ನು ತೆರವುಗೊಳಿಸಲು ಮುಂದಾಗಬೇಕು ಎಂಬುದು ವಾಹನ ಸವಾರರು ಹಾಗೂ ವಾಯುವಿಹಾರಿಗಳ ಆಗ್ರಹವಾಗಿದೆ.

ಈಗಾಗಲೇ ಲೋಕೋಪಯೋಗಿ ಇಲಾಖೆಯವರು ಇದಕ್ಕೆ ಸಂಬಂಧಿಸಿದಂತೆ ನಮ್ಮ ಇಲಾಖೆಗೆ ಮನವಿ ಸಲ್ಲಿಸಿದ್ದಾರೆ. ಹರಾಜು ಪ್ರಕ್ರಿಯೆ ಮುಗಿದಿದ್ದು, ಗುತ್ತಿಗೆದಾರರಿಗೆ ಪರವಾನಗಿ ನೀಡಲಾಗಿದೆ. ಮುರ್ನಾಲ್ಕು ದಿನಗಳಲ್ಲಿ ಒಣಗಿದ ಮರಗಳನ್ನು ತೆರವುಗೊಳಿಸಲಾಗುವುದು. | ವಿಜಯಕುಮಾರ ಮುಡಬಾಗಿಲು ವಲಯ ಅರಣ್ಯಾಧಿಕಾರಿ, ಹಿರೇಕೆರೂರ ಮರ ತೆರವುಗೊಳಿಸಲು ನಮ್ಮ ಇಲಾಖೆಗೆ ಅಧಿಕಾರವಿಲ್ಲ. ಅರಣ್ಯ ಇಲಾಖೆಗೆ ಸಂಬಂಧಿಸಿದ್ದು, ಈ ಕುರಿತು ಹಲವು ಬಾರಿ ಅರಣ್ಯ ಇಲಾಖೆಗೆ ಮನವಿ ಸಲ್ಲಿಸಲಾಗಿದ್ದರೂ ಅವರು ಮರಗಳನ್ನು ತೆರವುಗೊಳಿಸಿಲ್ಲ. ಮತ್ತೊಮ್ಮೆ ಈ ಕುರಿತು ಅರಣ್ಯ ಇಲಾಖೆಗೆ ಮನವರಿಕೆ ಮಾಡಲಾಗುವುದು. | ಮಾಲತೇಶ ಕಲ್ಲಮ್ಮನವರ ಪಿಡಬ್ಲುಡಿ ಹಿರೇಕೆರೂರ ಪಟ್ಟಣದ ಶಿರಾಳಕೊಪ್ಪ ರಸ್ತೆ ಇಕ್ಕೆಲದಲ್ಲಿ ಬಹಳಷ್ಟು ಒಣ ಮತ್ತು ರಸ್ತೆ ಕಡೆ ಬಾಗಿದ ಮರಗಳಿವೆ. ಇವುಗಳಲ್ಲಿ ಸಾಮಿಲ್ ಬಳಿ ಮರವೊಂದು ಒಣಗಿದ್ದು, ಕಿಡಿಗೇಡಿಗಳು ಅದರ ಬುಡಕ್ಕೆ ಬೆಂಕಿ ಹಚ್ಚಿದ್ದಾರೆ. ಅದು ಅರ್ಧಂಬರ್ಧ ಸುಟ್ಟಿದ್ದು, ಯಾವಾಗ ಧರೆಗೆ ಉರುಳುತ್ತದೆಯೋ ತಿಳಿಯದಾಗಿದೆ. ಈ ಮಾರ್ಗವಾಗಿ ಬೆಳಗ್ಗೆ ವಾಯು ವಿಹಾರಿಗಳು ಹಾಗೂ ನಿತ್ಯ ನೂರಾರು ವಾಹನಗಳ ಸವಾರರು ಸಂಚರಿಸುತ್ತಾರೆ. ಏಕಾಏಕಿ ಮರ ಬಿದ್ದು ಅನಾಹುತ ಸಂಭವಿಸಿದರೆ ಯಾರು ಹೊಣೆ. ಸಂಬಂಧಪಟ್ಟವರು ಎಚ್ಚೆತ್ತು ಒಣಗಿದ, ಬಾಗಿದ ಮರಗಳನ್ನು ತೆರವುಗೊಳಿಸಿ ಮುಕ್ತ ಸಂಚಾರಕ್ಕೆ ಅನುವು ಮಡಿಕೊಡಬೇಕು. | ರಾಘವೇಂದ್ರ ಚಿಂದಿ ಸ್ಥಳಿಯ ನಾಗರಿಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net