ಹಟ್ಟಿಚಿನ್ನದಗಣಿ: ಹಿರೇನಗನೂರು ಗ್ರಾಮದ ಸಿವಾರ ವ್ಯಾಪ್ತಿಯಲ್ಲಿ ಬಿತ್ತನೆ ಮಾಡಿದ ಒಂದು ತಿಂಗಳಲ್ಲಿಯೇ ತೊಗರಿ ಬೆಳೆ ಒಣಗುತ್ತಿದ್ದು, ಕಳಪೆ ಬೀಜಗಳ ವಿತರಿಸಿದ್ದೇ ಕಾರಣ ಎಂದು ಕೃಷಿ ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ತೊಗರಿ ಮಾರಾಟಕ್ಕೆ ಮುಂದಾದ ರೈತರು
ಗುರುಗುಂಟಾದಲ್ಲಿರುವ ರೈತರ ಸಂಪರ್ಕ ಕೇಂದ್ರದಲ್ಲಿ ವಿವಿಧ ಕಂಪನಿಗಳ ಬೀಜಗಳಾದ ಬೀಜರಾಜ, ಲಕ್ಷ್ಮೀ ಅಗ್ರೋ ಸೀಡ್ಸ್, ಶ್ರೀ ಸಾಯಿ ಅಗ್ರೋ ಸೀಡ್ಸ್(ರೆಡ್ ಗ್ರಾಮ್ ಟಿಎಸ್-3ಆರ್) ಎಂಬ ಮುಂಗಾರು ಹಂಗಾಮಿನ ತೊಗರಿ ಬೀಜಗಳನ್ನು ರೈತರು ಖರೀದಿಸಿ ನೂರಾರು ಎಕರೆಗಳಲ್ಲಿ ಹಿರೇನಗನೂರು ಗ್ರಾಮ ಸೇರಿ ಗುರುಗುಂಟಾ ಹೋಬಳಿಯ ಬಹುತೇಕ ರೈತರು ಬಿತ್ತನೆ ಮಾಡಿದ್ದಾರೆ.
ಶ್ರೀ ಸಾಯಿ ಅಗ್ರೋ ಸೀಡ್ಸ್(ರೆಡ್ ಗ್ರಾಮ್ ಟಿಎಸ್-3ಆರ್)ಎಂಬ ತೊಗರಿ ಬೀಜಗಳನ್ನು ಹಿರೇನಗನೂರು ಸಿವಾರದ ಶಿವನಗೌಡ ಪಾಟೀಲ್ 12 ಎಕರೆ, ಬಸಪ್ಪ ಎಂಬುವರು 4 ಎಕರೆ, ಗಂಗಪ್ಪ 4.30 ಎಕರೆ, ಬಸಲಿಂಗಮ್ಮ ಸೂಗೂರು 8.08ಎಕರೆ ಹಾಗೂ ಬಸವರಾಜ ಪಾಟೀಲ್ ಎಂಬುವರು 10 ಎಕರೆ ಸೇರಿ ಸುತ್ತಲಿನ ಇತರ ರೈತರು ಬಿತ್ತನೆ ಮಾಡಿದ್ದು, ಈಗ ತೊಗರಿ ಅಲ್ಲಲ್ಲಿ ಒಣಗು(ಸಿಡಿ ಹಾಯ್ದು)ಗುತ್ತಿದೆ. ಇದರಿಂದ ನಷ್ಟದ ಭೀತಿ ಎದುರಾಗಿದ್ದು, ಸೂಕ್ತ ಕ್ರಮವಹಿಸಬೇಕೆಂದು ಒತ್ತಾಯಿಸಿದ್ದಾರೆ.
ಸಹಾಯಕ ನಿರ್ದೇಶಕ, ಕೃಷಿ ಇಲಾಖೆ ಲಿಂಗಸುಗೂರು
ಮಲ್ಲಿಕಾರ್ಜುನ್ ನಾಗರಾಳ
ಗುರುಗುಂಟಾ ರೈತ ಸಂಪರ್ಕ ಕೇಂದ್ರದಿಂದ ಅನೇಕ ರೈತರು ನಾನಾ ಕಂಪನಿಗಳ ತೊಗರಿ ಬೀಜಗಳನ್ನು ಖರೀದಿಸಿದ್ದಾರೆ. ನಾವು ನೀಡಿದ ಬೀಜಗಳಿಂದ ಸಮಸ್ಯೆ ಆಗಿರುವುದು ಗಮನಕ್ಕೆ ಬಂದಿಲ್ಲ. ಹಿರೇನಗನೂರು ಸಿವಾರದಲ್ಲಿ ಬೆಳೆ ಅಲ್ಲಲ್ಲಿ ಒಣಗುತ್ತಿರುವ ಮಾಹಿತಿ ರೈತರಿಂದ ಗೊತ್ತಾಗಿದ್ದು, ಜಮೀನಿಗಳಿಗೆ ಭೇಟಿ ನೀಡಿ ಮಾಹಿತಿ ಪಡೆದು, ಕೃಷಿ ವಿಜ್ಞಾನಿಗಳಿಗೆ ವರದಿ ನೀಡಲಾಗುವುದು.